ಮೈಸೂರು: ದಸರಾ ಉತ್ಸವ ಹತ್ತಿರದಲ್ಲಿರುವಂತೆಯೇ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಮಂಗಳವಾರ ಚುನಾವಣೆ ನಡೆಯಲಿದೆ. ಈ ಹಿಂದೆ ಅಧಿಕಾರ ಹೊಂದಿದ್ದ ಬಿಜೆಪಿ ತನ್ನ ಆಡಳಿತವನ್ನು ಮುಂದುವರಿಸಿಕೊಂಡು ಹೋಗುವ ತವಕದಲ್ಲಿದ್ದರೆ ಇತ್ತ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೇರುವ ಪ್ರಯತ್ನದಲ್ಲಿದೆ. ಜೆಡಿಎಸ್‌ನಲ್ಲಿ ಅಡ್ಡಮತದಾನದ ಆತಂಕ ಎದುರಾಗಿದೆ. ಇಲ್ಲಿವರೆಗಿನ ಕಾರ್ಯತಂತ್ರದ ಆಧಾರದಲ್ಲಿ ಬಿಜೆಪಿ ಮೇಯರ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಪ್ರಾದೇಶಿಕ ಆಯುಕ್ತ ಡಾ. ಪ್ರಕಾಶ್ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಮೂರೂ ಪಕ್ಷಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶಿವಕುಮಾರ್, ಕಾಂಗ್ರೆಸ್‌ನಿಂದ ಸೈಯದ್ ಅಶ್ರತ್ ಉಲ್ಲಾ ಖಾನ್, ಗೋಪಿ ಹಾಗೂ ಜೆಡಿಎಸ್‌ನಿಂದ ಕೆ.ವಿ.ಶ್ರೀಧರ್ ನಾಮಪತ್ರ ಸಲ್ಲಿಸಿದ್ದಾರೆ.
ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಜೆ. ರೂಪಾ, ಕಾಂಗ್ರೆಸ್‌ನಿಂದ ಶೋಭಾ ಸುನೀಲ್ ಹಾಗೂ ಜೆಡಿಎಸ್‌ನಿಂದ ರೇಷ್ಮಾ ಬಾನು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
65 ಸದಸ್ಯರ ಪಾಲಿಕೆಯಲ್ಲಿ ಸಂಖ್ಯಾ ಬಲದಲ್ಲಿ ಬಿಜೆಪಿ ಮುಂದಿದೆ. ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಕಾಂಗ್ರೆಸ್, ಜೆಡಿಎಸ್ ಇದ್ದು, ಈ ಬಾರಿ ಮೂರೂ ಪಕ್ಷಗಳ ನಡುವೆ ಅಧಿಕೃತವಾಗಿ ಯಾವುದೇ ಮೈತ್ರಿ ಏರ್ಪಟ್ಟಿಲ್ಲ. ಹಾಗಾಗಿ ಎಲ್ಲ ಪಕ್ಷಗಳೂ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿವೆ.
ಕೆಲ ಸದಸ್ಯರಿಂದ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಜೆಡಿಎಸ್, ಕಾಂಗ್ರೆಸ್ ಸದಸ್ಯರಲ್ಲಿ ಆತಂಕ ಹೆಚ್ಚಾಗಿದೆ. ಮೂರು ದಿನಗಳ ಮುಂಚೆಯೇ ಕಾಂಗ್ರೆಸ್ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿದೆ. ಸೋಮವಾರ ತಡರಾತ್ರಿ ಜೆಡಿಎಸ್‌ನಿಂದಲೂ ವಿಪ್ ಜಾರಿ ಮಾಡಲಾಗಿದೆ. ಅಪರೇಷನ್ ಕಮಲ ಭೀತಿ ನಡುವೆಯೂ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದೆ.
ಜೆಡಿಎಸ್ ಸದಸ್ಯರು ಕೈಕೊಟ್ಟರೂ ಪಕ್ಷೇತರರ ಬೆಂಬಲ ಪಡೆದು ಅಧಿಕಾರ ಹಿಡಿಯುವ ಹಂಬಲದಲ್ಲಿ ಕಾಂಗ್ರೆಸ್ ಇದ್ದು, ಜೆಡಿಎಸ್ ಸದಸ್ಯರು ಬಿಜೆಪಿಯೊಂದಿಗೆ ಸಖ್ಯದಲ್ಲಿದ್ದಾರೆ ಎನ್ನಲಾಗಿದೆ.
ಮದ್ಯಾಹ್ನ 12ಕ್ಕೆ ಚುನಾವಣೆ
ಮದ್ಯಾಹ್ನ 12ರ ಸುಮಾರಿಗೆ ಪ್ರಾದೇಶಿಕ ಆಯುಕ್ತ ಡಾ. ಪ್ರಕಾಶ್ ಸಮ್ಮುಖದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಬಾರಿಗೆ ವಿಧಾನ ಪರಿಷತ್‌ನ ನಾಲ್ವರು ಮತದಾನ ಮಾಡಲಿದ್ದಾರೆ. ಕಾಂಗ್ರೆಸ್‌ನ ಮೂರು ಹಾಗೂ ಜೆಡಿಎಸ್‌ನ ಒಬ್ಬ ಪರಿಷತ್ತು ಸದಸ್ಯರಿಂದ ಮೊದಲ ಬಾರಿಗೆ ಮತದಾನ ನಡೆಯಲಿದೆ. ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ, ಡಾ. ಡಿ. ತಿಮ್ಮಯ್ಯ, ದಿನೇಶ್ ಗೂಳಿಗೌಡ, ಜೆಡಿಎಸ್‌ನ ಸಿ.ಎನ್. ಮಂಜೇಗೌಡ ಮತ ಚಲಾಯಿಸಲಿದ್ದಾರೆ. ಬಿಜೆಪಿ ಎಂಎಲ್‌ಸಿ ಎಚ್. ವಿಶ್ವನಾಥ್ ಅತಿ ಹಿರಿಯ ಸದಸ್ಯರಾಗಿದ್ದಾರೆ.
ಸುರಾನಾ ವಿಶ್ವಾಸ
ಪರಿಶಿಷ್ಟ ಸಮುದಾಯದ ಶಿವಕುಮಾರ್ ಅವರನ್ನು ಮೇಯರ್ ಸ್ಥಾನಕ್ಕೆ ಬಿಜೆಪಿ ಕಣಕ್ಕಿಳಿಸಿದ್ದು, ಜಯಗಳಿಸುವ ವಿಶ್ವಾಸದಲ್ಲಿದೆ. ಈ ಕುರಿತು ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದ ಚುನಾವಣಾ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ, ಬಿಜೆಪಿ ಮೇಯರ್ ಸ್ಥಾನ ಪಡೆಯಲಿದೆ. ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಒಂದು ಸಂಖ್ಯೆ ಹೆಚ್ಚಾಗಿದ್ದೇವೆ. ನಾವು ಚುನಾವಣೆ ಗೆಲ್ಲಲು ಅಷ್ಟೇ ಸಾಕು. ಈಗಾಗಲೇ ಎಲ್ಲ ಕಾರ್ಯತಂತ್ರ ಸಿದ್ಧವಾಗಿದೆ, ಆದರೆ ಅದೇನೆಂದು ಹೇಳಲು ಸಾಧ್ಯವಿಲ್ಲ.
ಬೆಂಗಳೂರು ನಂತರ ಮೈಸೂರು ಅತಿ ಪ್ರಮುಖವಾದ ಸ್ಥಾನ. ಆದ್ಧರಿಂದ ನಾವು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದಲೂ ಇದು ಮಹತ್ವದ ಚುನಾವಣೆ ಎಂದಿದ್ದಾರೆ.
ಇದನ್ನೂ ಓದಿ | ʼಪ್ರತಾಪ್ ಸಿಂಹ ಅವರಿಗೆ ಮಾಹಿತಿ ಇರಲಿಲ್ಲ ಅದಕ್ಕೆ ಹೇಳಿದೆʼ: ಮೈಸೂರಲ್ಲಿ ಮತ್ತೆ ಶಾಸಕ VS ಸಂಸದ