ಮೈಸೂರು: ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಜಜ್ಜಿ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ (Murder Case) ಘಟನೆ ಮೈಸೂರು ಜಿಲ್ಲೆ (Mysore News) ಹುಣಸೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹುಣಸೂರಿನ ಅರಸು ಪ್ರತಿಮೆ ವೃತ್ತದ ಬಳಿ ಇರುವ ಇಟ್ಟಿಗೆ ತಯಾರಿಸುವ ಫ್ಯಾಕ್ಟರಿಯಲ್ಲಿ (Cement block factory) ಸುಮಾರು 30 ವರ್ಷದ ವ್ಯಕ್ತಿಯ ಕೊಲೆ ಮಾಡಲಾಗಿದೆ.
ಈತ ಯಾರು, ಈತ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದನೇ ಎಂಬುದೂ ಸೇರಿದಂತೆ ಕೊಲೆಯಾದವನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಫ್ಯಾಕ್ಟರಿಯ ಕಾರ್ಮಿಕರ ನಡುವೆ ಸಂಘರ್ಷ ಸಂಭವಿಸಿ ಕೊಲೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಂಗಳವಾರ ರಾತ್ರಿ ಕೊಲೆ ನಡೆದಿರುವ ಬಗ್ಗೆ ಗುಮಾನಿಗಳಿವೆ.
ಸ್ಥಳಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ, ಹುಣಸೂರು ಪಟ್ಟಣ ಠಾಣೆ ಇನ್ಸ್ ಪೆಕ್ಟರ್ ದೇವೇಂದ್ರ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಕೊಲೆಯಾದ ವ್ಯಕ್ತಿಯಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಮೀಪದಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆದಿದ್ದು, ಹಂತಕರ ಪತ್ತೆಗೆ ಹುಣಸೂರು ಪೊಲೀಸರು ಬಲೆ ಬೀಸಿದ್ದಾರೆ.
ಕುಡಿದು ಗಲಾಟೆ ಮಾಡುತ್ತಿದ್ದ ತಮ್ಮನನ್ನು ಇರಿದು ಕೊಂದ ಅಣ್ಣ
ಹುಬ್ಬಳ್ಳಿ: ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಅಣ್ಣನೊಬ್ಬ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆ (Murder Case) ಮಾಡಿದ್ದಾನೆ. ಹುಬ್ಬಳ್ಳಿಯ ವಿಜಯ ನಗರದಲ್ಲಿ ಘಟನೆ ನಡೆದಿದೆ.
ಪವನ (30) ಕೊಲೆಯಾದ ಯುವಕ. ಅಣ್ಣ ರಾಜು ಈತನಿಗೆ ಚಾಕುವಿನಿಂದ ಹೊಟ್ಟೆ, ಕುತ್ತಿಗೆಗೆ ಇರಿದಿದ್ದಾನೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Murder Case : ಅಮ್ಮನ ಸಾವಿನ ರಹಸ್ಯ ಬಿಚ್ಚಿಟ್ಟ 6 ವರ್ಷದ ಬಾಲಕಿ!
ಚಾಕುವಿನಿಂದ ಇರಿತ, ದೊಣ್ಣೆಯಿಂದ ಹಲ್ಲೆ
ದಾವಣಗೆರೆ: ಕೋರ್ಟ್ ಕೇಸ್‌ಗೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ಮೂವರು ಪರಸ್ಪರ ಮಾರಕವಾಗಿ ಹಲ್ಲೆ ಮಾಡಿಕೊಂಡು ಗಾಯಾಳುಗಳಾಗಿದ್ದಾರೆ. ಇಬ್ಬರಿಗೆ ಚಾಕುವಿನಿಂದ ಇರಿದಿದ್ದು, ಚಾಕುವಿನಿಂದ ಇರಿದವನಿಗೆ (Knife attack) ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ.
ಜಗಳೂರು ತಾಲೂಕಿನ ಗೌರಿಪುರದಲ್ಲಿ ಗಲಾಟೆ ನಡೆದಿದೆ. ಅಣ್ಣನ ಕೇಸ್‌ನ ಆರೋಪಿಗಳಿಗೆ ಜಾಮೀನು ಕೊಡಲು ಓಡಾಡುತ್ತಾ ಇದ್ದೀರಿ ಎಂದು ಅನುಮಾನಿಸಿ ಗೌರಿಪುರದ ಹಾಲಸ್ವಾಮಿ ಎಂಬ ವ್ಯಕ್ತಿ ಅದೇ ಗ್ರಾಮದ ಚಂದ್ರಪ್ಪ ಮತ್ತು ಆತನ ಪುತ್ರ ಹೇಮಂತ ಎಂಬ ಇಬ್ಬರಿಗೆ ಚಾಕುವಿನಿಂದ ಇರಿದಿದ್ದಾನೆ.
ಚಾಕುವಿನಿಂದ ಇರಿದ ಹಾಲಸ್ವಾಮಿ ಅಣ್ಣ ರಾಮಕೃಷ್ಣ ಕಳೆದ ಕೆಲ ತಿಂಗಳ ಹಿಂದೆ ಕೊಲೆಯಾಗಿದ್ದ. ರಾಮಕೃಷ್ಣ ನರೇಗಾ ಯೋಜನೆಯಡಿ ಆದ ಅವ್ಯವಹಾರ ಬಯಲಿಗೆಳೆದಿದ್ದ. ಪಿಡಿಓ ಎಟಿ ನಾಗರಾಜ್ ವಿರುದ್ಧ ಅವ್ಯವ್ಯಹಾರ ಆರೋಪ ಮಾಡಿದ್ದ ರಾಮಕೃಷ್ಣ ಕೊಲೆಯಾಗಿದ್ದ. ಈ ಆರೋಪದ ನಂತರ ಗೌರಿಪುರ ಪಕ್ಕದ ಹೊಸಕೆರೆ ಧಾಬಾ ಬಳಿ ರಾಮಕೃಷ್ಣನ ಕೊಲೆಯಾಗಿತ್ತು.
ರಾಮಕೃಷ್ಣ ಕೊಲೆ ಆರೋಪಿಗಳು ಮೊನ್ನೆಯಷ್ಟೇ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಅವರ ಜಾಮೀನಿಗೆ ನೀವು ಸಹಕಾರ ನೀಡಿದ್ದೀರಿ ಅಂತ ಅನುಮಾನಿಸಿ ಮೃತ ರಾಮಕೃಷ್ಣನ ತಮ್ಮ ಹಾಲಸ್ವಾಮಿ ಚಾಕು ಇರಿದಿದ್ದಾನೆ. ಚಾಕು ಇರಿತದಿಂದ ತಪ್ಪಿಸಿಕೊಳ್ಳಲು ಇವರು ದೊಣ್ಣೆಯಿಂದ ಹಾಲಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.
ಗಲಾಟೆಯ ವಿಡಿಯೋ ವೈರಲ್ ಆಗಿದ್ದು, ಗೌರಿಪುರ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪೊಲೀಸ್ ಸಿಬ್ಬಂದಿ ಗಸ್ತು ಹಾಕಲಾಗಿದೆ. ಹಾಲಸ್ವಾಮಿಗೆ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಹಾಗೂ ಹೇಮಂತ್ ಮತ್ತು ಚಂದ್ರಪ್ಪಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಮತ್ತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.