Site icon Vistara News

Mysore Dasara : ರಾಜ್ಯದಲ್ಲಿನ ಅಂತಾರಾಜ್ಯದವರಿಗೆ ಕನ್ನಡ ಕಲಿಸಿ; ಆರ್‌ಟಿಸಿ ಮಾದರಿ ʼಕನ್ನಡ ಪಟ್ಟʼ ಕೊಡಿ ಎಂದ ಹಂಸಲೇಖ

Hamsalekha speech in Mysore Dasara

ಮೈಸೂರು: ರಾಜ್ಯದಲ್ಲಿ ಎಲ್ಲರೂ ಕನ್ನಡಿಗರೇ ಆಗಿದ್ದಾರೆ. ಕನ್ನಡ ಓದಲು, ಬರೆಯಲು ಬಾರದವರ ಸಮೀಕ್ಷೆ ಆಗಬೇಕು. ಈ ಬಗ್ಗೆ ನನಗೆ ಕರ್ಪೋರೇಟ್ ಕನ್ನಡಿಗರ ತಂಡ ಸಲಹೆ ನೀಡಿದೆ. ಕನ್ನಡ ಅರ್ಥ ಆಗುತ್ತದೆ. ಆದರೆ ಓದಲು- ಬರೆಯಲು ಬರುವುದಿಲ್ಲ ಎನ್ನುವವರ ಸಮೀಕ್ಷೆ ಆಗಬೇಕು. ಕನ್ನಡ ಗೊತ್ತಿಲ್ಲದವರಿಗೆ 30 ದಿನಗಳಲ್ಲಿ ಭಾಷೆ ಕಲಿಸಬೇಕು. ಹೀಗೆ ಕನ್ನಡ ಕಲಿತ ಕನ್ನಡೇತರರಿಗೆ ಜಮೀನು ಆರ್‌ಟಿಸಿ ಮಾದರಿಯಲ್ಲಿ “ಕನ್ನಡ ಪಟ್ಟ” ಕೊಡಬೇಕು. ಕನ್ನಡ ಕಲಿತವರಿಗೆ ನೀಡಲಾಗುವ ಕನ್ನಡ ಪಟ್ಟವು ಬಿಪಿಎಲ್, ಎಪಿಎಲ್ ಮಾದರಿಯ ದಾಖಲೆ ಆಗಬೇಕು ಎಂದು ಸಂಗೀತ ನಿರ್ದೇಶಕ ಹಂಸಲೇಖ (Music Director Hamsalekha) ಅವರು ದಸರಾ ಮಹೋತ್ಸವದ (Mysore Dasara) ತಮ್ಮ ಉದ್ಘಾಟನಾ ಭಾಷಣದಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ವಿಶ್ವವಿಖ್ಯಾತ 414ನೇ ಮೈಸೂರು ದಸರಾ (Mysore Dasara) ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಹಂಸಲೇಖ, ನನಗೆ ಕಳೆದ ಒಂದು ತಿಂಗಳಿಂದ ಕನ್ನಡದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಾವಿರಾರು ಸಲಹೆಗಳು ಬಂದಿವೆ. ಇದರಲ್ಲಿ ಬಹುಮುಖ್ಯವಾಗಿ ಕಾರ್ಪೋರೇಟ್‌ ಕನ್ನಡಿಗರ ತಂಡವೊಂದು ನನಗೆ ಕೊಟ್ಟ ಈ ಸಲಹೆಯು ಗಮನ ಸೆಳೆದಿದೆ. ಇದರ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಾಥ್‌ ಕೊಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Mysore dasara : ಜಂಬೂ ಸವಾರಿಯಲ್ಲಿ ಗಜ ಗಾಂಭೀರ್ಯ; ಗಮನ ಸೆಳೆವ ಆನೆಗಳ ಸೌಂದರ್ಯ

ರಾಜ್ಯದಲ್ಲಿರುವವರಿಗೆ ಯಾರಿಗೆ ಕನ್ನಡ ಬರುವುದಿಲ್ಲ? ಯಾರಿಗೆ ಕನ್ನಡ ಅರ್ಥ ಆಗುತ್ತದೆ? ಅಂಥವರಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ ಎಂಬುದರ ಬಗ್ಗೆ ಒಂದು ಡೇಟಾ ಸಂಗ್ರಹ ಮಾಡಬೇಕು. ಈ ಅಧ್ಯಯನವನ್ನು ರಾಜ್ಯ ಸರ್ಕಾರವೇನೂ ಮಾಡುವುದು ಬೇಡ. ಈ ಕೆಲಸವನ್ನು ಕಾರ್ಪೋರೇಟ್‌ ಕನ್ನಡಿಗರ ತಂಡವೇ ಮಾಡುತ್ತದೆ. ಅದಕ್ಕೆ ಬೇಕಾದ ಅನುಮತಿಯನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಹಂಸಲೇಖ ಹೇಳಿದರು.

ಹೀಗೆ ಕನ್ನಡ ಕಲಿತು “ಕನ್ನಡ ಪಟ್ಟ”ವನ್ನು ಪಡೆದವರಿಗೆ ಸರ್ಕಾರದಿಂದ ಒಂದು ಮಟ್ಟಿನ ಸೌಲಭ್ಯ ಸಿಗಬೇಕು. ಅಂದರೆ ಆಸ್ಪತ್ರೆಗಳಿಗೆ ಹೋದಾಗ ಔಷಧೋಪಚಾರಗಳನ್ನು ಉಚಿತವಾಗಿ (ಎಪಿಎಲ್‌ – ಬಿಪಿಎಲ್‌ ಕಾರ್ಡ್‌ನಂತೆ) ನೀಡುವ ಕೆಲಸ ಆಗಬೇಕು. ಈ ಕೆಲಸಕ್ಕೆ ಸರ್ಕಾರ ಮನಸ್ಸು ಮಾಡಬೇಕು ಎಂದು ಹಂಸಲೇಖ ಹೇಳಿದರು.

ಹಂಸಲೇಖ ಮಾತುಗಳ ವಿಡಿಯೊ ಇಲ್ಲಿದೆ

ಆಗಲಿ ಪ್ರತಿಭೆ – ಉದ್ಯಮಗಳ ವಿನಿಮಯ

ಮತ್ತೊಂದು ಪ್ರಮುಖ ಸಲಹೆಯೆಂದರೆ ರಾಜ್ಯದಲ್ಲಿ ಪ್ರತಿಭೆ – ಉದ್ಯಮಗಳ ವಿನಿಮಯ ಆಗಬೇಕು. ಹುಬ್ಬಳ್ಳಿ- ಬೆಳಗಾವಿಯಲ್ಲಿ ಅನೇಕ ಪ್ರತಿಭೆಗಳು, ಉದ್ಯಮಗಳು ಇವೆ. ಇಲ್ಲಿ ಪ್ರತಿಭೆ, ಉದ್ಯಮಗಳು ಬೆರೆಯುತ್ತಿವೆ. ಮಂಗಳೂರು- ಮೈಸೂರು ನಡುವೆ ಸಾಂಸ್ಕೃತಿಕ ವಿನಿಮಯ ಆಗಬೇಕು. ರಫ್ತುದಾರರು ಪಕ್ಕದ ರಾಜ್ಯಗಳ ಮೇಲೆ ಅವಲಂಬನೆ ಆಗಿದ್ದಾರೆ. ಅದು ನಮ್ಮ ರಾಜ್ಯದಿಂದಲೇ ಆಗುವ ಕೆಲಸ ಆಗಬೇಕು. ರಾಜ್ಯದ ಎಲ್ಲ ಜಿಲ್ಲೆಗಳನ್ನು ಜೋಡಿಸಿ ಪ್ರತಿಭೆ, ಉದ್ಯಮಗಳ ಕೌಶಲ್ಯದ ಹಂಚಿಕೆ ಮಾಡಿಕೊಳ್ಳಬೇಕು. ಹಾಗೇ ಕೃಷಿಕ- ಕಾರ್ಪೋರೇಟ್ ವಿನಿಮಯ ಆಗಬೇಕು ಎಂದು ಹಂಸಲೇಖ ಹೇಳಿದರು.

ದಸರಾ ಉದ್ಘಾಟನೆಗೆ ಕಾರಣ ಯಾರು ಎಂದು ಹೇಳಿದ ಹಂಸಲೇಖ

ಯಾರನ್ನು ನೆನೆಯಲಿ?

ಯಾರ‌್ಯಾರ ನೆನೆಯಲಿ ನಾನು? ಅಪ್ಪ ಗೋವಿಂದರಾಜು, ಅವ್ವ ರಾಮಮ್ಮ, ಗುರು ನೀಲಕಂಠ, ರಕ್ತದೊಳಗಿನ ನಾದ, ಚಂದನವನ, ಸರ್ಕಾರ, ಸಂವಿಧಾನ ಹೀಗೆ ನಾನು ಯಾರನ್ನು ನೆನೆಯಲಿ? ಸಂವಿಧಾನದ ದನಿ, ಗುಡ್‌ಶಫರ್ಡ್ ಸಿದ್ದರಾಮಯ್ಯ, ಶಕ್ತಿ ಸಂಘಟಕ ಡಿಸಿಎಂ ಡಿ.ಕೆ.ಶಿವಕುಮಾರ್, ನನ್ನ ಹೆಸರು ಶಿಫಾರಸು ಮಾಡಿದ ಡಾ.ಎಚ್.ಸಿ. ಮಹದೇವಪ್ಪ, ನನ್ನ ಹೆಂಡತಿ – ಮಕ್ಕಳು, ಭೀಮ ಪರಿವಾರ.. ಯಾರನ್ನು ನೆನೆಯಲಿ? ಭೂಮಿ ತಾಯಿಯನ್ನು ನೆನೆದರೆ ಎಲ್ಲರನ್ನೂ ನೆನದಂತೆ ಎಂದು ಹಂಸಲೇಖ ಅವರು ಕಾವ್ಯಾತ್ಮಕವಾಗಿ ಉಲ್ಲೇಖಿಸಿದರು.

ಕನ್ನಡ ನಮ್ಮ ಕೃತಿ ಆಗಬೇಕು – ಅಭಿವೃದ್ಧಿ ನಮ್ಮ ಶೃತಿ ಆಗಬೇಕು

ಕನ್ನಡ ನಮಗೆ ಶೃತಿ ಆಗಬೇಕು. ಕನ್ನಡ ಅಭಿವೃದ್ಧಿ ಕೃತಿ ಆಗಬೇಕು. ಕಾವೇರಿಗೆ ಮಿತಿ ಇದೆ, ಕಾವೇರಿಯ ಕಾರುಣ್ಯಕ್ಕೆ ಮಿತಿ ಇಲ್ಲ. ಗಂಗೆ, ಕಾವೇರಿ ಪರಸ್ಪರ ಮುಟ್ಟಲು ಸಾಧ್ಯವಿಲ್ಲ. ಆದರೆ, ಬಂಗಾಳ ಕೊಲ್ಲಿ ಮುಟ್ಟುತ್ತವೆ. ನಮ್ಮ ಕನ್ನಡವನ್ನು ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು. ಶಾಂತಿಮಂತ್ರ ಕನ್ನಡ ನಮ್ಮ ಒಂದಂಶದ ಕಾರ್ಯಕ್ರಮ ಆಗಬೇಕು. ಕನ್ನಡ ದೀಪ, ಶೃತಿ, ಅಭಿವೃದ್ಧಿ, ಶಾಂತಿ, ಸಮೃದ್ಧಿಗೆ ಕಾರಣರಾದವರಿಗೆ ನನ್ನ ಶರಣು. ಕನ್ನಡ ಗುಡಿ, ಪ್ರೇಮಾಲಯಕ್ಕೆ ಎಲ್ಲರಿಗೂ ಸ್ವಾಗತ. ಕನ್ನಡ ಏಕೀಕರಣಕ್ಕೆ ಐದು ದಶಕವಾಗಿದೆ. ನನ್ನ ಕಲಾ ಸೇವೆಗೂ 50 ವರ್ಷ ಆಗಿದೆ. ನಾನು ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದು ಹಂಸಲೇಖ ವಿವರಿಸಿದರು.

ದೆಹಲಿಗೆ ಕನ್ನಡ ಬೇಡವಾಗಿದೆ

ನಮಗೆ ದೆಹಲಿ ಬೇಕು. ದೆಹಲಿಗೂ ನಾವು ಬೇಕು. ಆದರೆ, ದೆಹಲಿಗೆ ಯಾಕೋ ಕನ್ನಡ ಬೇಡ ಎಂದು ಅನ್ನಿಸುತ್ತಿದೆ. ಆದರೆ, ನಾವದಕ್ಕೆ ತಲೆಕೆಡಿಸಿಕೊಳ್ಳುವುದು ಬೇಡ. ಇಡೀ ಪ್ರಪಂಚದಲ್ಲಿ ಕನ್ನಡದ ಪ್ರತಿಷ್ಠಾಪನೆಯಾಗಬೇಕು. ನಮ್ಮ ಕನ್ನಡ ಜಗತ್ತಿನಾದ್ಯಂತ ಪಸರಿಸುವ ಕೆಲಸ ಆಗಬೇಕು. ಕನ್ನಡದ ಶಾಂತಿ ಸಮೃದ್ಧಿಯನ್ನು ನಾವು ಹೇಗೆ ಗುರಿತಿಸಿಕೊಳ್ಳಬೇಕು? ಎಂಬುದನ್ನು ನಾವು ನೋಡಬೇಕು ಎಂದು ಹಂಸಲೇಖ ಹೇಳಿದರು.

ಜೀವಂತ ದಸರಾ ಮಹಾ ಕಾವ್ಯವನ್ನು ಬರೆಯಲಿ

ಅಂದು ಸಮರ ಕಥಾ ದ್ರವ್ಯ. ಇಂದು ಜೀವಂತ ಮಹಾಕಾವ್ಯ. ದಸರಾ ಜೀವಂತ ಮಹಾಕಾವ್ಯ.ವಾಗಿದೆ. ಇದರ ಕಥಾ ದ್ರವ್ಯ ದಕ್ಷಿಣ ಭಾರತದ ವೀರರು. ಚಿನ್ನದ ಮಳೆ ಸುರಿಸಿದ ವಿಜಯನಗರ ದಸರಾಕ್ಕೆ “ಸಮರ ಕಥಾದ್ರವ್ಯ” ಎಂದು ಹೇಳಬಹುದು. ಈಗಿನದ್ದು ಸಂಭ್ರಮದ ಕಥಾ ದ್ರವ್ಯವಾಗಿದ್ದರಿಂದ ಈ ಜೀವಂತ ದಸರಾವು ಮುಂದೆ ಮಹಾ ಕಾವ್ಯವನ್ನು ಬರೆಯಲಿ ಎಂದು ಆಶಿಸುವುದಾಗಿ ಹಂಸಲೇಖ ಹೇಳಿದರು.

ಚಾಮುಂಡಿ ಬೆಟ್ಟಕ್ಕೆ ಶಾಶ್ವತ ವಿದ್ಯತ್‌ ದೀಪಾಲಂಕಾರಕ್ಕೆ ಬೇಡಿಕೆ

ಚಾಮುಂಡಿಬೆಟ್ಟಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರಕ್ಕೆ ಸರ್ಕಾರ ವ್ಯವಸ್ಥೆ ಮಾಡಬೇಕು. ಮೈಸೂರು ವಿಮಾನ ನಿಲ್ದಾಣಕ್ಕೆ ರಾತ್ರಿ ಹೊತ್ತು ಜನ ಬರುತ್ತಾರೆ. ಅವರಿಗೆ ಚಾಮುಂಡಿಬೆಟ್ಟ ಸುಂದರವಾಗಿ ಕಾಣಬೇಕು ಎಂದು ಹಂಸಲೇಖ ಅವರು ಇದೇ ವೇಳೆ ಸೂಕ್ತ ಸಲಹೆ ನೀಡಿದರು.

ಇದನ್ನೂ ಓದಿ: Mysore dasara : 414ನೇ ಮೈಸೂರು ದಸರಾ ಮಹೋತ್ಸವಕ್ಕೆ ಹಂಸಲೇಖರಿಂದ ಅದ್ಧೂರಿ ಚಾಲನೆ

ಹಂಸಲೇಖರಿಗೆ ಗೌರವಿಸಿದ ಸಿಎಂ

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಹಂಸಲೇಖ ಅವರಿಗೆ ಗೌರವ ಸಲ್ಲಿಸಿದರು. ಹಂಸಲೇಖ ಅವರಿಗೆ ಸರಸ್ವತಿಯ ಗಂಧದ ವಿಗ್ರಹ ನೀಡಿ ಗೌರವ ಸಲ್ಲಿಸಲಾಯಿತು. ವೀಣಾ ವಾದನ ಭಂಗಿಯ ಸರಸ್ವತಿ ವಿಗ್ರಹ ಇದಾಗಿದೆ.

Exit mobile version