ಮೈಸೂರು: ಪರ್ಯಾವರಣ ಸಂರಕ್ಷಣಾ ಗತಿ ವಿಧಿ ಮೈಸೂರು ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ (JSS College) ಆಯೋಜಿಸಿದ್ದ “ಇಯಂತ್ರಣ ನಿಯಂತ್ರಣ” ಎಲೆಕ್ಟ್ರಾನಿಕ್ ವೇಸ್ಟ್ ಮ್ಯಾನೇಜ್ಮೆಂಟ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಚಾಲನೆ ನೀಡಿ ಮಾತನಾಡಿದ ಮೈಸೂರಿನ (Mysuru News) ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ಉಪ ಕುಲಪತಿ ಡಾ. ಎನ್ ಸಂತೋಷ್, ಹೊಸ ಹೊಸ ತಂತ್ರಜ್ಞಾನ ಬಂದಂತತೆಲ್ಲ ಅದನ್ನು ಅಳವಡಿಸಿಕೊಳ್ಳಲು ಅತ್ಯಂತ ಉತ್ಸುಕರಾಗುತ್ತೇವೆ. ಹೊಸ ಎಲೆಕ್ಟ್ರಾನಿಕ್ ಯಂತ್ರೋಪಕರಣ ಲಭ್ಯವಾಗುತ್ತಿದ್ದಂತೆ ಖರೀದಿಗೆ ಮುಂದಾಗುತ್ತೇವೆ.
ಆದರೆ ಹಳೆಯ ಉಪಕರಣಗಳ ವಿಲೇವಾರಿ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಹಾಗಾಗಿ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ ಇಂದು ಬಹುದೊಡ್ಡ ಸಮಸ್ಯೆ ಆಗಿ ಮುಂದೆ ನಿಂತಿದೆ. ಇಂತಹ ಸಮಸ್ಯೆಗಳ ಬಗ್ಗೆ ಪರಿಸರ ವಿಜ್ಞಾನಿಗಳು, ಪರಿಸರ ಕಾರ್ಯಕರ್ತರು ಯೋಚಿಸಬೇಕು ಎಂದು ಸರ್ವೇ ಸಾಮಾನ್ಯವಾಗಿ ಎಲ್ಲರೂ ಯೋಚನೆ ಮಾಡುತ್ತಾರೆ. ಆದರೆ ಈ ತ್ಯಾಜ್ಯ ಉತ್ಪನ್ನಕ್ಕೆ ಕಾರಣವಾಗುವ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಅವಶ್ಯಕತೆ ಇದೆ. ಈ ಬಗ್ಗೆ ಪ್ರತಿಯೊಬ್ಬರು ಸ್ವಯಂ ಜಾಗೃತಿಗೊಂಡು ಸಮಾಜವನ್ನು ಜಾಗೃತಗೊಳಿಸಬೇಕಾಗಿದೆ ಎಂದು ಮೈಸೂರಿನ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ಉಪ ಕುಲಪತಿ ಡಾ. ಎನ್ ಸಂತೋಷ್ ಅವರು ಹೇಳಿದರು. ಪ್ರಸ್ತುತ ನಾವು ಬದುಕುವ ಜೊತೆಗೆ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ಉಳಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಪರಿಸರ ಸಂರಕ್ಷಣೆ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸೋಣ ಎಂದು ಕರೆ ನೀಡಿದರು.
ಪರ್ಯಾವರಣ ಸಂರಕ್ಷಣ ಗತಿವಿಧಿ ಕಾರ್ಯಕರ್ತರಾದ ಡಾ.ಶ್ರೀಹರ್ಷ ಪ್ರಾಸ್ತಾವಿಕ ಮಾತನಾಡಿ ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಿ ಸುಮಾರು 1,60000 ಟನ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಕೇವಲ 15 ಪ್ರತಿಶತ ಮಾತ್ರ ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿದೆ. ಈ ನಾಲ್ಕು ತಿಂಗಳ ಅಭಿಯಾನದಲ್ಲಿ ನಾವು ವಸತಿ ಸಮುಚ್ಚಯ, ಕಾಲೇಜು ವಿಶ್ವವಿದ್ಯಾನಿಲಯದ ಕಾರ್ಪೋರೇಟ್ ಆಫೀಸ್ ಹೀಗೆ ಹಲವಾರು ಕಡೆ ಅಭಿಯಾನದ ಮೂಲಕ ಈ ತ್ಯಾಜ್ಯ ಸಂಗ್ರಹಿಸುವ ವೈಜ್ಞಾನಿಕ ವಿಲೇವಾರಿ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಕೇಶವ ಮತ್ತು ಅಭಿಲಾಷ ಪಿಪಿಟಿ ಮತ್ತು ವಿಡಿಯೋ ತುಣುಕುಗಳ ಪ್ರದರ್ಶನದ ಮೂಲಕ ಈ ತ್ಯಾಜ್ಯ ನಿರ್ವಹಣೆ ಏಕೆ ಹೇಗೆ ಎನ್ನುವ ಸಂಪೂರ್ಣ ಮಾಹಿತಿ ನೀಡಿದರು. ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಯೋಜಕ ವೆಂಕಟೇಶ್ ಸಂಗನಾಳ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಹಿರಿಯ ಪರಿಸರ ಅಧಿಕಾರಿ ರಾಜಶೇಖರ ಡಿನ್ ಅಕಾಡಮಿಕ್ಸ್ ನ ಡಾ.ಮನೋಜ್ ಕುಮಾರ ಪರಿಸರ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾಕ್ಟರ್ ಸದಾಶಿವ ಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಈ ವೇಸ್ಟ್ ಸಂಗ್ರಹ ಬಿನ್‌ಗೆ ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಹಾಕುವುದರ ಮೂಲಕ ಆರಂಭಗೊಂಡ ತ್ಯಾಜ್ಯ ಸಂಗ್ರಹಣ ಅಭಿಯಾನ ನಿರಂತರ ನಾಲ್ಕು ತಿಂಗಳ ಕಾಲ ನಡೆಯಲಿದೆ. ಪರ್ಯಾವರಣ ಸಂರಕ್ಷಣ ಗತಿವಿಧಿ ಈ ಅಭಿಯಾನಕ್ಕೆ ಅನೇಕ ಸ್ವಯಂ ಸೇವಾ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು ಕೈ ಜೋಡಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ