ಮೈಸೂರು: ದೇವರ ಅನುಗ್ರಹ ದೊರೆತರೆ ಜೀವನದ ಎಲ್ಲ ತಾಪಗಳೂ ನಿವಾರಣೆ ಆಗುತ್ತವೆ ಎಂದು ಸೋಸಲೆ ಶ್ರೀ ವ್ಯಾಸರಾಜರ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ (Mysore News) ತಿಳಿಸಿದರು.
ಸೋಸಲೆ ಗ್ರಾಮದ ವ್ಯಾಸರಾಜರ ಮಠದಲ್ಲಿ ಶುಕ್ರವಾರ ವಿಧ್ಯುಕ್ತವಾಗಿ 8ನೇ ಚಾತುರ್ಮಾಸ ವ್ರತ ದೀಕ್ಷೆ ಸ್ವೀಕರಿಸಿ ಅಮೃತೋಪದೇಶ ನೀಡಿದ ಶ್ರೀಗಳು, ಸಮೃದ್ಧವಾಗಿ ಮಳೆ ಸುರಿದರೆ ಇಳೆ ತಂಪಾಗುತ್ತದೆ. ಹಲವು ರೀತಿಯ ಸಸ್ಯಗಳು ಹೂವು, ಕಾಯಿ, ಹಣ್ಣು ಬಿಡುತ್ತವೆ. ಹಾಗೆಯೇ ಶ್ರೀಕೃಷ್ಣನ ಕೃಪೆ ನಮ್ಮ ಮೇಲೆ ಬಿದ್ದರೆ ಸಂಕಷ್ಟಗಳೆಲ್ಲವೂ ಕರಗಿ ಜೀವನ ಸಮೃದ್ಧಿಯಾಗುತ್ತದೆ. ಆದ ಕಾರಣ ನಾವು ಬೇಡುವುದಾದರೆ ದೇವರ ಅನುಗ್ರಹವನ್ನೇ ಬೇಡೋಣ ಎಂದು ಅವರು ಹೇಳಿದರು.
ಇದನ್ನೂ ಓದಿ: Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ
ಸಜ್ಜನರು, ಸಾಧಕರು, ತಪಸ್ವಿಗಳು ಮತ್ತು ಜ್ಞಾನಿಗಳು ಯಾವಾಗಲೂ ಚಾತಕ ಪಕ್ಷಿಗಳಂತೆ ಭಗವಂತನ ಕರುಣಾ ದೃಷ್ಟಿಗಾಗಿ ಕಾಯುತ್ತಿರುತ್ತಾರೆ. ಶ್ರೀಕೃಷ್ಣನೆಂಬ ಮೇಘವು ಅನುಗ್ರಹವೆಂಬ ಮಳೆಯನ್ನು ಸುರಿಸಲಿ ಎಂದು ಪ್ರಾರ್ಥಿಸುತ್ತಾರೆ. ಕೃಪೆಯ ವೃಷ್ಟಿಯಾದರೆ ಲೌಕಿಕ ಜೀವನದ ಯಾವ ಸಮಸ್ಯೆಗಳೂ ನಮ್ಮನ್ನು ಕಾಡಲಾರವು. ಆದಕಾರಣ ದಕ್ಷಿಣಾಯಣ ಪುಣ್ಯಕಾಲದ ಚಾತುರ್ಮಾಸ ವ್ರತ ಸ್ವೀಕಾರದ ಈ ಸಂದರ್ಭದಲ್ಲಿ ನಾವೆಲ್ಲರೂ ಭಗವಂತನ ಮಹಾಕೃಪೆಗಾಗಿ ಶ್ರದ್ಧೆಯಿಂದ ಪ್ರಾರ್ಥನೆ ಸಮರ್ಪಿಸೋಣ ಎಂದು ಶ್ರೀ ವಿದ್ಯಾಶ್ರೀಶ ತೀರ್ಥರು ಹೇಳಿದರು.
ಲೋಕಹಿತಕ್ಕಾಗಿ ಪ್ರಾರ್ಥನೆ ಮಾಡೋಣ
ಚಾತುರ್ಮಾಸ ಪರ್ಯಂತ ನಾವೆಲ್ಲರೂ ವ್ರತ, ನಿಯಮ ಮತ್ತು ಆಹಾರ ಪದ್ಧತಿ ಅನುಸರಿಸೋಣ. ಶಾರೀರಿಕವಾಗಿ, ಮಾನಸಿಕವಾಗಿ ಸದೃಢರಾಗಿ ಜ್ಞಾನ ಕಾರ್ಯಗಳನ್ನು ಹೆಚ್ಚಾಗಿ ನಡೆಸೋಣ. ಮಹಾಗುರು ಶ್ರೀ ವ್ಯಾಸರಾಜರು ಹೇಳಿದ ಮಾರ್ಗದಲ್ಲಿ ಸಾಗಿ, ಮುಖ್ಯಪ್ರಾಣನನ್ನು ಅನಂತವಾಗಿ ಅರ್ಚಿಸೋಣ. ನಮ್ಮ ಪರಂಪರೆಯ 8 ಯತಿಗಳು ವೃಂದಾನವಸ್ಥರಾಗಿರುವ ಈ ಕ್ಷೇತ್ರದಲ್ಲಿ ನಮ್ಮ ಶ್ರದ್ಧಾಪೂರ್ವಕ ಆಚರಣೆಗಳನ್ನು ಮಾಡುತ್ತಾ, ಲೋಕಹಿತಕ್ಕಾಗಿ ಪ್ರಾರ್ಥನೆ ಮಾಡೋಣ ಎಂದು ಶ್ರೀಗಳು ನುಡಿದರು.
ಮಹಾ ಸಂಸ್ಥಾನದ ದಿವಾನರಾದ ಬ್ರಹ್ಮಣ್ಯ ಆಚಾರ್ಯ, ಚಾತುರ್ಮಾಸ ಸಂಕಲ್ಪ ವಿಧಿಗಳನ್ನು ಪಠಿಸಿದರು. ಸೋಸಲೆ ಮಠದ ವ್ಯವಸ್ಥಾಪಕ ಶ್ರೀಧರ, ಸಿಇಒ ಬದರೀನಾಥ, ಬಲಸೇವೆ ಕೃಷ್ಣಾಚಾರ್ಯ, ಚಾತುರ್ಮಾಸ ಸಮಿತಿ ಮುಖ್ಯಸ್ಥ ರಾಯರ ಹುಂಡಿ ಆನಂದ ಆಚಾರ್ಯ, ಮಠಾಧಿಕಾರಿಗಳಾದ ಪವಮಾನಾಚಾರ್ಯ ಕಂಬಾಲೂರು ಮತ್ತು ವೆಂಕಟಣ್ಣ ಇತರರು ಹಾಜರಿದ್ದರು.
ಸಂಸ್ಥಾನ ಪೂಜೆ- ಹಸಿ ದರ್ಬಾರ್
ಚಾತುರ್ಮಾಸ ಸಂಕಲ್ಪಕ್ಕೂ ಮುನ್ನ ಸ್ವಾಮೀಜಿ, ಸಂಸ್ಥಾನ ಪ್ರತಿಮಾ ಶ್ರೀ ಮೂಲ ಗೋಪಾಲಕೃಷ್ಣದೇವರ ಪೂಜೆ ನೆರವೇರಿಸಿ, ಪರಂಪರೆಯ ಹಿರಿಯ ಗುರುಗಳ ವೃಂದಾವನಗಳಿಗೆ ಹಸ್ತೋದಕ ಸಮರ್ಪಣೆ ಮಾಡಿದರು. ವಿದ್ವಾಂಸರಿಂದ ವೇದಘೋಷವಾದನಂತರ ವ್ರತ ಸಂಕಲ್ಪ ಮಾಡಿದಾಗ ಶ್ರೀ ರಾಮೇಶ್ವರಂನಿಂದ ಆಗಮಿಸಿದ್ದ ಪ್ರಧಾನ ಅರ್ಚಕರು ಶ್ರೀಗಳಿಗೆ ದೇವರ ಪ್ರಸಾದ, ಪುಷ್ಪಮಾಲೆ ಪ್ರದಾನ ಮಾಡಿದರು. ನಂತರ ವಿಶೇಷ ವೇದಿಕೆಯಲ್ಲಿ ಶ್ರೀಗಳು ಸಾಂಪ್ರದಾಯಿಕ ವಸ್ತ್ರ, ಪೇಟಾ ಧರಿಸಿ ಹಸಿ ದರ್ಬಾರ್ ನಡೆಸಿ, ನೂರಾರು ಭಕ್ತರಿಗೆ ಮಂತ್ರಾಕ್ಷತೆ ಅನುಗ್ರಹ ಮಾಡಿದ್ದು ವಿಶೇಷವಾಗಿತ್ತು.