Site icon Vistara News

MP Pratapsimha : ಮಹಿಷ ದಸರಾಗೆ ಬಿಡಲ್ಲ, ಹೇಗೆ ಆಚರಿಸ್ತಾರೋ ನೋಡ್ತೇನೆ; ಸಂಸದ ಪ್ರತಾಪ್‌ ಸಿಂಹ ಸವಾಲು

Mahishasura pratapsimha

ಮೈಸೂರು: ಅಕ್ಟೋಬರ್‌ 13ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Chamundi hills) ಮಹಿಷ ದಸರಾ (Mahisha Dasara) ಆಚರಣೆ ಮಾಡಲಾಗುವುದು, ಸರ್ಕಾರ ಇದಕ್ಕೆ ಅನುಮತಿ ನೀಡಿದೆ ಎಂದು ಮಹಿಷ ದಸರಾ ಆಚರಣೆ ಸಮಿತಿ ಗುರುವಾರ ಪ್ರಕಟಿಸಿದ ಬೆನ್ನಿಗೇ ಸಂಸದ ಪ್ರತಾಪ್‌ಸಿಂಹ (MP Pratapsimha) ಕೆರಳಿದ್ದಾರೆ. ಯಾವ ಕಾರಣಕ್ಕೂ ಮಹಿಷ ದಸರಾ ಆಚರಣೆ ಮಾಡಲು ಬಿಡುವುದಿಲ್ಲ. ನಾನೇ ಮಹಿಷ ದಸರಾ ಆಚರಣೆ ದಿನ ಚಾಮುಂಡಿ ಬೆಟ್ಟದಲ್ಲ ಇರುತ್ತೇನೆ. ಹೇಗೆ ಆಚರಣೆ ಮಾಡುತ್ತಾರೋ ನಾನೂ ನೋಡುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮಹಿಷಾ ದಸರಾ ಅಚರಣೆ ಮಾಡಲು ಬೀಡುವುದಿಲ್ಲ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಬೇಡ. ಅದರಲ್ಲೂ ಚಾಮುಂಡಿ ಬೆಟ್ಟದಲ್ಲಿ ಆಚರಣೆ ಮಾಡಲು ಬಿಡುವುದೇ ಇಲ್ಲ ಎಂದರು.

ʻʻಮಹಿಷಾಸುರನ ಫೋಟೋ ಇಟ್ಟು ಮನೆಯಲ್ಲಿ ಪೂಜೆ ಮಾಡಿಕೊಳ್ಳಲಿ. ಅದರ ಜತೆ ಮಹಿಷನಂಥ ಮಗ ಹುಟ್ಟಲಿ ಅಂತ ಬೇಡಿಕೊಳ್ಳಲಿ.. ಅದಕ್ಕೆ ತಕರಾರಿಲ್ಲ. ಆದರೆ, ಬೆಟ್ಟದಲ್ಲಿ ಮಹಿಷ ದಿನಾಚರಣೆಗೆ ಅವಕಾಶ ಕೊಡುವುದಿಲ್ಲʼʼ ಎಂದರು ಪ್ರತಾಪ್‌ ಸಿಂಹ.

ʻʻಯಾರು ಇದನ್ನು ಮಹಿಷಾ ಬೆಟ್ಟ ಅಂತ ಹೇಳುವುದಿಲ್ಲ. ಇದನ್ನು ಚಾಮುಂಡಿ‌ಬೆಟ್ಟ ಅಂತಾನೇ ಕರೆಯುವುದು.
ನಾವು ದೇವರ ಮೇಲೆ ನಂಬಿಕೆ ಭಕ್ತಿ ಇರುವರು. ಈ ವಿಚಾರದಲ್ಲಿ ಯಾವುದೇ ಸಂಘರ್ಷ ಕ್ಕೆ ನಾನು ಸಿದ್ದ. ನಾನೇ ಮಹಿಷಾ ದಸರಾ ಅಚರಣೆ ದಿನ ಬೆಟ್ಟದಲ್ಲಿ ಇರುತ್ತೇನೆ. ಯಾವ ರೀತಿ ಅಚರಣೆ ಮಾಡುತ್ತಾರೆ ನೋಡುತ್ತೇವೆʼʼ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.

ಬೆಟ್ಟದಲ್ಲಿ ಪುಷ್ಪಾರ್ಚನೆ, ತಪ್ಪಲಲ್ಲಿ ಕಾರ್ಯಕ್ರಮ ಎಂದ ಸಮಿತಿ

ಗುರುವಾರ ಮೈಸೂರಿನಲ್ಲಿ ನಡೆದ ಮಹಿಷ ದಸರಾ ಆಚರಣಾ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಿಷ ದಸರಾ ಆಚರಣೆ ಸಮಿತಿ ಸದಸ್ಯ ಹಾಗು ಮಾಜಿ ಮೇಯರ್ ಪುರುಷೋತ್ತಮ್ ಅವರು, ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆ ಮಾಡಲಾಗುತ್ತದೆ. ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತದೆ. ಚಾಮುಂಡಿ ಬೆಟ್ಟದ ಮೇಲೆ ಸ್ಥಳಾವಕಾಶದ ಕೊರತೆ ಇದೆ. ಹಾಗಾಗಿ ವೇದಿಕೆ ಕಾರ್ಯಕ್ರಮವನ್ನು ಬೆಟ್ಟದ ತಪ್ಪಲಿನಲ್ಲಿ ಸೂಕ್ತವಾದ ಸ್ಥಳದಲ್ಲಿ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದರು.

ಈ ಬಾರಿಯ ಮಹಿಷ ದಸರಾ ಆಚರಣೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಇತರೆ ಕಡೆಗಳಿಂದ ಆಗಮಿಸುವ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ. ಮಹಿಷ ದಸರಾ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ, ಪೊಲೀಸ್ ಇಲಾಖೆ ಕೂಡ ಸಹಕಾರ ಕೊಡುವ ನಿರೀಕ್ಷೆಯಿದೆ ಎಂದು ತಿಳಿಸಿದ್ದರು.

ಮಹಿಷ ದಸರಾಗೂ, ನಾಡಹಬ್ಬ ದಸರಾಗೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Pratap Simha: ಸಿಎಂಗೆ ಇಂಥ ದೈನಾಸಿ ಸ್ಥಿತಿ ಬರಬಾರದಿತ್ತು; ಸೋಲಿಸಿ ಎಂದ ಸಿದ್ದರಾಮಯ್ಯಗೆ ಪ್ರತಾಪ್‌ ಸಿಂಹ ತಿರುಗೇಟು

ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಮಹಿಷ ದಸರಾ ಆಚರಣೆಗೆ ಪೂರ್ವಭಾವಿಯಾಗಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜನೆ ಮಾಡಲಾಗಿದೆ. ಮಹಿಷ ದಸರಾ ಆಚರಣಾ ಸಮಿತಿ ಹಾಗು ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದಿಂದ ಮಾನಸ ಗಂಗೋತ್ರಿಯ ಲಲಿತ ಕಲೆಗಳ ಕಾಲೇಜಿನಲ್ಲಿ ಅಕ್ಟೋಬರ್‌ 10ರಂದು ಈ ವಿಚಾರ ಸಂಕಿರಣ ನಡೆಯಲಿದೆ.

ಮಹಿಷಮಂಡಲದ ಆದಿದೊರೆ ಮಹಿಷಾಸುರ: ಒಂದು ಚಾರಿತ್ರಿಕ ನೋಟ ಎಂಬ ವಿಚಾರದ ಕುರಿತು ವಿಚಾರ ಸಂಕಿರಣ ಆಯೋಜನೆಯಾಗಿದೆ. ಬೆಳಗ್ಗೆ 11ರಿಂದ ಸಂಜೆ 6ರವರೆಗೆ ಮೂರು ಗೋಷ್ಠಿಗಳು ನಡೆಯಲಿವೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ 28 ಮಂದಿ ಪ್ರಗತಿಪರ ಚಿಂತಕರು ವಿಚಾರ ಸಂಕಿರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.

Exit mobile version