Site icon Vistara News

Mysuru Tragedy : ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ತರಲು ಮರವೇರಿ ದಾರುಣ ಅಂತ್ಯ ಕಂಡ ಮಗ

Mysuru Tragedy

ಮೈಸೂರು: ತೆಂಗಿನ ಮರದಿಂದ ಬಿದ್ದು ಯುವಕನೊರ್ವ ಮೃತಪಟ್ಟಿದ್ದಾನೆ. ಎಳನೀರು ಕೀಳುವಾಗ ಅವಘಡ (Mysuru tragedy) ಸಂಭವಿಸಿದೆ. ಮೈಸೂರಿನ ಕೆಆರ್ ನಗರದ ಮುಂಜನಹಳ್ಳಿಯಲ್ಲಿ ಘಟನೆ (Tragedy Case) ನಡೆದಿದೆ. ಚೇತನ್ (27) ಮೃತ ದುರ್ದೈವಿ.

ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ತರಲು ಚೇತನ್ ಜಮೀನಿಗೆ ಹೋಗಿದ್ದ. ಮರವೇರಿ ಎಳನೀರು ಕೀಳುವಾಗ ಕಾಲು ಜಾರಿದೆ. ಈ ವೇಳೆ ಮರದ ಮೇಲಿಂದ ಬಿದ್ದ ರಭಸಕ್ಕೆ ಚೇತನ್ ತಲೆಗೆ ಗಂಭೀರ ಗಾಯವಾಗಿದೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದ ಚೇತನ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೆಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಆರ್‌ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Road Accident : ನಿದ್ರೆಯಲ್ಲಿದ್ದ ಪ್ರಯಾಣಿಕನ ಎದೆ ಸೀಳಿದ ಲಾರಿ; ಛಿದ್ರ ಛಿದ್ರಗೊಂಡ ಖಾಸಗಿ ಬಸ್‌

ಕುರಿ ಮೇಯಿಸಲು ಹೋದ ಬಾಲಕ ಸಾವು

ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಬಂಡೆಮ್ಮ ನಗರ ಗ್ರಾಮದ ಬಳಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದು, ಇನ್ನೊಬ್ಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಕುರಿ ಮೇಯಿಸಲು ಹೋಗಿದ್ದ ವೇಳೆ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಈ ವೇಳೆ ಮರದ ಬಳಿ ನಿಂತಾಗ ಅವಘಡ ನಡೆದಿದೆ. ಗುಡ್ಡದಕೇರಿ ಬಡಾವಣೆಯ ನಿವಾಸಿ ಯಲ್ಲಪ್ಪ ಕಿಲೀಕೈ (17) ಮೃತ ಬಾಲಕ. ಪರಸಪ್ಪ ಕಿಲೀಕೈ (15) ಗಾಯಾಳುವಾಗಿದ್ದು, ಆತನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಿಡಿಲಿಗೆ ರೈತ ಮಹಿಳೆ ಬಲಿ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜೆ ರಾಂಪುರದಲ್ಲಿ ಸಿಡಿಲು ಬಡಿದು ರೈತ ಮಹಿಳೆ ರತ್ನಮ್ಮ ಓತಗೇರಿ(43) ಎಂಬುವವರು ಮೃತಪಟ್ಟಿದ್ದಾರೆ. ಹೊಲಕ್ಕೆ ರತ್ನಮ್ಮನೊಂದಿಗೆ ಆಕೆಯ ಅಕ್ಕ ದೇವಮ್ಮ ಸಹ ಹೋಗಿದ್ದರು. ಮಳೆ ಆರಂಭವಾಗುತ್ತಿದ್ದಂತೆ ದೇವಮ್ಮ ಮನೆ ಸೇರಿದ್ದರು. ಆದರೆ ಹೊಲದಲ್ಲಿದ್ದ ರತ್ನಮ್ಮಗೆ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version