Site icon Vistara News

Mysore Dasara | ದಸರಾದಲ್ಲಿ ಮತ್ತೊಂದು ಎಡವಟ್ಟು; ಕವಿಗೋಷ್ಠಿಯ ಆಹ್ವಾನ ಪತ್ರಿಕೆಯಲ್ಲಿ ಮೃತ ಕವಿಯ ಹೆಸರು!

Mysore Dasara

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ (Mysore Dasara) ಅಧ್ವಾನಗಳ ಸರಣಿ ಮುಂದುವರಿದಿದ್ದು, ಗಣ್ಯರ ಗೈರು ಹಿನ್ನೆಲೆಯಲ್ಲಿ ಯುವ ದಸರಾ ಮುಂದೂಡಿದ ಬೆನ್ನಲ್ಲೇ, ಕವಿಗೋಷ್ಠಿಯ ಆಹ್ವಾನ ಪತ್ರಿಕೆಯು ಆಯೋಜಕರ ಬೇಜವಾಬ್ದಾರಿ ತನಕ್ಕೆ ಮತ್ತೊಂದು ಸಾಕ್ಷಿಯಾಗಿ ವಿವಾದಕ್ಕೊಳಗಾಗಿದೆ.

ಅಕ್ಟೋಬರ್‌ 3ರಂದು ನಡೆಯಬೇಕಾಗಿರುವ ಪ್ರಧಾನ ಕವಿಗೋಷ್ಠಿಗೆ ಈಗಾಗಲೇ ನಿಧನರಾಗಿರುವ ಕವಿಯೊಬ್ಬರನ್ನು ಆಹ್ವಾನಿಸಿ, ಅವರು ಗೋಷ್ಠಿಯಲ್ಲಿ ಕವನ ವಾಚಿಸಲಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿರುವುದಕ್ಕೆ ಸಾರಸ್ವತ ಲೋಕದ ಗಣ್ಯರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಅಲ್ಲದೆ ಕವಿಗಳ ಅನುಮತಿಯನ್ನೂ ಪಡೆಯದೇ ಅವರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿರುವುದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ.

ನಡೆದಿದ್ದೇನು?
ದಸರಾ ಕವಿಗೋಷ್ಠಿಗೆ ಸಾರಸ್ವತ ಲೋಕದಲ್ಲಿ ಮಹತ್ವದ ಸ್ಥಾನವಿದೆ. ಪ್ರತಿ ವರ್ಷ ನಡೆಯುವ ಈ ಗೋಷ್ಠಿಯನ್ನು ಈ ಬಾರಿ ಅಕ್ಟೋಬರ್‌ 3ರ ಸೋಮವಾರದಂದು ಬೆಳಗ್ಗೆ ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ಕವಿಗೋಷ್ಠಿಯನ್ನು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದು, ಖ್ಯಾತ ಕವಿ ಡಾ.ಎಚ್‌.ಎಸ್‌. ಶಿವಪ್ರಕಾಶ್‌ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಿಸಲಾಗಿದೆ. ಒಟ್ಟು 37 ಕವಿಗಳು ಈ ಗೋಷ್ಠಿಯಲ್ಲಿ ಕವನ ವಾಚಿಸಲಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.

ಸುಪ್ರಸಿದ್ಧ ಕವಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಈ ಕವಿಗೋಷ್ಠಿಯಲ್ಲಿ ಭಾಗವಹಿಸಬೇಕೆಂದು ನಾಡಿನ ಕವಿಗಳು ಕಾತುರದಿಂದ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಹೀಗಿರುವಾಗ ಬಹಳ ಎಚ್ಚರಿಕೆಯಿಂದ ಪ್ರತಿಭಾವಂತರನ್ನು ಈ ಗೋಷ್ಠಿಗೆ ಆಯ್ಕೆ ಮಾಡಬೇಕಾಗಿದ್ದ ಆಯೋಜಕರು, ಈ ಬಾರಿಯೂ ಬೇಕಾಬಿಟ್ಟಿಯಾಗಿ ಕವಿಗಳನ್ನು ಆಯ್ಕೆ ಮಾಡಿದ್ದಾರೆ.

ಈ ಕವಿಗೋಷ್ಠಿಯಲ್ಲಿ ಕವಿ ಜಿ.ಕೆ.ರವೀಂದ್ರಕುಮಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಲಾಗಿದೆ. ಆದರೆ ಆಕಾಶವಾಣಿಯ ನಿರ್ದೇಶಕರಾಗಿದ್ದ ಕವಿ ಜಿ.ಕೆ. ರವೀಂದ್ರಕುಮಾರ್‌ ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದನ್ನು ತಿಳಿಯದೇ ಅವರ ಹೆಸರನ್ನು ವಾಚಕ ಕವಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಕವಿಗಳ ಒಪ್ಪಿಗೆಯನ್ನೇ ಪಡೆಯದೇ ಆಯೋಜಕರ ಕವಿಗೋಷ್ಠಿಯನ್ನು ಏರ್ಪಡಿಸಿರುವುದು ಈ ಎಡವಟ್ಟಿಗೆ ಕಾರಣವಾಗಿದೆ.

“ಇನ್ನೊಂದಷ್ಟು ದಿವಂಗತರುಗಳನ್ನು ಕವಿಗೋಷ್ಠಿಯ ಆಹ್ವಾನ ಪಟ್ಟಿಯಲ್ಲಿ ಸೇರಿಸಿದ್ದಿದ್ದರೆ ಅವರ ಟಿಎ/ಡಿಎ ಗಳನ್ನು ತಮ್ಮ ಸ್ವಂತ ದಸರಾ ಖರ್ಚಿಗೆ ಅಧಿಕಾರಿಗಳು ಉಪಯೋಗಿಸಬಹುದಿತ್ತುʼʼ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಆಯೋಜಕರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ಸಂಸದರ ಕ್ಷೇತ್ರವೇ ಬದಲು
ಇನ್ನು ಕವಿಗೋಷ್ಠಿಗೆ ಮುಖ್ಯ ಅತಿಥಿಗಳಾಗಿ ರಾಜಕಾರಣಿಗಳನ್ನು ಆಹ್ವಾನಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ ಕುಮಾರ್‌ ಹಾಗೂ ಸಂಸದ ಪ್ರತಾಪ್‌ ಸಿಂಹ ಅವರನ್ನು ಆಹ್ವಾನಿಸಲಾಗಿದೆ. ಇಲ್ಲಿ ಪ್ರತಾಪ್‌ ಸಿಂಹ ಅವರನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರು ಎಂದು ತಿಳಿಸಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಸಾಕಷ್ಟು ಅಕ್ಷರದೋಷಗಳು ನುಸುಳಿದ್ದು, ಕೆಲ ಕವಿಗಳ ಹೆಸರನ್ನೇ ತಪ್ಪಾಗಿ ಮುದ್ರಿಸಲಾಗಿದೆ. ಕವಿ ಎಚ್‌.ಎಂ. ನಾಗರಾಜರಾವ್‌ ಕಲ್ಕಟ್ಟೆ ಹೆಸರನ್ನು ಎಚ್‌.ಎಂ. ನಾಗರಾಜರಾವ್‌ “ಕಲ್ಕತ್ತೆʼʼ ಎಂದು ಮುದ್ರಿಸಲಾಗಿದೆ. ಇದು ಆಯೋಜಕರ ಬೇಜವಾಬ್ದಾರಿಗೆ ಇನ್ನೊಂದು ಸಾಕ್ಷಿಯಾಗಿದೆ.

ನನ್ನನ್ನು ಕೇಳದೇ ಅವಕಾಶ

ಈ ರೀತಿಯ ಆಯ್ಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಾಗಲಕೋಟೆಯ ಕವಿ ಡಾ.ಸತ್ಯಾನಂದ ಪಾತ್ರೋಟ, “ಕವಿಗೋಷ್ಠಿಯ ಆಮಂತ್ರಣ ಪತ್ರಿಕೆಯಲ್ಲಿ ಭಾಗವಹಿಸುವ ಕವಿಗಳ ಪಟ್ಟಿಯಲ್ಲಿ ನನ್ನ ಹೆಸರಿದೆ. ಆದರೆ, ಈ ಬಗ್ಗೆ ಆಯೋಜಕರು ಈ ವರೆಗೂ ನನ್ನನ್ನು ಸಂಪರ್ಕಿಸಿಲ್ಲ. ನನ್ನ ಒಪ್ಪಿಗೆ ಇಲ್ಲದೇ ಅದು ಹೇಗೆ ನನ್ನ ಹೆಸರು ಈ ಗೋಷ್ಠಿಗೆ ಸೇರಿಸಿದರು? ಆಯೋಜಕರೇ ಸ್ಪಷ್ಟಪಡಿಸಬೇಕು. ಅಲ್ಲದೆ, ಈಗಾಗಲೇ ಈ ಪ್ರಧಾನ ಕವಿಗೋಷ್ಠಿಗೆ ಕವಿಯಾಗಿ ಮೂರು ಸಲ ಭಾಗವಹಿಸಿದ್ದೇನೆ. ಒಂದು ಸಲ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೇನೆ. ಭಾಗವಹಿಸಿದವರನ್ನೇ ಪದೇ ಪದೇ ಆಹ್ವಾನಿಸುವುದಕ್ಕಿಂತ ಹೊಸಬರಿಗೆ ಅವಕಾಶ ನೀಡುವುದು ಸೂಕ್ತʼʼ ಎಂದು ಫೇಸ್‌ ಬುಕ್‌ನಲ್ಲಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕವಿಗಳ ಅನುಮತಿ ಪಡೆಯದೇ ಕವಿಗಳ ಪಟ್ಟಿ ಪ್ರಕಟಿಸಿದ್ದಲ್ಲದೆ, ಈ ಹಿಂದೆ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದವರಿಗೇ ಮತ್ತೆ ಅವಕಾಶ ನೀಡಲಾಗಿದೆ. ಅಲ್ಲದೆ, ಇತ್ತೀಚೆಗೆ ಕೃತಿಚೋರ ಮಾಡಿ ಸುದ್ದಿಯಲ್ಲಿದ್ದ ಕವಿಗಳನ್ನೂ ಗೋಷ್ಠಿಗೆ ಆಹ್ವಾನಿಸಿರುವುದಕ್ಕೆ ಸಾರಸ್ವತ ಲೋಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ತಪ್ಪಿನ ಅರಿವಾಗುತ್ತಿದ್ದಂತೆಯೇ ಅಧಿಕಾರಿಗಳು ಆಹ್ವಾನ ಪತ್ರಿಕೆಯ ಮರು ಮುದ್ರಣಕ್ಕೆ ಸೂಚಿಸಿರುವುದಾಗಿ ತಿಳಿದು ಬಂದಿದೆ. ಆದರೆ ಕವಿಗಳ ಅನುಮತಿ ಪಡೆದು ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆಯೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ| Mysore dasara | ಅದ್ಧೂರಿ ಅಲ್ಲ, ಅಧ್ವಾನದ ದಸರಾ; ಗಣ್ಯರ ಗೈರಿನಿಂದ ಯುವ ದಸರಾ ಮುಂದೂಡಿಕೆ

Exit mobile version