Site icon Vistara News

Mahisha Dasara : ಮುಗಿಯದ ಮಹಿಷ ದಸರಾ ಗೊಂದಲ; ನಾಳೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೂ ನಿರ್ಬಂಧ

Chamundi hills Mysore

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Chamundi Hills) ಮಹಿಷ ದಸರಾ (Mahisha Dasara) ಮತ್ತು ಚಾಮುಂಡಿ ಚಲೋ (Chamundi Chalo) ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ಎರಡು ಗುಂಪುಗಳ ನಡುವೆ ಸಂಘರ್ಷದ ಸ್ಥಿತಿ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮೈಸೂರು ಪೊಲೀಸ್‌ ಕಮೀಷನರ್‌ ಅವರು ಇಡಿ ನಗರದಲ್ಲಿ ಸೆಕ್ಷನ್‌ 144 ಅಡಿ ನಿಷೇಧಾಜ್ಞೆ (Section 144) ಜಾರಿಗೊಳಿಸಿದ್ದರೆ, ಅದರ ನಡುವೆಯೇ ಜಿಲ್ಲಾಧಿಕಾರಿಗಳು ಇನ್ನೊಂದು ಆದೇಶ ಹೊರಡಿಸಿ ಬೆಳಗ್ಗಿನಿಂದ ಸಂಜೆವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೇ ನಿರ್ಬಂಧ ವಿಧಿಸಿದ್ದಾರೆ.

ಮಹಿಷ ದಸರಾ ಆಚರಣೆ ಸಮಿತಿ ಆಯೋಜಿಸಿದ್ದ ಮಹಿಷ ದಸರಾಕ್ಕೆ ಮೊದಲು ಅವಕಾಶ ನಿರಾಕರಿಸಿದ್ದ ಪೊಲೀಸರು ಇದೀಗ ಷರತ್ತುಬದ್ಧ ಅನುಮತಿಯನ್ನು ನೀಡಿದ್ದಾರೆ. ಅಂದರೆ ಚಾಮುಂಡಿ ಬೆಟ್ಟದ ಮೇಲೆ ಮಹಿಷನ ಮೂರ್ತಿಗೆ ಮಾಲಾರ್ಪಣೆ ಮಾಡುವುದು, ಮೆರವಣಿಗೆ ನಡೆಸುವ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಬದಲಾಗಿ ಪುರಭವನದಲ್ಲಿ ಮಾತ್ರ ಕಾರ್ಯಕ್ರಮ ನಡೆಸಬಹುದು ಎಂದಿದ್ದಾರೆ. ಅದೇ ಹೊತ್ತಿಗೆ ಬಿಜೆಪಿ ಆಯೋಜಿಸಿದ ಚಾಮುಂಡಿ ಚಲೋ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಲಾಗಿದೆ.

ಪೊಲೀಸ್‌ ಕಮೀಷನರ್‌ ರಮೇಶ್‌ ಬಾನೋತ್‌ ಹೇಳಿದ್ದೇನು?

ಮಹಿಷ ದಸರಾ ವಿಚಾರದಲ್ಲಿ ಏನಾದರೂ ಗೊಂದಲ ನಿರ್ಮಾಣವಾಗಬಹುದು ಎಂಬ ಕಾರಣಕ್ಕಾಗಿ ನಗರದಾದ್ಯಂತ ನಿಷೇಧಾಜ್ಞೆ ವಿಧಿಸಲಾಗುವುದು ಎಂದು ಪೊಲೀಸ್‌ ಕಮೀಷನರ್‌ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದರು. ಇದರಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ನಾಲ್ಕೂ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುವುದು, ಆದರೆ, ಭಕ್ತರ ಪ್ರವೇಶಕ್ಕೆ ನಿರ್ಬಂಧವಿರುವುದಿಲ್ಲ ಎಂದು ಹೇಳಿದ್ದರು.

ನಗರದಲ್ಲಿ ಹಾಕಿರುವ ನಿಷೇಧಾಜ್ಞೆ ಮದುವೆ, ಸಭೆ, ಸಮಾರಂಭ, ಶಾಲಾ- ಕಾಲೇಜಿಗೆ ಅನ್ವಯ ಆಗುವುದಿಲ್ಲ
ಕಾನೂನು ಮತ್ತು ಸುವ್ಯವಸ್ಥೆ ಕೆಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದರು.

ಬಳಿಕ ಜಿಲ್ಲಾಧಿಕಾರಿ ಹೇಳಿದ್ದೇನು?

ಈ ನಡುವೆ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ಪ್ರತ್ಯೇಕ ಆದೇಶವನ್ನು ಹೊರಡಿಸಿ, ಅಕ್ಟೋಬರ್‌ 13ರಂದು ಚಾಮುಂಡಿಬೆಟ್ಟಕ್ಕೆ ಭಕ್ತರಿಗೂ ಪ್ರವೇಶ ನಿರ್ಬಂಧವಿದೆ ಎಂದಿದ್ದಾರೆ.

ನಾಳೆ ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಬಂಧಿಸಿ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಆದರೆ, ಇದು ಚಾಮುಂಡಿಬೆಟ್ಟದಲ್ಲಿ ಇರುವ ನಿವಾಸಿಗಳಿಗೆ, ತುರ್ತು ಸೇವೆಗಳಿಗೆ ಹಾಗೂ ಅಧಿಕೃತ ಅಧಿಕಾರಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಕೂಡಾ ತಿಳಿಸಿದ್ದಾರೆ.

ಇದನ್ನೂ ಓದಿ: Mahisha Dasara : ಮಹಿಷ ದಸರಾಕ್ಕೆ ಷರತ್ತುಬದ್ಧ ಅನುಮತಿ, ಸಭಾ ಕಾರ್ಯಕ್ರಮ ಓಕೆ, ಸೆಕ್ಷನ್‌ 144 ಜಾರಿ

ಮಾಧ್ಯಮ ಹೇಳಿಕೆ, ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ

ಈ ನಡುವೆ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಮಾಧ್ಯಮ ಹೇಳಿಕೆ, ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ʻʻನಮಗೆ ಜನಪ್ರತಿನಿಧಿ, ಸಾಮಾನ್ಯ ವ್ಯಕ್ತಿ ಎಂಬ ವ್ಯತ್ಯಾಸ ಇಲ್ಲ. ಇದುವರೆಗೆ ಮಹಿಷ ದಸರಾ ನಡೆಸುವ, ತಡೆಯುವ ಬಗ್ಗೆ ಯಾರ‌್ಯಾರು ಏನು ಮಾತಾಡಿದ್ದಾರೆ ಎಲ್ಲವನ್ನೂ ಸಂಗ್ರಹಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ಗಳಲ್ಲಿ ಕಾನೂನು ಉಲ್ಲಂಘನೆಯ ಅಂಶಗಳು ಕಂಡುಬಂದಿವೆ. ಎಲ್ಲವನ್ನೂ ಕಾನೂನು ತಜ್ಞರಿಗೆ ಕಳುಹಿಸಿದ್ದೇವೆ. ಸಂಜೆ ಹೊತ್ತಿಗೆ ಕಾನೂನು ತಜ್ಞರ ಅಭಿಪ್ರಾಯ ದೊರಯಲಿದೆ. ಅವರ ಸಲಹೆ ಆಧರಿಸಿ ಕ್ರಮ ವಹಿಸಲಾಗುವುದುʼʼ ಎಂದು ಹೇಳಿದ್ದಾರೆ.

Exit mobile version