Site icon Vistara News

Mysore Dasara : ಅರಮನೆಯಲ್ಲೂ ದಸರಾ ಸಡಗರ; ಖಾಸಗಿ ದರ್ಬಾರ್‌ ಆರಂಭಿಸಿದ ಯದುವೀರ್‌ ಒಡೆಯರ್

Mysore Dasara Private Darbar

ಮೈಸೂರು: ವಿಶ್ವವಿಖ್ಯಾತ 414ನೇ ಮೈಸೂರು ದಸರಾ (Mysore Dasara) ಮಹೋತ್ಸವಕ್ಕೆ ಭಾನುವಾರ (ಅಕ್ಟೋಬರ್‌ 15) ಅದ್ಧೂರಿ ಚಾಲನೆ ಸಿಕ್ಕಿದೆ. ಬೆಳಗ್ಗೆ 10:15ರಿಂದ 10.36ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ (Music Director Hamsalekha) ಚಾಲನೆ ನೀಡಿದ್ದಾರೆ. ಇತ್ತ ಮೈಸೂರು ಅರಮನೆಯಲ್ಲಿ ಸಹ ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ. ಇನ್ನು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ (Mysore Maharaja Yaduveer Krishnadatta Chamaraja Wadiyar) ಅವರಿಂದ ಖಾಸಗಿ ದರ್ಬಾರ್‌ಗೆ (Private Durbar) ಚಾಲನೆ ಸಿಕ್ಕಿದೆ.

ರೇಷ್ಮೆ, ರತ್ನಖಚಿತ ರಾಜಪೋಷಾಕನ್ನು ಧರಿಸಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೊದಲಿಗೆ ಸಿಂಹಾಸನದ ಬಳಿ ತೆರಳಿ ಸಿಂಹಾಸನ ಸುತ್ತ ಮೂರು ಸುತ್ತು ಪ್ರದಕ್ಷಣೆ ಹಾಕಿದರು. ಸಿಂಹಾಸನದ ಬಳಿ ಕುಳಿತು ನವಗ್ರಹ ಪೂಜೆಯನ್ನು ನೆರವೇರಿಸಿದರು. ಬಳಿಕ ಸಿಂಹಾಸನರೂಢರಾದರು. ಈ ವೇಳೆ ಅರಮನೆಯ ವಂದಿಮಾಗದರಿಂದ ಯದುವೀರ್‌ಗೆ ಬಹುಪರಾಕ್ ಘೋಷಣೆಗಳು ಮೊಳಗಿದವು.

Mysore Dasara Private Darbar

ಮೊಳಗಿದ ಬಹುಪರಾಕ್‌ಗಳು

ರಾಜ ಮಾರ್ತಾಂಡ, ರಾಜಾಧಿರಾಜ, ರಾಜಕುಲ ತಿಲಕ, ಯದುವೀರ್ ಮಹಾರಾಜ್ ಕೀ ಬಹುಪರಾಕ್ ಎಂದು ವಂದಿಮಾಗದರು ಬಹುಪರಾಕ್ ಹಾಕಿದರು. ಈ ವೇಳೆ ದ್ವಾರಪಾಲಕರು, ಪರಾಕ್‌ ಹೇಳುವವರು, ಒಡೆಯರ್ ಆಪ್ತ ಸಿಬ್ಬಂದಿ, ರಾಜದಂಡ ಹಿಡಿದ ಆಸ್ಥಾನ ಅಧಿಕಾರಿಗಳು, ರಾಜಪುರೋಹಿತರು, ವಿದ್ವಾಂಸರು, ಒಡೆಯರ್ ವಂಶಸ್ಥರು, ಬಂಧುಮಿತ್ರರು ಭಾಗಿಯಾಗಿದ್ದರು.

Mysore Dasara Private Darbar

ರಾಜಪರಿವಾರದವರಿಗೆ ಕಾಣಿಕೆ ನೀಡಿಕೆ

ಇಲ್ಲಿ ಸಿಂಹಾಸನಾರೂಢರಾದ ಯದುವೀರ್ ಒಡೆಯರ್‌ಗೆ ದೇವಾಲಯಗಳಿಂದ ಆಗಮಿಸಿದ ಪುರೋಹಿತರು ಪ್ರಸಾದ ಮತ್ತು ಮಂತ್ರಪುಷ್ಪ ಹಾಗೂ ಮಂಗಳಾಕ್ಷತೆಯನ್ನು ನೀಡಿದರು. ಇದಾದ ಬಳಿಕ ನಜರ್ ಒಪ್ಪಿಸುವ ಪ್ರಕ್ರಿಯೆ ನಡೆಯಿತು. ನಂತರ ಯದುವೀರ್ ಒಡೆಯರ್ ಅವರು ಸಿಂಹಾಸನದಲ್ಲಿ ಕುಳಿತುಕೊಂಡು ರಾಜಪರಿವಾರದ ಮಂದಿಗೆ ಕಾಣಿಕೆಯನ್ನು ನೀಡಿದರು.

Mysore Dasara Private Darbar

ಕೋಡಿಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ

ಇದಕ್ಕೂ ಮೊದಲು ಅಲಂಕಾರ ಮಾಡಿದ್ದ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳಿಗೆ ಅಲಂಕಾರ ಮಾಡಿಡಲಾಗಿತ್ತು. ಪಟ್ಟದ ಆನೆ ಭೀಮ, ನಿಶಾನೆ ಆನೆ ಅರ್ಜುನ, ನೌಫತ್‌ ಆನೆ ಧನಂಜಯ ಸಿದ್ಧಗೊಂಡಿದ್ದರು. ಅವುಗಳನ್ನು ಅರಮನೆ ಆವರಣದಲ್ಲಿರುವ ಕೋಡಿಸೋಮೇಶ್ವರ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪೂಜೆ ಸಲ್ಲಿಸಿ ಅರಮನೆಯೊಳಗೆ ಇವುಗಳ ಪ್ರವೇಶವನ್ನು ಮಾಡಿಸಲಾಯಿತು. ಆನೆಗಳ ಪ್ರವೇಶದ ಬಳಿಕ ಖಾಸಗಿ ದರ್ಬಾರ್ ಅನ್ನು ಪ್ರಾರಂಭ ಮಾಡಲಾಯಿತು.

Mysore Dasara Private Darbar

ಇದನ್ನೂ ಓದಿ: Mysore dasara : 414ನೇ ಮೈಸೂರು ದಸರಾ ಮಹೋತ್ಸವಕ್ಕೆ ಹಂಸಲೇಖರಿಂದ ಅದ್ಧೂರಿ ಚಾಲನೆ

ಮಹಾರಾಜ ಯಧುವೀರ್‌ ಬೆಳಗ್ಗಿನ ದಿನಚರಿ ಹೀಗಿತ್ತು

ಪಾಡ್ಯದ ದಿನ ಮಾತ್ರ ಬೆಳಗ್ಗೆ ಖಾಸಗಿ ದರ್ಬಾರ್‌ ಅನ್ನು ಬೆಳಗ್ಗೆ ನಡೆಸಲಾಗುತ್ತದೆ. ಉಳಿದ ದಿನ ಸಂಜೆಗೆ ನಡೆಯುತ್ತದೆ. ನವರಾತ್ರಿಯ ಮೊದಲನೆಯ ದಿನವಾದ ಇಂದು (ಪಾಡ್ಯದಂದು) ಮಹಾರಾಜ ಯಧುವೀರ ಒಡೆಯರ್‌ ಅವರು ಬೆಳಗ್ಗೆ ಎದ್ದು ಎಣ್ಣೆ ಶಾಸ್ತ್ರ ಮಾಡಿದರು. ಕೊನೆಗೆ ಅರಮನೆಗೆ ಕರೆಸಿಕೊಂಡಿರುವ ಕ್ಷೌರಿಕರಿಂದ ಚೌಲ ಶಾಸ್ತ್ರ ನೆರವೇರಿಸಿ ಮಂಗಳ ಸ್ನಾನ ಮಾಡಿದರು. ಬಳಿಕ ಮಹಾರಾಜರಿಗೆ ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಸ್ತ್ರೀಯರಿಂದ ಆರತಿ ಸೇವೆ ನಡೆಯಿತು. ಅಲ್ಲಿಂದ ಚಾಮುಂಡಿತೊಟ್ಟಿಗೆ ಭೇಟಿದ ಮಹಾರಾಜ ಯಧುವೀರ ಗಣಪತಿಗೆ ಪೂಜೆ ಮಾಡಿ ಅಲ್ಲಿ ಕಳಶ ಪೂಜೆ, ಕಂಕಣ ಪೂಜೆಯನ್ನು ನೆರವೇರಿಸಿದರು. ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಧರ್ಮಪತ್ನಿ, ಮಹಾರಾಣಿ ತ್ರಿಷಿಕಾ ಕುಮಾರಿ ಅವರೊಂದಿಗೆ ಕಂಕಣ ಧರಿಸಿದರು. ಅಲ್ಲಿಂದ ವ್ರತಗಳಿಗೆ ಚಾಲನೆ ಸಿಕ್ಕಿದೆ.

Exit mobile version