ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (Karnataka State Open University) ಬಿಕಾಂ ಕಂಪ್ಯೂಟರ್ ಇನ್ ಬ್ಯುಸಿನೆಸ್ (Computer in Business) ಪರೀಕ್ಷೆಯನ್ನು ಮತ್ತೆ ನಡೆಸಲು (Re examination) ನಿರ್ಧರಿಸಿದೆ. ಸೆಪ್ಟೆಂಬರ್ 21ರಂದು ನಡೆದಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ (KSOU Exam) ಒಂದು ದಿನ ಮೊದಲೇ ವಾಟ್ಸ್ ಆಪ್‌ನಲ್ಲಿ ಹರಿದಾಡಿತ್ತು. ಅದನ್ನು ಎರಡು ಸಾವಿರ ರೂ.ಗಳಿಗೆ ಮಾರಾಟ (Question paper sold) ಮಾಡಲಾಗಿದೆ ಎಂಬ ಬಗ್ಗೆ ದೂರು ದಾಖಲಾಗಿತ್ತು. ಇದೀಗ ವಿವಿಯು ಮರು ಪರೀಕ್ಷೆ ನಡೆಸಲು ಮುಂದಾಗಿದ್ದು, ಮರು ಪರೀಕ್ಷೆ ದಿನಾಂಕವನ್ನು ಸದ್ಯವೇ ಪ್ರಕಟಿಸಲಾಗಿದೆ.
ಪರೀಕ್ಷೆಗೆ ಒಂದು ದಿನ ಮೊದಲೇ ವಿಶ್ವವಿದ್ಯಾಲಯದ ಬಿಕಾಂನ ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪ್ರಶ್ನೆ ಪತ್ರಿಕೆ ಕೆಲವರ ಕೈಯಲ್ಲಿತ್ತು. ಕೆಎಸ್‌ಓಯು ಮಂಗಳೂರು (KSOU Mangalore Center) ಕೇಂದ್ರದ ಸಿಬ್ಬಂದಿ 2000 ರೂ.ಗೆ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪ್ರಶ್ನೆ ಪತ್ರಿಕೆಯನ್ನು ವಾಟ್ಸಾಪ್ ಮೂಲಕ ಆರೋಪಿಗಳಿಗೆ ಕಳುಹಿಸಿರುವ ಶಂಕೆ ವ್ಯಕ್ತವಾಗಿತ್ತು. ಪರೀಕ್ಷೆ ದಿನ ನೀಡಿದ ಪ್ರಶ್ನೆ ಪತ್ರಿಕೆ ಹಾಗೂ ಮಾರಾಟವಾದ ಪ್ರಶ್ನೆ ಪತ್ರಿಕೆ ಎರಡು ಒಂದೇ ಆಗಿದ್ದವು. ಈ ಬಗ್ಗೆ ಚಂದು.ಹೆಚ್.ಎಸ್. ಎಂಬ ವಿದ್ಯಾರ್ಥಿ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಶ್ನೆ ಪತ್ರಿಕೆ ಮಾರಾಟ ಪ್ರಕರಣದಲ್ಲಿ ಜಯಲಕ್ಷ್ಮಿಪುರಂ ಪೊಲೀಸರು ನವೀನ್ ಮತ್ತು ಮುರಳೀಧರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಮಾರಾಟ
ವಿದ್ಯಾರ್ಥಿಗಳು ಭಾರಿ ಕಷ್ಟಪಟ್ಟು ಓದಿರುತ್ತಾರೆ. ಸಿಬ್ಬಂದಿಗಳು ಈ ರೀತಿ ಮೋಸದಾಟ ಆಡುವುದರಿಂದ ಅವರಿಗೆ ಅನ್ಯಾಯವಾಗುತ್ತದೆ ಎಂಬ ಮಾತು ಕೇಳಿಬಂದಿದೆ. ಅದಕ್ಕಿಂತಲೂ ಹೆಚ್ಚಾಗಿ ಮುಕ್ತ ವಿವಿಯಲ್ಲಿ ಓದುವ ಹೆಚ್ಚಿನವರು ಬೇರೆ ಬೇರೆ ಉದ್ಯೋಗಗಳಲ್ಲಿ ಇದ್ದಾರೆ. ಅವರು ತಮ್ಮ ಕೆಲಸ ಕಾರ್ಯಗಳ ನಡುವೆ ಕಷ್ಟಪಟ್ಟು ಸಮಯ ಹೊಂದಾಣಿಕೆ ಮಾಡಿಕೊಂಡು ಓದುತ್ತಿರುತ್ತಾರೆ. ಹೆಚ್ಚಿನವರಿಗೆ ಒಂದು ದಿನ ಪರೀಕ್ಷೆಗೆ ಅಟೆಂಡ್ ಆಗಲೂ ಆಗದಷ್ಟು ಕೆಲಸದ ಒತ್ತಡ ಇರುವುದಿಲ್ಲ, ಹೆಚ್ಚಿನವರಿಗೆ ರಜೆಯೂ ಸಿಗುವುದಿಲ್ಲ. ಇಂಥವರಿಗೆ ಮರು ಪರೀಕ್ಷೆ ಕೂಡಾ ಒಂದು ದೊಡ್ಡ ಹೊರೆಯೇ. ಹೀಗಾಗಿ ವಿಶ್ವವಿದ್ಯಾಲಯ ಈ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಬೇಕು, ಈ ಮೂಲಕ ವಿದ್ಯಾರ್ಥಿಗಳಿಗೆ ಆಗುವ ತೊಂದರೆಯನ್ನು ತಡೆಯುವುದು ಮಾತ್ರವಲ್ಲ, ವಿವಿಯ ಘನತೆಯನ್ನು ಉಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಇದನ್ನೂ ಓದಿ: KSOU Scam: ಕೆಎಸ್‌ಒಯು ಹಗರಣದ ತನಿಖೆಗೆ ಸಿಬಿಐ ಎಂಟ್ರಿ