Site icon Vistara News

CM Siddaramaiah : ಮಲೆ ಮಹದೇಶ್ವರನಿಗೆ 700 ಕೆ.ಜಿ. ಬೆಳ್ಳಿ ಕಾಣಿಕೆ ಕೊಟ್ರಾ ಸಿದ್ದರಾಮಯ್ಯ?

CM Siddaramaiah Male Mahadeshwara swami

ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಲೆ ಮಹದೇಶ್ವರ ಸ್ವಾಮಿಗೆ (Male Mahadeshwara Swamy) 700 ಕೆಜಿ ಬೆಳ್ಳಿಯನ್ನು ಕಾಣಿಕೆಯಾಗಿ (Siddaramaiah Gifted 700 KG Silver to Male Mahadeshwara Temple) ಕೊಟ್ಟಿದ್ದಾರಾ? ಬಿಜೆಪಿಯವರು ಧರ್ಮ ವಿರೋಧಿ, ಹಿಂದೂ ವಿರೋಧಿ ಎಂದೆಲ್ಲ ಆಪಾದಿಸುವ ಸಿದ್ದರಾಮಯ್ಯ ಅವರು ಇಷ್ಟೊಂದು ದೊಡ್ಡ ಪ್ರಮಾಣದ ಬೆಳ್ಳಿಯನ್ನು ದೇವಸ್ಥಾನಕ್ಕೆ ಕೊಟ್ಟಿದ್ದಾರಾ?

ಈ ಪ್ರಶ್ನೆ ಹುಟ್ಟಿಕೊಂಡಿರುವುದು ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್‌ (Former Congress MLA HP Manjunath) ಅವರ ಹೇಳಿಕೆಯ ಬಳಿಕ. ಶನಿವಾರ ಮೈಸೂರಿನಲ್ಲಿ ಕಾಂಗ್ರೆಸ್ ಮಾಧ್ಯಮ ಸಂವಾದ ನಡೆದಿತ್ತು. ಅದರಲ್ಲಿ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ಮಾಜಿ ಶಾಸಕರಾದ ಎಚ್.ಪಿ.ಮಂಜುನಾಥ್, ಎಂ.ಕೆ.ಸೋಮಶೇಖರ್, ಆಕಾಂಕ್ಷಿಗಳಾಗಿದ್ದ ಡಾ.ಬಿ.ಜೆ.ವಿಜಯಕುಮಾರ್, ಡಾ.ಸುಶೃತ್ ಗೌಡ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಎಚ್‌.ಪಿ ಮಂಜುನಾಥ್‌ ಅವರು, ಸಿಎಂ ಸಿದ್ದರಾಮಯ್ಯ ಅವರು ಮಲೆ ಮಹದೇಶ್ವರನಿಗೆ 700 ಕೆ.ಜಿ. ಬೆಳ್ಳಿ ಗಿಫ್ಟ್ ಕೊಟ್ಟಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಸಭೆ, ಸಮಾರಂಭಗಳಲ್ಲಿ ಸಾಕಷ್ಟು ಉಡುಗೊರೆ ಬಂದಿತ್ತು. ಬೆಳ್ಳಿ ಗದೆ, ಬೆಳ್ಳಿ ಕತ್ತಿ ಹೀಗೆ ಅನೇಕ ಗಿಫ್ಟ್‌ಗಳು ಸಿಕ್ಕಿದ್ದವು. ಅದೆಲ್ಲವನ್ನೂ ಸಿಎಂ ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಟ್ಟುಬಿಟ್ಟಿದ್ದಾರೆ. ಹಾಗಂತ ಅದನ್ನು ಪ್ರಚಾರ ಮಾಡಿಕೊಳ್ಳಲಿಲ್ಲ ಎಂದರು,

ಕಾಂಗ್ರೆಸ್‌ನವರು ಹಿಂದೂ ದೇವರ ವಿರೋಧಿಗಳು ಎಂಬಂತೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ನಿಜಕ್ಕೂ ನಾವೇ ನಿಜವಾದ ದೈವ ಭಕ್ತರು ಮತ್ತು ಹಿಂದುಗಳು ಎಂದು ಎಚ್‌.ಪಿ. ಮಂಜುನಾಥ್‌ ಹೇಳಿದರು.

ನಾವು ಸೀತಾರಾಮ ಅಂತ ನಮಸ್ಕಾರ ಮಾಡುತ್ತೇವೆ. ಬಿಜೆಪಿಯವರು ಜೈ ಶ್ರೀರಾಮ್ ಅಂತ ಕೂಗುತ್ತಾರೆ. ಯಾವ ರೀತಿ ಭಕ್ತಿ ಬೇಕು ಅಂತ ನಾವು ಡಿಸೈಡ್ ಮಾಡಬೇಕು ಎಂದು ಭಕ್ತಿಯ ವಿಚಾರದಲ್ಲಿ ಹೋಲಿಕೆ ಮಾಡಿದರು.

ಸಾಮಾನ್ಯ ಕಾರ್ಯಕರ್ತರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ ಎಂದ ಶಾಸಕ ತನ್ವೀರ್ ಸೇಠ್

ಮೈಸೂರಿಗೆ ಘೋಷಿಸಿರುವ ಬಿಜೆಪಿ ಅಭ್ಯರ್ಥಿ ಬಗ್ಗೆ ನಾನು ಮಾತನಾಡುವುದಿಲ್ಲ. ಹಾಲಿ ಸಂಸದರಾದ ಪ್ರತಾಪ್ ಸಿಂಹಗೆ ಟಿಕೆಟ್ ಸಿಕ್ಕಿಲ್ಲ. ಅದರ ಬಗ್ಗೆಯೂ ನಾವು ಮಾತನಾಡಲ್ಲ ಎಂದು ಹೇಳಿದ ಶಾಸಕ ತನ್ವೀರ್‌ ಸೇಠ್‌, ಜನರ ಸಮಸ್ಯೆಗೆ ಸ್ಪಂದಿಸಲು ನಮ್ಮ ಅಭ್ಯರ್ಥಿ ಲಭ್ಯವಾಗುತ್ತಾರೆ. ಬಡತನ, ಹಸಿವು ಮುಕ್ತಗೊಳಿಸಲು ರಾಜ್ಯ ಸರ್ಕಾರ ಕೊಟ್ಟಿರುವ ಯೋಜನೆಗಳು ಸಹಕಾರಿ ಆಗಲಿವೆ. ʻʻಪಂಚ ಗ್ಯಾರಂಟಿ ಯೋಜನೆಗಳು ನಮಗೆ ಶ್ರೀರಕ್ಷೆ. ಎಂದರು.

ತಂಬಾಕು ಬೆಳೆಗಾರರ ಸಮಸ್ಯೆ, ಮೈಸೂರಿಗೆ ಅಂತಾರಾಷ್ಟ್ರೀಯ ಮನ್ನಣೆ, ಉದ್ಯೋಗ ಸೃಷ್ಟಿ ನಮ್ಮ ಆದ್ಯತೆ.
ದ್ವೇಷ, ವಿಷ ಬೀಜ ಬಿತ್ತುವುದು ನಮ್ಮ ಕೆಲಸ ಅಲ್ಲ. ಮೌಲ್ಯಾಧಾರಿತ ರಾಜಕಾರಣ ಮಾಡುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಇದನ್ನೂ ಓದಿ : Lok Sabha Election 2024: ಸುಮಲತಾ ಆಗ್ತಾರಾ ರೆಬೆಲ್?;‌ 3 ಕ್ಷೇತ್ರದಲ್ಲೂ ಜೆಡಿಎಸ್‌ಗೆ ಬಂಡಾಯದ ಟ್ರಬಲ್‌!

ಒಕ್ಕಲಿಗರಿಗೆ ಟಿಕೆಟ್‌ ಕೊಟ್ಟಿದ್ದೇವೆ, ಸಮಾಜ ಒಗ್ಗಟ್ಟಾಗಲಿ ಎಂದ ಹರೀಶ್‌ ಗೌಡ

ʻʻಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗರಿಗೆ ಮಣೆ ಹಾಕಲ್ಲ ಅಂತ ಆರೋಪ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಒಕ್ಕಲಿಗ ಸಮಾಜಕ್ಕೆ ಅವಕಾಶ ಕೊಟ್ಟಿದೆ. ನಿಜವೆಂದರೆ ಬಿಜೆಪಿಯಲ್ಲಿ ಒಕ್ಕಲಿಗ ಸಮಾಜಕ್ಕೆ ಪ್ರಾಧಾನ್ಯತೆ ಸಿಗುತ್ತಿಲ್ಲʼʼ ಎಂದು ಹೇಳಿದರು ಶಾಸಕ ಕೆ. ಹರೀಶ್‌ಗೌಡ.

ʻʻ47 ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಮೈಸೂರಿನಲ್ಲಿ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಪಕ್ಷ ಒಕ್ಕಲಿಗ ಸಮಾಜಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದೆ. ನಮ್ಮ ಒಕ್ಕಲಿಗ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಬೇಕು‌. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ವೆಂಕಟೇಶ್ ಅವರನ್ನು ಮಂತ್ರಿ ಮಾಡಿ ಚಾಮರಾಜನಗರ ಉಸ್ತುವಾರಿ ಮಾಡಿದ್ದಾರೆ. ಮಂಡ್ಯದಲ್ಲಿ ಚಲುವರಾಯಸ್ವಾಮಿಗೆ ಮಂತ್ರಿ ಮಾಡಿ ಮಂಡ್ಯ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಾರೆ. ಬೇರೆ ಪಕ್ಷದಲ್ಲಿ ಒಕ್ಕಲಿಗ ಸಮಾಜಕ್ಕೆ ಪ್ರಾಧಾನ್ಯತೆ ನೀಡಿಲ್ಲ ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು.ʼʼ ಎಂದು ಹರೀಶ್‌ ಗೌಡ ವಿವರಣೆ ನೀಡಿದರು.

ಕೂಲಿ ಮಾಡಿದ್ದೇವೆ, ಸಂಬಳ ಕೊಡಿ ಎಂದ ಅಭ್ಯರ್ಥಿ ಎಂ ಲಕ್ಷ್ಮಣ್‌

ʻʻನಾವು ಕೂಲಿ ಮಾಡಿದ್ದೇವೆ, ಕೂಲಿಗೆ ಸಂಬಳ ಕೇಳುತ್ತೇವೆʼʼ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್ ಹೇಳಿದರು.

ʻʻಅಭಿವೃದ್ಧಿಯ ಮೇಲೆ ಜನರ ಬಳಿ ಮತ ಕೇಳುತ್ತೇವೆ. ಕಾಂಗ್ರೆಸ್ ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷದ ಸರ್ಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆʼʼ ಎಂದು ಹೇಳಿದರು ಲಕ್ಷ್ಮಣ್.

‌ʻʻಕಾಂಗ್ರೆಸ್ ನ ಹಿರಿಯ ಶಾಸಕ ತನ್ವೀರ್ ಸೇಠ್ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರ ಸಹಕಾರದೊಂದಿಗೆ ಮುಂದೆ ಸಾಗುತ್ತೇನೆʼʼ ಎಂದು ಹೇಳಿದ ಲಕ್ಷ್ಮಣ್‌ ಅವರು, ನನ್ನ ವಿರುದ್ಧ ಯಾವುದೇ ರೀತಿಯ ಗುರುತರ ಆರೋಪಗಳಿಲ್ಲ. ಶಾಸಕರು ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲಿಸಬೇಕೆಂದು ತೀರ್ಮಾನ ಮಾಡಿದ್ದಾರೆ. ನಮ್ಮ ಶಾಸಕರ ಅನುಮತಿಯ ಬಳಿಕವೇ ಕೆಲಸ ಮಾಡುತ್ತೇನೆ. ಅಭ್ಯರ್ಥಿ ಗೆಲುವಿಗೆ ಶಾಸಕರ ಪಾತ್ರ ಮುಖ್ಯʼʼ ಎಂದು ಸಂವಾದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷಣ್ ಹೇಳಿದರು.

Exit mobile version