Site icon Vistara News

Mysore News: ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ; ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ

All achievements in life are easy if there is Guru's grace says Sri Satyatmatirtha Swamiji

ಮೈಸೂರು: ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ (Mysore News) ತಿಳಿಸಿದರು.

ಜೆಪಿ ನಗರದ ವಿಠಲಧಾಮದ ಭವ್ಯ ವೇದಿಕೆಯಲ್ಲಿ ಶ್ರೀ ಸೋಸಲೆ ವ್ಯಾಸರಾಜ ಮಠ ಆಯೋಜನೆ ಮಾಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಶುಕ್ರವಾರದ ವಿದ್ವತ್ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ವಿದ್ಯಾರ್ಥಿಗಳು ಶ್ರಮ ವಹಿಸಿ ಅಧ್ಯಯನ ಮಾಡಿರುವುದು ಒಂದೆಡೆಯಾದರೆ ಅವರಲ್ಲಿ ಧೈರ್ಯ, ಸದಾಚಾರ, ಸಂಸ್ಕಾರ, ನೈತಿಕತೆ ಮತ್ತು ಜೀವನ ಕ್ರಮದ ಮಾರ್ಗವನ್ನು ಕಲಿಯುವುದು ಗುರುವಿನ ಅನುಸರಣೆಯಿಂದ ಮಾತ್ರ. ಈ ನಿಟ್ಟಿನಲ್ಲಿ ಇಂದು ಸುಧಾಮಂಗಳ ಮಾಡುತ್ತಿರುವ ವಿದ್ಯಾರ್ಥಿಗಳಾದ ಸೌಮಿತ್ರಿ, ಸುಘೋಷ, ಪ್ರಣವ ಮತ್ತು ಹೊನ್ನಾಳಿ ಆಯಾಚಿತ ಶ್ರೀಶ ಆಚಾರ್ಯರು ಪಂಡಿತರು ಮತ್ತು ವಿದ್ವಾಂಸರು ಮೆಚ್ಚುವಂತಹ ಮುಕ್ತ ಪರೀಕ್ಷೆ ನೀಡಿದ್ದಾರೆ. ಅವರಿಗೆ ಉನ್ನತೋನ್ನತ ಪ್ರಗತಿ ಆಗಲಿ ಎಂದು ಸತ್ಯಾತ್ಮ ಶ್ರೀಗಳು ಆಶೀರ್ವಾದ ಪೂರ್ವಕವಾಗಿ ಹೇಳಿದರು.

ಇದನ್ನೂ ಓದಿ: World Food Safety Day: ಆಹಾರ ಸುರಕ್ಷತೆಗಾಗಿ ನಾವು ಏನು ಮಾಡಬಹುದು?

ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು ಮಾತನಾಡಿ, ಶ್ರೀ ವಿದ್ಯಾಶ್ರೀಶ ತೀರ್ಥರು ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಮೂಲಕ ಯುವ-ನವ ವಿದ್ವಾಂಸರನ್ನು ತರಬೇತುಗೊಳಿಸಿ ಸಮಾಜಕ್ಕೆ ಮಹತ್ವದ ಕೊಡುಗೆಯನ್ನಾಗಿ ನೀಡುತ್ತಿದ್ದಾರೆ. ಅವರ ಸೇವೆ ಮಹತ್ತರವಾಗಿದೆ. ವಿದ್ಯಾರ್ಥಿಗಳು ಪಂಡಿತರಾಗಿ ಭಾರತೀಯ ಸನಾತನ ಪರಂಪರೆಯ ಪ್ರತೀಕವೂ ಆಗಿ ದೇಶದ ಸಂಸ್ಕೃತಿಯನ್ನು ಮುನ್ನಡೆಸುವಂತಾಗಲಿ ಎಂದು ತಿಳಿಸಿದರು.

ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯರು ಮಾತನಾಡಿ, ಪೇಜಾವರ ಶ್ರೀ ವಿಶ್ವೇಶ ತೀರ್ಥರು ನಮ್ಮ ವಿದ್ಯಾಪೀಠಕ್ಕೆ ಪ್ರಪ್ರಥಮವಾಗಿ ಸ್ಪೂರ್ತಿ ಮತ್ತು ಚೈತನ್ಯ ನೀಡಿದವರು ಎಂದು ಸ್ಮರಿಸಿದರು.

ಕಳೆದ ಎಂಟು ವರ್ಷಗಳ ಹಿಂದೆ ಶ್ರೀ ವ್ಯಾಸ ತೀರ್ಥ ವಿದ್ಯಾಪೀಠ ತಿರುಮಕೂಡಲು ಕ್ಷೇತ್ರದಲ್ಲಿ ಆರಂಭವಾದಾಗ ಸ್ವತಃ ನನ್ನ ತಾಯಿಯವರೇ ಎಲ್ಲ ಮಕ್ಕಳಿಗೂ ಅಡುಗೆ ಮಾಡಿ ಕೈ ತುತ್ತು ಹಾಕಿ ಬೆಳೆಸಿದರು. ವಿದ್ಯಾರ್ಥಿಗಳ ಸಮಗ್ರ ಕ್ಷೇಮ ಪಾಲನೆಯಲ್ಲಿ ಪ್ರತಿನಿತ್ಯವೂ ನೂರಾರು ಸಮಸ್ಯೆ ಎದುರಾದರು ಅವೆಲ್ಲವೂ ಗುರುಗಳ ಪರಮ ಅನುಗ್ರಹದಿಂದ ನಿವಾರಣೆಯಾಗಿ ಇಂದು ನಾಲ್ವರು ಪಂಡಿತರಾಗುವ ಮಟ್ಟದವರೆಗೆ ಸಂಸ್ಥೆ ಬೆಳೆದಿದೆ. ಇವುಗಳ ಹಿಂದೆ ಸೋಸಲ ಶ್ರೀ ವಿದ್ಯಾಶ್ರೀಶ ತೀರ್ಥರ ಪರಿಶ್ರಮ ಅಗಾಧವಾಗಿದೆ ಎಂದರು.

ವಿದ್ಯಾಪೀಠದ ವ್ಯವಸ್ಥಾಪಕ ಟ್ರಸ್ಟಿ ಶೇಷಗಿರಿ ಆಚಾರ್ಯ ಮಾತನಾಡಿ, ಸುಧಾ ಪರೀಕ್ಷೆ ಎಂಬುದು ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ, ವಿದ್ವಾಂಸರೂ ತಮ್ಮನ್ನು ತಾವು ಸರಿಪಡಿಸಿಕೊಳ್ಳಲು, ಜ್ಞಾನದ ಶಾಖೆಯನ್ನು ಉನ್ನತೀಕರಿಸಿಕೊಳ್ಳಲು ಮಹೋನ್ನತವಾದ ವೇದಿಕೆಯಾಗಿದೆ ಎಂದರು.

ಇದನ್ನೂ ಒದಿ: Cyber Crime: ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ

ಸುಧಾ ಪರೀಕ್ಷೆ ಎದುರಿಸಿ, ವಿದ್ವಾಂಸರ ಪ್ರಶಂಸೆಗೆ ಭಾಜನರಾದ ಆಯಾಚಿತ ಶ್ರೀ ಶ ಮತ್ತು ಸುಘೋಷ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆಯಾಚಿತ ಶ್ರೀ ಶ ಮಾತನಾಡಿ, ಬಡತನದ ಬೇಗೆಯಲ್ಲಿ ನಾನು ಇದ್ದರೂ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರೂ ಸೋಸಲೆ ಶ್ರೀಗಳು ನನ್ನನ್ನು ಕೈಹಿಡಿದು ಅನ್ನ, ಆಹಾರವನ್ನು ನೀಡಿ ವಿದ್ಯಾದಾನ ಮಾಡಿದರು. ಕಳೆದ ವರ್ಷ ನನ್ನ ಸಹೋದರಿಯ ವಿವಾಹ ಸಂದರ್ಭದಲ್ಲಿಯೂ ನಮ್ಮ ಬಡತನವನ್ನು ಕಂಡು ಸಂಪೂರ್ಣ ವಿವಾಹದ ಜವಾಬ್ದಾರಿಯನ್ನು ಮಠದಿಂದಲೇ ನಿರ್ವಹಿಸಿದ್ದನ್ನು ಜೀವನದಲ್ಲಿ ಮರೆಯಲಾಗದು ಎಂದು ತಿಳಿಸಿದರು.

ಪ್ರಣವ ಆಚಾರ್ಯ ಮಾತನಾಡಿ, ನಮ್ಮ ಪರೀಕ್ಷೆ ಮತ್ತು ಯಶಸ್ವಿಗಾಗಿ ಹಗಲು ಇರುಳು ಶ್ರಮಿಸಿದ ಉಪನ್ಯಾಸಕರು ಮತ್ತು ಪಂಡಿತರನ್ನು ಸ್ಮರಿಸಿಕೊಂಡರು. ಹಿರಿಯರ ಅನುಗ್ರಹದಿಂದಲೇ ನಮ್ಮ ಉನ್ನತಿ ಸಾಧ್ಯವಾಗಿದೆ ಎಂದು ಧನ್ಯತೆ ಸಮರ್ಪಿಸಿದರು.

ಹಿರಿಯ ವಿದ್ವಾಂಸ ಎ.ವಿ. ನಾಗಸಂಪಿಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಮಠ ಆಯೋಜಿಸಿದ್ದ ವಿಶೇಷ ಪ್ರದರ್ಶಿನಿ ಗಮನ ಸೆಳೆಯಿತು. ರಾಮಾಯಣ, ಮಹಾಭಾರತ ಶ್ರೀಮನ್ ನ್ಯಾಯ ಸುಧಾ, ವ್ಯಾಸತ್ರಗಳು, ವೇದಗಳು ಮತ್ತು ಉಪನಿಷತ್ತಿನ ವರ್ಣ ಚಿತ್ರಗಳು ವೀಕ್ಷಕರ ಗಮನಸೆಳೆದವು. ಸಂಜೆ ವಿವಿಧ ಭಜನಾ ಮಂಡಳಿಗಳು ನಾದಸ್ವರ ವೇದಘೋಷದೊಂದಿಗೆ ಶೋಭಾ ಯಾತ್ರೆ ಸಂಪನ್ನಗೊಂಡಿತು.

ಶ್ರೀ ವ್ಯಾಸರಾಜರಿಗೆ ಸಾಂಪ್ರದಾಯಿಕವಾಗಿ ದರ್ಬಾರ್ ಸಮರ್ಪಿಸಲಾಯಿತು. ವಿವಿಧ ಪೀಠಾಧೀಶರು ವ್ಯಾಸರಾಜರಿಗೆ ರತ್ನದ ಅಭಿಷೇಕ ಸಮರ್ಪಣೆ ಮಾಡಿದರು.

ಇದನ್ನೂ ಓದಿ: Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಶಸ್ತಿ ಪ್ರದಾನ

ವಿವಿಧ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕೆ.ಎಸ್. ಗುರುರಾಜ, ಎಚ್.ಆರ್. ನಾಗೇಂದ್ರ ಮತ್ತು ಎ.ಆರ್. ರಘುರಾಮ ಅವರಿಗೆ ಶ್ರೀಮಠದ ರಘುನಾಥ ತೀರ್ಥ ಅನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

Exit mobile version