ಮೈಸೂರು: ಜಿಲ್ಲೆಯ ತಿ. ನರಸೀಪುರ ತಾಲೂಕಿನ ಸೋಸಲೆ ಗ್ರಾಮದಲ್ಲಿ 8ನೇ ಚಾತುರ್ಮಾಸ್ಯ ವ್ರತ ನಡೆಸಲು ನಿರ್ಧರಿಸಿರುವುದಾಗಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ವ್ಯಾಸರಾಜರ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ (Mysore News) ತಿಳಿಸಿದರು.
ನ್ಯಾಯ ಸುಧಾ ಮಂಗಳ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಧನ್ಯತಾ ಸಮರ್ಪಣೆ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ವ್ಯಾಸರಾಜರ ಮಠದ ಪರಂಪರೆಯಲ್ಲಿ ಸೋಸಲೆಗೆ ಮಹತ್ವದ ಸ್ಥಾನವಿದೆ. ಚಾತುರ್ಮಾಸ್ಯದ ಅವಧಿಯಲ್ಲಿ ಎಲ್ಲ ಭಕ್ತರೂ ಕ್ಷೇತ್ರಕ್ಕೆ ಆಗಮಿಸಿ ಸತ್ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: Narendra Modi: ಪ್ರಧಾನಿ ಮೋದಿ ಜಮ್ಮು & ಕಾಶ್ಮೀರ ಪ್ರವಾಸ ಇಂದಿನಿಂದ; ಬಿಗಿ ಭದ್ರತೆ
ಆಗಸ್ಟ್ 2 ರಿಂದ ಸೆಪ್ಟೆಂಬರ್ 18ರವರೆಗೆ ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ನಾಗ ಚತುರ್ಥಿ, ಪಂಚಮಿ, ವರಮಹಾಲಕ್ಷ್ಮೀ ವ್ರತ, ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವ, ಕೃಷ್ಣ ಜಯಂತಿ, ಗಣೇಶ ಚೌತಿ, ಅನಂತ ವ್ರತ, ಸೀಮೋಲ್ಲಂಘನ ನೆರವೇರಲಿದೆ. ಮುದ್ರಾಧಾರಣೆ, ಭಕ್ತರಿಗೆ ಫಲ ಮಂತ್ರಾಕ್ಷತೆ ಅನುಗ್ರಹವೂ ಇರಲಿದೆ. ಚಾತುರ್ಮಾಸ ಅವಧಿಯಲ್ಲಿ ಎಲ್ಲಾ ವ್ರತ, ನಿಯಮಗಳನ್ನು ಇದೇ ಕ್ಷೇತ್ರದಲ್ಲಿ ಆಚರಿಸಲು ಸಂಸ್ಥಾನ ನಿರ್ಧರಿಸಿದ್ದು, ಭಕ್ತರು ಸತ್ಕಾರ್ಯ ಸಾಧನೆಗೆ ಸಂಗಮಿಸಬೇಕು ಎಂದು ಶ್ರೀಗಳು ಹೇಳಿದರು.
ಶ್ರೀಮನ್ ನ್ಯಾಯ ಸುಧಾ ಮಂಗಳ ಯಶ
ದೈವ ಕೃಪೆ ಮತ್ತು ಗುರು ಶ್ರೀ ವ್ಯಾಸತೀರ್ಥರ ಪರಮ ಅನುಗ್ರಹದಿಂದ ಶ್ರೀ ನ್ಯಾಯ ಸುಧಾ ಮಂಗಳ ಮಹೋತ್ಸವ ಯಶಗೊಂಡಿದೆ. 9 ದಿನಗಳ ಮಹೋತ್ಸವದ ಹಿನ್ನೆಲೆಯಲ್ಲಿ 25ಕ್ಕೂ ಹೆಚ್ಚು ವಿವಿಧ ಮಠಾಧಿಪತಿಗಳು, ರಾಜ್ಯ ಮತ್ತು ಹೊರ ರಾಜ್ಯಗಳ ಸಾವಿರಾರು ಭಕ್ತರು ಸಂಗಮಿಸಿದ್ದರು. ನಮ್ಮ ವಿದ್ಯಾಪೀಠದ 4 ಯುವಕರು ವಿದ್ವತ್ ಸಭೆಯಲ್ಲಿ ಶ್ರೀ ಮನ್ ನ್ಯಾಯ ಸುಧಾ ಮತ್ತು ವ್ಯಾಸತ್ರಯ ಗ್ರಂಥಗಳ ಪರೀಕ್ಷೆ ಎದುರಿಸಿ ‘ಸುಧಾ ಪಂಡಿತ’ ರೆಂದು ಮಾನ್ಯರಾಗಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ಹಿಂದೆ ನೂರಾರು ಕಾರ್ಯಕರ್ತರ ಶ್ರಮ ಸಮರ್ಪಣೆ ಆಗಿದೆ. ಅವರೆಲ್ಲರಿಗೂ ಮಂಗಳವಾಗಲಿ ಎಂದು ಶ್ರೀಗಳು ಆಶಿಸಿದರು.
ಇದನ್ನೂ ಓದಿ: Team India Coach: ಇಂದು ಟೀಮ್ ಇಂಡಿಯಾದ ನೂತನ ಕೋಚ್ ಹೆಸರು ಘೋಷಣೆ!
ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಿ.ಪಿ. ಮಧುಸೂದನ ಆಚಾರ್ಯ, ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ, ಬೆಂಗಳೂರಿನ ಪೇಜಾವರ ವಿದ್ಯಾಪೀಠದ ಪ್ರಾಧ್ಯಾಪಕ ವಿದ್ವಾನ್ ಮಾತರಿಶ್ವ ಆಚಾರ್ಯ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗೋ. ಮಧುಸೂದನ, ಜನ ಸೇವಾ ಕೇಂದ್ರದ ಮುಖ್ಯಸ್ಥ ಮಧುಸೂದನ ಮಾತನಾಡಿದರು.