Site icon Vistara News

Mysore News: ಶಾಸ್ತ್ರ ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ: ಮಂತ್ರಾಲಯ ಶ್ರೀ

Mantralaya Sri Subudhendra Theertha Swamiji ashirvachan

ಮೈಸೂರು: ಶಾಸ್ತ್ರ ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ ಇದೆ. ಹಾಗಾಗಿ ವಿದ್ಯಾರ್ಥಿಗಳು ವೇದ ವಿದ್ಯೆ ಸಂಪಾದನೆಗೆ ಶ್ರಮಿಸಬೇಕು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ: Team India : ಈ ಕೆಲಸ ಇಷ್ಟವಿದೆ; ಟೀಮ್ ಇಂಡಿಯಾ ಕೋಚ್​ ಹುದ್ದೆಯ ಬಗ್ಗೆ ಮೊದಲ ಹೇಳಿಕೆ ನೀಡಿದ ಗೌತಮ್ ಗಂಭೀರ್​

ನಗರದ ಕೃಷ್ಣಮೂರ್ತಿಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಸೋಸಲೆ ಶ್ರೀ ವ್ಯಾಸರಾಜ ಮಠ ಹಮ್ಮಿಕೊಂಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವಕ್ಕೆ ಭಾನುವಾರ ಸಂಜೆ ಚಾಲನೆ ನೀಡಿದ ನಂತರ ಶ್ರೀಗಳು ಆಶೀರ್ವಚನ ನೀಡಿದರು.

ಸೋಸಲೆ ವಿದ್ಯಾಪೀಠದ ವಿದ್ಯಾರ್ಥಿಗಳು ಸಮರ್ಥವಾಗಿ ಅಧ್ಯಯನ ನಡೆಸಿ ಶ್ರೀ ಜಯತೀರ್ಥರು ರಚಿಸಿದ ಸುಧಾ ಗ್ರಂಥದ ಬಗ್ಗೆ ಉತ್ತಮ ವ್ಯಾಖ್ಯಾನ ನೀಡಿದ್ದಾರೆ. ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಈ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡಿ ವಿದ್ಯಾರ್ಜನೆಗೆ ಶ್ರಮಿಸಿದ್ದಾರೆ. ಇದು ಯತಿಗಳು ಮುಂದಿನ ಪೀಳಿಗೆಗೆ ಮಾಡುವ ಮಾದರಿ ಕಾರ್ಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ನಿರ್ಭೀತಿಯಿಂದ, ಸಂಸ್ಕೃತದಲ್ಲಿ ಸುಲಲಿತವಾಗಿ ವಿಷಯದ ಅನುವಾದ, ವ್ಯಾಖ್ಯಾನ ಮತ್ತು ಮಂಡನೆ ಮಾಡುವ ಶೈಲಿಯನ್ನು ಕರಗತ ಮಾಡಿಕೊಂಡರೆ ಮುಂಬರುವ ದಿನಗಳಲ್ಲಿ ನಾಡಿನ ಖ್ಯಾತ ವಿದ್ವಾಂಸರಾಗಬಹುದು. ಇಂದು ಸುಧಾ ಪರೀಕ್ಷೆ ನೀಡಿದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸಾಧನಾ ಮಾರ್ಗದಲ್ಲಿ ಇದ್ದಾರೆ. ಪುಸ್ತಕ ನಿರಪೇಕ್ಷವಾಗಿ ವಿದ್ಯಾರ್ಥಿಗಳು ಮುಕ್ತ ಸಭೆಯಲ್ಲಿ ಪಂಡಿತರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ್ದಾರೆ. ಇದು ಅವರ ಕೌಶಲ ಮತ್ತು ಜ್ಞಾನದ ಉತ್ತಮ ಹಂತದ ದರ್ಶನ ಮಾಡಿಸಿದೆ ಎಂದು ಮಂತ್ರಾಲಯ ಶ್ರೀಗಳು ನುಡಿದರು.

ಸೋಸಲೆ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ವಿದ್ವತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: Gold Rate Today: ಚಿನ್ನ ಕೊಳ್ಳಲು ಇದೇ ಸೂಕ್ತ ಸಮಯ; ಮತ್ತೆ ಬಂಗಾರದ ದರ ಇಳಿಕೆ

ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಗುರುಕುಲ ಪದ್ಧತಿ ಅಧ್ಯಯನ ಮಾಡಿದ ಹಿರಿಯ ವಿದ್ಯಾರ್ಥಿಗಳಾದ ಸುಘೋಷ ಆಚಾರ್ಯ ಮತ್ತು ಪ್ರಣವ ಆಚಾರ್ಯ ಅವರು ಶ್ರೀಮನ್ ನ್ಯಾಯಸುಧಾ ಗ್ರಂಥದ ನವಿ ಲಕ್ಷಣತ್ವಾಧಿಕರಣದ ಮೌಖಿಕ ಪರೀಕ್ಷೆಯನ್ನು ಎದುರಿಸಿ ಪಂಡಿತರ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ನೀಡಿದರು.

ಈ ಸಂದರ್ಭದಲ್ಲಿ ಮಂತ್ರಾಲಯದ ಹಿರಿಯ ವಿದ್ವಾಂಸರಾದ ಮಹಾಮಹೋಪಾಧ್ಯಾಯ ರಾಜಾ ಎಸ್. ಗಿರಿ ಆಚಾರ್ಯ, ಗುರುಸಾರ್ವಭೌಮ ವಿದ್ಯಾಪೀಠದ ಪ್ರಾಚಾರ್ಯ ವಾದಿರಾಜ ಆಚಾರ್ಯ, ಶ್ರೀನಿವಾಸಮೂರ್ತಿ ಆಚಾರ್ಯ, ಬೆಂಗಳೂರಿನ ಪೇಜಾವರ ವಿದ್ಯಾಪೀಠದ ಪ್ರಾಧ್ಯಾಪಕ ಪಂಡಿತ ಮಾತರಿಶ್ವಾಚಾರ್ಯ, ವ್ಯಾಸತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಶ್ರೀನಿಧಿ ಆಚಾರ್ಯ ಪ್ಯಾಟಿ, ಹಿರಿಯರಾದ ವಿದ್ವಾಂಸ ಶೇಷಗಿರಿ ಆಚಾರ್ಯ, ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ.ಡಿ.ಪಿ. ಮಧುಸೂದನಾಚಾರ್ಯ ಇತರರು ಹಾಜರಿದ್ದರು.

ಇಂದಿನ ಕಾರ್ಯಕ್ರಮ ಏನೇನು?

ಜೂ. 3ರಂದು ಸೋಮವಾರ ದಿನಪೂರ್ಣ ನಾಲ್ವರು ವಿದ್ಯಾರ್ಥಿಗಳಿಗೆ ಶ್ರೀ ಸುಧಾ ಗ್ರಂಥದ ಮೇಲಿನ ಮೌಖಿಕ ಪರೀಕ್ಷೆ, ವ್ಯಾಖ್ಯಾನಗಳು ನಡೆಯಲಿದೆ. ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಶ್ರೀ ಸತ್ಯಾತ್ಮ ತೀರ್ಥರು, ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ತಮ್ಮ ತಮ್ಮ ಸಂಸ್ಥಾನ ದೇವರುಗಳಿಗೆ ಪೂಜೆ ಸಮರ್ಪಿಸಲಿದ್ದಾರೆ. ನಂತರ ವಿದ್ವತ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಇಡೀ ದಿನದ ಕಲಾಪ ಸಂಪನ್ನಗೊಳ್ಳಿದೆ. ನಾಡಿನ ವಿವಿಧ ಮಠ- ಪೀಠದ ವಿದ್ವಾಂಸರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: 2nd PUC Exam 3: ದ್ವಿತೀಯ ಪಿಯುಸಿ ಪರೀಕ್ಷೆ-3ರ ದಂಡಸಹಿತ ಶುಲ್ಕ ಪಾವತಿಗೆ ಇಂದೇ ಕೊನೇ ದಿನ

ರಂಜಿಸಲಿದೆ ದಾಸವಾಣಿ

ಜೂ.3 ರಂದು ಸೋಮವಾರ ಸಂಜೆ 6ಕ್ಕೆ ವಿದ್ವಾನ್ ಸಮೀರಾಚಾರ್ಯರಿಂದ ದಾಸವಾಣಿ ಸಂಗೀತ ಕಛೇರಿ ನಡೆಯಲಿದೆ.

Exit mobile version