ಮೈಸೂರು: ಮೈಸೂರಿನ (Mysore News) ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಚಿರತೆಯೊಂದು (Wild Animals) ಮೃತಪಟ್ಟಿದೆ. ಹೆಡಿಯಾಲ ಮತ್ತು ಚಂಗೌಡನಹಳ್ಳಿಗೆ ಹೋಗುವ ದಾರಿಯ ಜಮೀನೊಂದರಲ್ಲಿ ಚಿರತೆ ಕಳೇಬರ ಪತ್ತೆ ಆಗಿದೆ. ಸಾವಿಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.
ಅಲ್ಲಲ್ಲಿ ಚಿರತೆ ಹೆಜ್ಜೆಯ ಗುರುತು ಇರುವುದರಿಂದ ಅನುಮಾನ ವ್ಯಕ್ತವಾಗಿದೆ. ಸುಮಾರು 3 ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಯಾರೋ ಕಿಡಿಗೇಡಿಗಳು ಸಾಯಿಸಿ ತಂದು ಬಿಸಾಡಿರಬಹುದೇನೋ? ಅಥವಾ ವಿಷ ಸೇವಿಸಿ ಪ್ರಾಣ ಕಳೆದು ಕೊಂಡಿರಬಹುದೇ? ಎಂಬ ಅನುಮಾನ ವ್ಯಕ್ತವಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಅರಣ್ಯಧಿಕಾರಿಗಳಾದ ನಾರಾಯಣ್, ಬಂಡೀಪುರ ವೈದ್ಯಾಧಿಕಾರಿಗಳಾದ ಡಾ. ಮಿರ್ಜಾ ವಸೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: Mysore News : ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಕ್ರಿಮಿನಾಶಕ ಸೇವಿಸಿದ ಚಾಲಕ!
ಹಸುವಿನ ಮೇಲೆ ಹುಲಿ ದಾಳಿ.
ಮೈಸೂರಿನ ನಂಜನಗೂಡು ತಾಲೂಕಿನ ಮಾದನಹಳ್ಳಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹಸುವಿನ ಮೇಲೆ ದಾಳಿ ಮಾಡಿದೆ. ಜಾನುವಾರುಗಳನ್ನು ಮೇಯಿಸುವ ಸಂದರ್ಭದಲ್ಲಿ ಹುಲಿ ದಾಳಿ ನಡಿಸಿ, ಗಾಯಗೊಳಿಸಿದೆ. ಗ್ರಾಮದ ಮೂರ್ತಿ ಎಂಬುವವರಿಗೆ ಸೇರಿದ ಹಸು ಗಾಯಗೊಂಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಕಿಡಿಕಾರಿದ್ದಾರೆ.
ಹುಲಿಯ ಹೆಜ್ಜೆ ಗುರುತುಗಳು ಪತ್ತೆ ಆಗಿದ್ದು, ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಮೀನುಗಳಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹುಲಿ ಸೆರೆ ಹಿಡಿಯಲು ಬೋನು ಅಳವಡಿಸಬೇಕು ಎಂದು ರೈತ ಸಂಘ ಮತ್ತು ಟ್ರ್ಯಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಪರಶಿವಮೂರ್ತಿ ಒತ್ತಾಯಿಸಿದ್ದಾರೆ.
ಜಮೀನುಗಳಿಗೆ ನುಗ್ಗಿದ ಕಾಡಾನೆಗಳು
ಮೈಸೂರಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಕಾಡಾನೆಗಳು ಲಗ್ಗೆ ಇಟ್ಟಿವೆ. ಕಾಡಾನೆಗಳ ದಾಳಿಗೆ ಬೆಳೆದ ಬೆಳೆಗಳೆಲ್ಲವೂ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ನೆಲ್ಲಿತಾಳಪುರ ಗ್ರಾಮದ ರೈತರಾದ ಮನೋಹರ್, ದಿನೇಶ್ ಎಂಬುವವರ ಜಮೀನಿಗೆ ಕಾಡಾನೆಗಳು ನುಗ್ಗಿವೆ. ಸುಮಾರು ಎಂಟು ಎಕರೆಯಷ್ಟು ಬಾಳೆ ಬೆಳೆ ತುಳಿದು ಹಾಕಿವೆ. ಜಮೀನ ಸುತ್ತಲು ಅಳವಡಿಸಲಾಗಿದ್ದ ಸೋಲಾರ್ ತಂತಿ ಬೇಲಿ ಕಿತ್ತು ಹಾಕಿವೆ. ಸಾಲ ಮಾಡಿ ಬೆಳೆದ ಬೆಳೆ ಕೈಸೇರುವಷ್ಟರಲ್ಲಿ ಕಾಡು ಪ್ರಾಣಿಗಳು ಪಾಲಾಗಿವೆ. ಆನೆಗಳ ಹಾವಳಿಯಿಂದ ಜಮೀನುಗಳಿಗೆ ಹೋಗಲು ಬೆದರುವಂತಾಗಿದೆ. ಕಾಡಾನೆಗಳ ತಡೆಗೆ ರೈಲ್ವೆ ಕಂಬಿಯನ್ನು ಅಳವಡಿಸಬೇಕು. ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ