ಮೈಸೂರು: ಜನಸ್ಪಂದನದ ಹೆಸರಿನಲ್ಲಿ ಬಿಜೆಪಿ ಕಾರ್ಯಕ್ರಮ ಮಾಡಿದ್ದು ಕಾಂಗ್ರೆಸ್ ಪಕ್ಷವನ್ನು ವಿರೋಧಿಸಲು ಹಾಗೂ ಮೋಜಿಗಾಗಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಪ್ರಧಾನಿ ಮೋದಿಯವರು ಪ್ರತಿ ತಿಂಗಳು ನಡೆಸುವ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮಂಕೀ ಬಾತ್ ಎಂದು ಟೀಕಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧ್ರುವನಾರಾಯಣ, ಸಚಿವರ ನಿಧನದಿಂದ ಶೋಕಾಚರಣೆ ಇರುವಾಗ ಬಿಜೆಪಿ ನಾಯಕರು ಡ್ಯಾನ್ಸ್ ಮಾಡುತ್ತಾರೆ. ರಾಜ್ಯದಲ್ಲಿ ಪ್ರವಾಹದಿಂದ ಜನ ಸಂಕಷ್ಟದಲ್ಲಿ ಇರುವಾಗ ಡ್ಯಾನ್ಸ್ ಮಾಡುವುದು ಶೋಚನೀಯ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ತಾಕತ್ತು, ಧಮ್ ಎನ್ನುವ ಪದ ಬಳಸುತ್ತಾರೆ.
ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ದೊಡ್ಡಬಳ್ಳಾಪುರದ ಕಾರ್ಯಕ್ರಮ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟು ನಡೆಸಿದ್ದಾರೆ. ಜನೋತ್ಸವ ಎಂಬ ಹೆಸರನ್ನು ಜನಸ್ಪಂದನ ಕಾರ್ಯಕ್ರಮ ಎಂದು ಬದಲಾಯಿಸಿದ್ದೇಕೆ? ಹೆಸರಿಗೆ ಜನಸ್ಪಂದನೆ, ಇದು ಮೋಜಿನ ಕಾರ್ಯಕ್ರಮ.
ವಿರೋಧ ಪಕ್ಷವನ್ನು ಟಿಕೀಸುವ ಕಾರ್ಯಕ್ರಮ ಆಗಿತ್ತು. ಭ್ರಷ್ಟಾಚಾರ ಎಂದು ನಮ್ಮನ್ನು ಟೀಕಿಸುವ ಬಿಜೆಪಿಯವರು, ಧೈರ್ಯವಿದ್ದರೆ ಅಂದೇ ಪ್ರಶ್ನಿಸಬಹುದಿತ್ತು. ಕೇಂದ್ರ ಸರ್ಕಾರ ನಿಮ್ಮದಾಗಿತ್ತು, ಎಲ್ಲ ಇಲಾಖೆಗಳು ನಿಮ್ಮ ಬಳಿಯೇ ಇದ್ದವು. ವಿರೋಧ ಪಕ್ಷದಲ್ಲಿದ್ದ ನೀವು ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಬೇಕಿತ್ತು. ಅಧಿಕಾರಕ್ಕೆ ಬಂದು 3 ವರ್ಷವಾದರೂ ಡಬಲ್ ಇಂಜಿನ್ ಸರ್ಕಾರ ಯಾಕೆ ತನಿಖೆಗೆ ಆದೇಶ ಮಾಡಲಿಲ್ಲ? ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಯೋಗದಿಂದ ಸಿಎಂ ಆದವರು, ಯೋಗ್ಯತೆಯಿಂದ ಅಲ್ಲ ಎಂದ ಧ್ರುವನಾರಾಯಣ, ಯೋಗದಿಂದ ಬಂದಿದ್ದು ಕ್ಷಣಿಕ. ಯೋಗ್ಯತೆಯಿಂದ ಬಂದಿದ್ದು ಶಾಶ್ವತ. ಕಾಂಗ್ರೆಸ್ ಸರ್ಕಾರ – ಬಿಜೆಪಿ ಸರ್ಕಾರದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದರು. ಯಡಿಯೂರಪ್ಪ ಸಾರಥ್ಯ, ಬೊಮ್ಮಾಯಿ ನೇತೃತ್ವ ಎಂದು ನಳೀನ್ ಕುಮಾರ್ ಹೇಳಿದ್ದಾರೆ. ಹಾಗಾದರೆ ಪಕ್ಷದ ಅಧ್ಯಕ್ಷರಾಗಿ ನಿಮ್ಮ ಪಾತ್ರ ಏನು? ಭಜನಾ ಮಂಡಳಿ ಅಧ್ಯಕ್ಷರಾಗಲು ನಳಿನ್ ಕುಮಾರ್ ಕಟೀಲ್ ಸರಿಯಿದ್ದಾರೆ ಎಂದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ರಾಹುಲ್ ಗಾಂಧಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಭಯ ಬಂದಿದೆ. ಪೂಜಾರಿ ಬಾಯಲ್ಲಿ ಮಂತ್ರ ಬರಬೇಕಿತ್ತು. ಆದರೆ, ಬಂದಿದ್ದು ಬರೀ ಉಗುಳು. ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಈಗ ಮಂಕೀ ಬಾತ್ ಆಗಿದೆ ಎಂದರು.
ಇದನ್ನೂ ಓದಿ | Mann ki Baat 2022 | ಕೋಲಾರದ ಬೃಹತ್ ರಾಷ್ಟ್ರಧ್ವಜ; ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರಶಂಸೆ