ಮೈಸೂರು: ಕಾವೇರಿ ಹೋರಾಟದ ಪ್ರಧಾನ ಕಣಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ (Mysore ready for Karnataka Bandh) ಶುಕ್ರವಾರದ ಕರ್ನಾಟಕ ಬಂದ್‌ಗೆ (Karnataka Bandh) ಭಾರಿ ಬೆಂಬಲ ವ್ಯಕ್ತವಾಗಿದೆ. ಬಸ್, ಲಾರಿ, ಟ್ಯಾಕ್ಸಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಬೆಂಬಲ. ಮೈಸೂರು ನಗರ ಮತ್ತು ಜಿಲ್ಲಾ ಲಾರಿ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಮೈಸೂರು ಟ್ಯಾಕ್ಸಿ ಮಾಲೀಕರ ಸಂಘ, ಮೈಸೂರು ನಗರ ಆಟೋ ಚಾಲಕರ ಸಂಘ, ಹೋಟೆಲ್ ಅಸೋಸಿಯೇಷನ್ (Hotel Association) ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಹೀಗಾಗಿ ಬಂದ್ ಬಹುತೇಕ ಪೂರ್ಣವಾಗುವುದು ಖಚಿತವಾಗಿದೆ.
ಕಾವೇರಿ ಕ್ರಿಯಾ ಸಮಿತಿ ವತಿಯಿಂದ ರಸ್ತೆ ತಡೆ, ಕರ್ನಾಟಕ ರಕ್ಷಣಾ ವೇದಿಕೆ, ಮೈಸೂರು ರಕ್ಷಣಾ ವೇದಿಕೆ, ಕರ್ನಾಟಕ ಸೇನಾ ಪಡೆ ಮುಂತಾದ ಸಂಘಟನೆಗಳಿಂದ ಹೋರಾಟವೂ ಆಯೋಜನೆಗೊಂಡಿದೆ.
ನಾಳೆ ಮೈಸೂರಲ್ಲಿ ಎಲ್ಲೂ ಊಟ, ತಿಂಡಿ ಸಿಗಲ್ಲ!
ಮೈಸೂರು ಹೋಟೆಲ್ ಮಾಲೀಕರ ಸಂಘ ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದೆ. ಸ್ಟಾರ್ ಹೋಟೆಲ್‌ನಿಂದ ಫುಟ್‌ಪಾತ್ ಗಾಡಿವರೆಗೆ ಎಲ್ಲವೂ ಬಂದ್ ಮಾಡುತ್ತೇವೆ ಎಂದು ಸಂಘ ಹೇಳಿದೆ.
ರೈತರ ಹೋರಾಟಕ್ಕೆ ಬೆಂಬಲ ನೀಡುವ ಬಗ್ಗೆ ಜಿಲ್ಲಾ ಹೋಟೆಲ್ ಮಾಲೀಕರ ಸಂಘದಿಂದ ಸಭೆ ನಡೆದು ತೀರ್ಮಾನ ಕೈಗೊಳ್ಳಲಾಗಿದೆ. ʻʻ
ಬಂದ್‌ಗೆ ಬೆಂಬಲ ಕೊಡುವುದಿಂದ ಸುಮಾರು 50 ಕೋಟಿ ರೂ. ನಷ್ಟ ಆಗುತ್ತದೆ. ಆದರೆ ಅದಕ್ಕಿಂತ ಕಾವೇರಿ ನೀರು ಮುಖ್ಯ. ನಾವು ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಎಲ್ಲಾ ವಹಿವಾಟು ಬಂದ್ ಮಾಡುತ್ತೇವೆ. ಸ್ಟಾರ್ ಹೋಟೆಲ್, ಬೀದಿ ವ್ಯಾಪಾರ, ಬೇಕರಿ ಸೇರಿ ಎಲ್ಲಾ ಬಂದ್ ಮಾಡುತ್ತೇವೆ. ಆ ಮೂಲಕ ಬಂದ್‌ಗೆ ನಮ್ಮ ಬೆಂಬಲ ಇರುತ್ತದೆ.
ಜತೆಗೆ ಅರಮನೆಯ ಕೋಟೆ ಅಂಜನೇಯ ದೇವಸ್ಥಾನದ ಬಳಿ ಹಾಜರಾಗಿ ಹೋರಾಟದಲ್ಲಿ ಭಾಗಿಯಾಗಲು ತೀರ್ಮಾನ ಮಾಡಿದ್ದೇವೆ ಎಂದು ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.
ಗುಲಾಬಿ ಹೂವು ನೀಡಿ ಬಂದ್‌ಗೆ ಬೆಂಬಲ ಕೋರಿದ ವಿಷ್ಣು ಅಭಿಮಾನಿಗಳು
ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕರು ಮತ್ತು ವರ್ತಕರಿಗೆ ಹೂವು ನೀಡಿ ಬಂದ್‌ಗೆ ವಿನೂತನ ರೀತಿಯಲ್ಲಿ ಬೆಂಬಲ ಕೋರಲಾಯಿತು. ಮೈಸೂರಿನ ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿಗಳಿಗೆ ತೆರಳಿ ಗುಲಾಬಿ ಹೂವುಗಳನ್ನು ನೀಡಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಕರ್ನಾಟಕ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಯಿತು.
ರಸ್ತೆ ಬದಿಗಳಲ್ಲಿ ಸಾಗುತ್ತಿದ್ದ ಸಾರ್ವಜನಿಕರಿಗೂ ಗುಲಾಬಿ ಹೂವುಗಳನ್ನು ನೀಡಿದರು ವಿಷ್ಣುವರ್ಧನ್ ಅಭಿಮಾನಿ ಬಳಗದ ಸದಸ್ಯರು.
ಬಾಗಿಲು ತೆಗೆಯಬೇಡಿ, ಗಲಾಟೆಗೆ ನಾವು ಹೊಣೆಯಲ್ಲ: ವರ್ತಕರಿಗೆ ಎಚ್ಚರಿಕೆ
ʻʻನಾಳೆ ಅಂಗಡಿ ಬಾಗಿಲು ತೆಗೆಯಬೇಡಿ. ಗಲಾಟೆಯಾದರೆ ನಾವು ಹೊಣೆಯಲ್ಲʼʼ ಎಂದು ಮಾಜಿ ಮೇಯರ್ ಆರ್ ಲಿಂಗಪ್ಪ ನೇತೃತ್ವದಲ್ಲಿ ವ್ಯಾಪಾರಸ್ಥರಿಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗಿದೆ.
ಸರಸ್ವತಿಪುರಂ ಬಡಾವಣೆಯ ಸಲೂನ್ ಶಾಪ್, ಜೆರಾಕ್ಸ್, ಬಟ್ಟೆ, ಪುಸ್ತಕ, ದಿನಸಿ ಅಂಗಡಿಗಳಿಗೆ ಕರಪತ್ರ ಹಂಚಿದ ಅವರು, ʻʻಕೆಲವರು ಅಂಗಡಿ ಓಪನ್ ಮಾಡಬಹುದು. ನಾಳೆ ಬಂದು ಅಂಗಡಿ ಬಾಗಿಲು ಮುಚ್ಚಿಸುವುದು ಚೆನ್ನಾಗಿ ಕಾಣುವುದಿಲ್ಲ. ಒಂದು ವೇಳೆ ಯಾರೋ ಕಲ್ಲು ಹೊಡೆದರೆ ತೊಂದರೆ ಆಗುತ್ತದೆ. ಹೀಗಾಗಿ ಕರಪತ್ರ ಹಂಚಿ ಅರಿವು ಮೂಡಿಸುತ್ತಿದ್ದೇವೆ. ವ್ಯಾಪಾರಸ್ಥರೂ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಆರ್.ಲಿಂಗಪ್ಪ ವಿಸ್ತಾರ ನ್ಯೂಸ್‌ಗೆ ತಿಳಿಸಿದರು.
ಇದನ್ನೂ ಓದಿ: Karnataka Bandh : ಕರ್ನಾಟಕ ಬಂದ್‌ಗೆ ನೂರಾರು ಸಂಘಟನೆ ಬೆಂಬಲ; ಯಾವ ಸೇವೆ ಲಭ್ಯ? ಯಾವುದು ಅಲಭ್ಯ?
ಕೇಳ್ರಪ್ಪೋ ಕೇಳಿ.. ಮೈಸೂರಿನಲ್ಲಿ ಆಟೋರಲ್ಲಿ ಅನೌನ್ಸ್‌ಮೆಂಟ್
ಕೇಳ್ರಪ್ಪೋ ಕೇಳಿ….! ನಾಳೆಯ ಬಂದ್‌ಗೆ ನೀವೆಲ್ಲರೂ ಬೆಂಬಲ ಕೊಡಬೇಕು ಎಂದು ಆಟೋ ರಿಕ್ಷಾದ ಮೂಲಕ ಅನೌನ್ಸ್‌ಮೆಂಟ್ ಮೈಸೂರಿನಲ್ಲಿ ನಡೆದಿದೆ.
ಆಟೋ ರಿಕ್ಷಾಗಳಿಗೆ ಧ್ವನಿವರ್ಧಕ ಅಳವಡಿಸಿ ಮೈಸೂರಿನ ಪ್ರಮುಖ ರಸ್ತೆ, ವೃತ್ತ, ಬಡಾವಣೆಗಳಲ್ಲಿ ಸಂಚಾರ ನಡೆಸಲಾಗುತ್ತಿದೆ. ಕಾವೇರಿ ನೀರಿಗಾಗಿ ಒಂದು ದಿನ ವಹಿವಾಟು ಸ್ಥಗಿತಗೊಳಿಸಿ, ಬಂದ್‌ಗೆ ಸಹಕಾರಿ ನೀಡಿ ಎಂದು ಮನವಿ ಮಾಡಲಾಗುತ್ತಿದೆ.