Site icon Vistara News

Mahisha Dasara : ಮಹಿಷ ದಸರಾವೂ ಇಲ್ಲ, ಚಾಮುಂಡಿ ಚಲೋವೂ ಇಲ್ಲ; ಎರಡಕ್ಕೂ ಸರ್ಕಾರ ಬ್ರೇಕ್‌

Mahisha Dasara not allowed

ಮೈಸೂರು: ಮೈಸೂರಿನಲ್ಲಿ ಮುಂದಿನ ಅಕ್ಟೋಬರ್‌ 13ರಂದು ಆಯೋಜಿಸಲು ಉದ್ದೇಶಿಸಿದ್ದ ಮಹಿಷ ದಸರಾ (Mahisha Dasara) ಮತ್ತು ಅದಕ್ಕೆ ಪ್ರತಿಯಾಗಿ ಆಯೋಜನೆಗೊಂಡ ಚಾಮುಂಡಿ ಚಲೋ (Chamundi Chalo) ಎರಡಕ್ಕೂ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಈ ಮೂಲಕ ಅಂದು ನಡೆಯಬಹುದಾಗಿದ್ದ ಸಂಘರ್ಷಮಯ ಮುಖಾಮುಖಿಯನ್ನು ತಪ್ಪಿಸಿದ್ದಾರೆ.

ಮಹಿಷ ದಸರಾ ಆಚರಣೆ ಸಮಿತಿಯು ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಗರದ ಟೌನ್‌ ಹಾಲ್‌ನಲ್ಲಿ ಒಂದು ದಿನದ ಕಾರ್ಯಕ್ರಮ ಆಯೋಜಿಸಿತ್ತು. ಇತ್ತ ಇದನ್ನು ಖಂಡಿಸಿ ಸಂಸದ ಪ್ರತಾಪ್‌ ಸಿಂಹ ನೇತೃತ್ವದಲ್ಲಿ ಅಂದೇ ಚಾಮುಂಡಿ ಚಲೋ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆದರೆ, ಎರಡು ಕಾರ್ಯಕ್ರಮಗಳಿಗೂ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.

ಮೈಸೂರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡೂ ಕಾರ್ಯಕ್ರಮಗಳಿಗು ಅನುಮತಿ ನಿರಾಕರಣೆ ಮಾಡಿದ್ದೇವೆ. ಎರಡೂ ಕಾರ್ಯಕ್ರಮಗಳಿಗೆ ಅನುಮತಿ ನೀಡಿದಲ್ಲಿ, ಮೈಸೂರಿನ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ. ಹೀಗಾಗಿ ಪೊಲೀಸ್‌ ಇಲಾಖೆ ಎರಡೂ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಎರಡು ಕಾರ್ಯಕ್ರಮಗಳಿಗೂ ಪೊಲೀಸ್ ಇಲಾಖೆ ಅನುಮತಿಯನ್ನು ನಿರಾಕರಿಸಿದೆ ಎಂದು ಮೈಸೂರು ನಗರದ ಪೊಲೀಸ್ ಅಯುಕ್ತ ಚಿ. ರಮೇಶ್‌ ಬಾನೋತ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ʻʻಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮಹಿಷ ದಸರಾ ಚಾಮುಂಡಿ ಚಲೋಗೆ ಬ್ರೇಕ್ ಹಾಕಿದ್ದೇವೆʼʼ ಎಂದು ಮೈಸೂರಿನಲ್ಲಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿಕೆ ನೀಡಿದ್ದಾರೆ.

ʻʻಸೆ. 13ರಂದು 144 ಸೆಕ್ಷನ್ ಹಾಕಬೇಕೋ ಬೇಡವೋ ಎಂಬುದನ್ನು ಸದ್ಯಕ್ಕೆ ತೀರ್ಮಾನ ಮಾಡಿಲ್ಲ. ಇನ್ನು ಎರಡು ದಿನದ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಮೇಲೂ ಯಾರಾದರೂ ಮತ್ತೆ ಶಾಂತಿ ಭಂಗಕ್ಕೆ ಪ್ರಯತ್ನ ಪಟ್ಟರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ವೇದಿಕೆ ಕಾರ್ಯಕ್ರಮಕ್ಕೂ ನಾವು ಅನುಮತಿ ಕೊಟ್ಟಿಲ್ಲʼʼ ಎಂದು ರಮೇಶ್ ಬಾನೋತ್ ಹೇಳಿದ್ದಾರೆ.

ಇದನ್ನೂ ಓದಿ: Mahisha Dasara : ಮಹಿಷ ದಸರಾ ಮಾಡಲು ಬಿಟ್ರೆ ವೀರಪ್ಪನ್‌ನನ್ನೂ ದೇವರು ಮಾಡ್ತಾರೆ ಎಂದ ಪ್ರತಾಪ್‌

ಸಿದ್ದರಾಮಯ್ಯ ಅವರು ಹಿಂದಿನ ಸಾರಿ ಮುಖ್ಯಮಂತ್ರಿಯಾಗಿದ್ದಾಗ ಆರಂಭಗೊಂಡಿದ್ದ ಮಹಿಷ ದಸರಾ ಕಾರ್ಯಕ್ರಮ ಕೆಲವು ವರ್ಷದ ಸಾಂಗವಾಗಿ ನಡೆದಿತ್ತು. ಮೈತ್ರಿ ಸರ್ಕಾರವಿದ್ದಾಗಲೂ ನಡೆದಿತ್ತು. ಆದರೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಈ ಬಾರಿ ಕಾಂಗ್ರೆಸ್‌ ಸರ್ಕಾರವೇ ಇರುವುದರಿಂದ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಬಿಜೆಪಿ ಚಾಮುಂಡಿ ಚಲೋ ನಡೆಸಲು ಮುಂದಾಗಿದ್ದರಿಂದ ಸಂಘರ್ಷ ಬೇಡ ಎಂಬ ಕಾರಣಕ್ಕೆ ಎರಡೂ ಕಾರ್ಯಕ್ರಮಗಳಿಗೆ ಅವಕಾಶ ನಿರಾಕರಣೆ ಮಾಡಲಾಗಿದೆ.

Exit mobile version