ಮೈಸೂರು: ವಿಜಯಪುರದ ರಾಜಗುರು ಫುಡ್ಸ್ (Rajaguru Foods) ಗೋದಾಮಿನಲ್ಲಿ ಭಾರಿ ಯಂತ್ರ ಕುಸಿದು (godown tragedy) ಅದರಡಿ ಸಿಲುಕಿ ಏಳು ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟ ಘಟನೆಯ ಬೆನ್ನಿಗೇ ಮೈಸೂರಿನ ನಂಜನಗೂಡಿನಲ್ಲಿ (Mysore News) ತಲೆಗೆ ಮೆಷಿನ್ ಹೊಡೆದು ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ (Labourer death). ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಕೃಷಿ ಜಿಯೋ ಪ್ಯಾಕ್ ಪ್ರೈವೇಟ್ ಲಿಮಿಟೆಡ್ (Krishi Geopack Private ltd) ಕಾರ್ಖಾನೆಯಲ್ಲಿ ನಡೆದ ಘಟನೆಯಲ್ಲಿ ಆಶೀಶ್ ಸುಖದಾಸ್ ಪಾಟ್ಲೆ (24) ಮೃತಪಟ್ಟಿದ್ದಾರೆ. ಇವರು ಮಹಾರಾಷ್ಟ್ರ ಮೂಲದವರಾಗಿದ್ದು, ಉದ್ಯೋಗ ಅರಸಿ ಇಲ್ಲಿಗೆ ಬಂದಿದ್ದರು.
ಆಶೀಶ್ ಅವರು ನಾಲ್ಕು ವರ್ಷಗಳಿಂದ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಅನುಭವಿ ಕಾರ್ಮಿಕರಾಗಿರುವ ಇವರು ಮೆಷಿನ್‌ಗೆ ದಾರವನ್ನು ಹಾಕುತ್ತಿದ್ದ ವೇಳೆ ತಲೆ ಮೆಷಿನ್‌ಗೆ ತಾಕಿದೆ. ತಲೆಗೆ ಮೆಷಿನ್ ಹೊಡೆದ ಪರಿಣಾಮ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ದೇಹ ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರದಲ್ಲಿ ಏನಾಗಿತ್ತು?
ವಿಜಯಪುರ ಕೈಗಾರಿಕಾ ಪ್ರದೇಶದ (Vijayapura News) ರಾಜಗುರು ಇಂಡಸ್ಟ್ರೀಸ್ ಗೋದಾಮಿನಲ್ಲಿ ಮೆಕ್ಕೆ ಜೋಳದ ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳಡಿ 10ಕ್ಕೂ ಹೆಚ್ಚು ಕಾರ್ಮಿಕರು ಅದರಡಿ ಸಿಲುಕಿದ್ದರು. ಫುಡ್ ಪ್ರೊಸೆಸಿಂಗ್ ಯುನಿಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು ಬಿಹಾರ ಮೂಲದ ಕಾರ್ಮಿಕರಾಗಿದ್ದರು. ಕಳೆದ ಹಲವು ವರ್ಷಗಳಿಂದ ರಾಜಗುರು ಇಂಡಸ್ಟ್ರೀಸ್ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಮಿಕರನ್ನು ರಕ್ಷಿಸಲು ನಿರಂತರವಾಗಿ 15 ಗಂಟೆಗಳಿಂದ 4 ಕ್ರೇನ್ ಹಾಗೂ ಜೆಸಿಬಿಗಳ ಮೂಲಕ ಸಂಸ್ಕರಣಾ ಘಟಕವನ್ನು ಎತ್ತಿ, ಅದರಡಿ ಸಿಲುಕಿದ ಕಾರ್ಮಿಕರ ಮೃತದೇಹ ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: Lokayukta Raid: ಬೆಂಗಳೂರಿನ 11 ಕಡೆ ಲೋಕಾಯುಕ್ತ ದಾಳಿ; ಭೂ ಮಾಪನ ಇಲಾಖೆ ಕಚೇರಿಗಳಲ್ಲಿ ಶೋಧ
ಇದುವರೆಗೆ ಐವರು ಮೃತ ಕಾರ್ಮಿಕರ ದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇನ್ನೂ ಇಬ್ಬರು ಕಾರ್ಮಿಕರನ್ನು ಹೊರತೆಗೆಯಲು ಕಾರ್ಯಾಚರಣೆ ಮುಂದುವರಿದಿದೆ. ಅವರೆಲ್ಲಾ ಬಹುತೇಕ ಬದುಕಿರುವ ಸಾಧ್ಯತೆಗಳು ಕ್ಷೀಣ ಎನ್ನಲಾಗುತ್ತಿದೆ. ಒಟ್ಟು 11 ಕಾರ್ಮಿಕರು ಅವಘಡದಲ್ಲಿ ಸಿಲುಕಿದ್ದರು. ಘಟನಾ ಸಂದರ್ಭದಲ್ಲಿ ಮೂವರು ಬಚಾವ್ ಆಗಿದ್ದರು. ಕಾರ್ಯಾಚರಣೆ ವೇಳೆ ಓರ್ವನನ್ನು ಸಿಬ್ಬಂದಿ ರಕ್ಷಿಸಿದ್ದರು.