Site icon Vistara News

Nadabrahma Hamsalekha : ಹಿಂದಿ ಹೇರಿಕೆ ನೆಹರೂ ಕಾಲದಿಂದಲೇ ಇದೆ, ಈಗ ಜಾಸ್ತಿಯಾಗಿದೆ; ದಸರಾ ಉದ್ಘಾಟಕ ಹಂಸಲೇಖ

Nada Brahma Hamsalekha

ಮೈಸೂರು: ಹಿಂದಿ ಹೇರಿಕೆ (Forcing Hindi) ಹೊಸದೇನೂ ಅಲ್ಲ. ಅದು ನೆಹರೂ ಕಾಲದ ಹುನ್ನಾರ (Conspiracy from Nehru Era). ಈಗ ಅದು ಜಾಸ್ತಿಯಾಗಿದೆ ಎಂದು ಹೇಳಿದ್ದಾರೆ ಈ ಬಾರಿಯ ಮೈಸೂರು ದಸರಾದ ನಿಯೋಜಿತ ಉದ್ಘಾಟಕರಾದ ಹಿರಿಯ ಸಾಹಿತಿ ನಾದಬ್ರಹ್ಮ ಹಂಸಲೇಖ (Nadabrahma Hamsalekha) ಅವರು. ಮೈಸೂರು ದಸರಾ ಉದ್ಘಾಟಕರಾಗಿ (Inaugurator of Mysuru Dasara) ಆಯ್ಕೆಯಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜನೆ ಮಾಡಿದ ಸಂವಾದದಲ್ಲಿ ಅವರು ಮಾತನಾಡಿದರು. ದಸರಾ Mysuru Dasaa) ಉದ್ಘಾಟಕರನ್ನಾಗಿ ಮಾಡಿದಾಗ ಖುಷಿ ಆಯ್ತು. ಪೇಡ, ಕರದಂಟು ಶಾಲು ಬರುತ್ತಲೇ ಇದೆ ಎಂದು ಖುಷಿ ಹಂಚಿಕೊಂಡರು.

ʻʻನಾವೆಲ್ಲ ಕನ್ನಡವನ್ನು ರಕ್ಷಿಸಿಕೊಳ್ಳುವ ಒಂದಂಶದ ಕಾರ್ಯಕ್ರಮಕ್ಕೆ ಬದ್ಧರಾಗಬೇಕು. ಅದೊಂದೇ ನಮ್ಮ ಧ್ಯೇಯವಾಗಬೇಕು. ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಗಬೇಕು. ಕನ್ನಡಕ್ಕಾಗಿ ಕಾಲಿಡಿದು ಕನ್ನಡವನ್ನು ರಕ್ಷಿಸಬೇಕುʼʼ ಎಂದು ಮಾರ್ಮಿಕವಾಗಿ ಹೇಳಿದರು ಹಂಸಲೇಖ. ʻʻದೆಹಲಿಗೆ ಕನ್ನಡ ಬೇಕಾಗಿಲ್ಲ ನಮಗೆ ಹಿಂದಿ ಬೇಕಾಗಿಲ್ಲ. ಆದರೆ ನಮಗೆ ದೆಹಲಿ ಬೇಕಾಗಿದೆ. ಹೀಗಾಗಿ ಹಿಂದಿ ಕಲಿಕೆಯ ಒತ್ತಡ ಹೇರಲಾಗುತ್ತಿದೆʼʼ ಎಂದು ಹೇಳಿದರು.

ಇಂಗ್ಲಿಷ್‌ ಕೆಲಸಕ್ಕಿರಲಿ, ಕನ್ನಡ ಮನೆಗಿರಲಿ

ಇಂಗ್ಲಿಷ್‌ ಇದ್ದರೆ ಮಾತ್ರ ಕೆಲಸ ಸಿಗೋದು ಎನ್ನುವ ನಂಬಿಕೆ ಜೋರಾಗುತ್ತಿದೆ. ಹೀಗಾಗಿ ಕೆಲವರು ಮನೆಯಲ್ಲೇ ಇಂಗ್ಲಿಷ್‌ ಕಲಿಸುವ ಹಂತಕ್ಕೆ ಹೋಗಿದ್ದಾರೆ. ಇಂಗ್ಲಿಷ್‌ ಇರಲಿ. ಇಂಗ್ಲಿಷನ್ನು ಕೆಲಸಕ್ಕೆ ಇಟ್ಟುಕೊಳ್ಳಿ.. ಕನ್ನಡವನ್ನು ಮನೆಗೆ ಇಟ್ಟುಕೊಳ್ಳಿ ಎಂದು ಹಂಸಲೇಖ ಕನ್ನಡ ಶಾಲೆಗಳ ಮುಚ್ಚುಗಡೆ ವಿಚಾರ ಬಂದಾಗ ಹೇಳಿದರು.

ʻʻಮೊದಲು ತಾಯಿ ಮಕ್ಕಳಿಗೆ ಕನ್ನಡದ ಬಗ್ಗೆ ಹೇಳಿ ಕೊಡಬೇಕು. ಇತ್ತೀಚೆಗೆ ಹೆತ್ತವರು ಮಕ್ಕಳನ್ನು ಇಂಗ್ಲಿಷ್ ನಲ್ಲೇ ಓದಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಆದರೆ, ನಿಜವಾಗಿ ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ‌ ಆಗಬೇಕು. ಆಗ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗುತ್ತದೆʼʼ ಎಂದರು ಹಂಸಲೇಖ.

ನಾನು ಕವಿಯಲ್ಲ, ಚಿತ್ರ ಬರಹಗಾರ ಅಷ್ಟೆ ಎಂದ ಹಂಸಲೇಖ

ನನಗೆ ಮೈಸೂರು ಉದ್ಘಾಟನೆಯ ಭಾಗ್ಯ ಸಿಕ್ಕಿದ್ದಕ್ಕೆ ಒಬ್ಬರು ಕಾವ್ಯ ನ್ಯಾಯ ಅಂದರು. ಇನ್ನೊಬ್ಬರು ಕಲೆ ಮತ್ತು ಸಾಮಾಜಿಕ ನ್ಯಾಯ ಅಂದರು. ನನ್ನ ಪ್ರಕಾರ ಇದು ಸಾಮಾಜಿಕ ಕಲಾ ನ್ಯಾಯ ಎಂದು ವ್ಯಾಖ್ಯಾನಿಸಿದರು ಹಂಸಲೇಖ.

ನಮಗೆ ಕವಿ ಪಟ್ಟ ಬೇಡ‌. ಚಿತ್ರ ಬರಹಗಾರ ಅಂತ ಕರೆದರೆ ಸಾಕು. ಕವಿ ಪಟ್ಟ ತೆಗೆದುಕೊಂಡರೆ ಮೂರು ಭಾಗ ಮಾಡುತ್ತಾರೆ. ಆದ್ದರಿಂದ ಸಿನಿಮಾ ರೈಟರ್ ಆಗಿ ಬದುಕುವುದು ಇಷ್ಟ ಎಂದರು ಹಂಸಲೇಖ. ಕವಿಗಳನ್ನು ಬೇರೆ ಬೇರೆ ಪಂಥಕ್ಕೆ ಸೇರಿಸುವ ಅಪಾಯದ ಬಗ್ಗೆ ಅವರು ಸೂಚ್ಯವಾಗಿ ಹೇಳಿದರು.

ದಸರಾ ಉದ್ಘಾಟನೆಗೆ ಹಂಸಲೇಖ ಸೂಚಿಸಿದ ಹೆಸರು ಯಾವುದು?

ತಮ್ಮನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದ ಬಗ್ಗೆ ಮಾತನಾಡಿದ ಅವರು, ಯಾರ ಕೈಯಲ್ಲಿ ಉದ್ಘಾಟನೆ ಮಾಡಿಸಬಹುದು ಎಂದು ನನ್ನ ಬಳಿಯೂ ಸಲಹೆ ಕೇಳಿದ್ದರು. ನಾನು ಗೊ.ರು.ಚನ್ನಬಸಪ್ಪ, ರಾಜೀವ್ ತಾರಾನಾಥ್, ದೇವನೂರು ಮಹದೇವ ಅವರ ಹೆಸರು ಸಲಹೆ ಮಾಡಿದ್ದೆ. ಆದರೆ, ಇದು ದಸರಾ ಹೈಪವರ್ ಕಮಿಟಿ ತೀರ್ಮಾನ.
ನೀವು ಉದ್ಘಾಟನೆ ಮಾಡಿ ಅಂತ ಸಿಎಂ ಹೇಳಿದ್ದಾರೆ ಎಂದು ನುಡಿದರು. ʻʻನಾನು ಶ್ರಮಿಕ ವರ್ಗದಿಂದ ಬಂದವನು. ನನಗೆ ಉದ್ಘಾಟನೆಯ ಭಾಗ್ಯ ಕೊಟ್ಟಿರುವುದು ಅವರಿಗೆ ಆತ್ಮವಿಶ್ವಾಸದ ಚೈತನ್ಯ ತರುತ್ತದೆ. ಇದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆʼʼ ಎಂದು ಹಂಸಲೇಖ ನುಡಿದರು.

ಸ್ಮಾರ್ಟ್‌ ಸಿಟಿಗಿಂತಲೂ ಹೆಚ್ಚು ಸ್ಮಾರ್ಟ್‌ ವಿಲೇಜ್‌ಗಳು ಆಗಬೇಕು

ಬರದ ನಡುವೆ ಅದ್ದೂರಿ‌ ದಸರಾ ಆಚರಣೆ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದಾಗ, ʻʻರೈತರ ವಿಚಾರವನ್ನು ನಾವು ಗಮನಿಸಲೇಬೇಕು. ಹಬ್ಬದ ಮೂಲವೇ ರೈತ. ಅದರ ಬಗ್ಗೆ ನನ್ನ ಚಿಂತೆ ಜಾಸ್ತಿ ಇದೆ. ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಬೇಕು ಎಂಬುದು ನನ್ನ ಆಸೆ. ರೈತರ ಮನಸ್ಸಿಗೆ ನೋವಾಗುವ ದುಂದುವೆಚ್ಚ ಬೇಡ ಅನ್ನೋದು ನನ್ನ ಭಾವನೆʼʼ ಎಂದರು ಹಂಸಲೇಖ.

ನಾವು ಸ್ಮಾರ್ಟ್‌ ಸಿಟಿಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದೇವೆ. ಸ್ಮಾರ್ಟ್ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಆಗಬೇಕಿದೆ.
ಕೃಷಿ ತಜ್ಞರು ಸಹಾಯದಿಂದ ಸ್ಮಾರ್ಟ್ ವಿಲೇಜ್ ಮಾಡಬೇಕಿದೆ ಎಂದು ಅಭಿಪ್ರಾಯ ಹಂಚಿಕೊಂಡರು ಹಂಸಲೇಖ.

ಇದನ್ನೂ ಓದಿ: Dasara 2023: “ಬದುಕಿದು ಕನ್ನಡ ಭಿಕ್ಷೆ, ಇಲ್ಲಿ ಸಮರಸವೇ ನಮ್ಮ ರಕ್ಷೆ” ಎಂದು ಸಂತಸ ವ್ಯಕ್ತಪಡಿಸಿದ ಹಂಸಲೇಖ!

ಹಂಸಲೇಖ ನೋ ಕಮೆಂಟ್‌ ಎಂದ ಎರಡು ಸಂಗತಿಗಳು

ಸಂವಾದದ ವೇಳೆ ಹಂಸಲೇಖ ಅವರಿಗೆ ಎರಡು ವಿವಾದಾತ್ಮಕ ವಿಚಾರಗಳು ಎದುರಾದವು. ಒಂದು ಸನಾತನ ಧರ್ಮದ ಪ್ರಶ್ನೆ, ಇನ್ನೊಂದು ಮಹಿಷ ದಸರಾ. ಎರಡೂ ಪ್ರಶ್ನೆಗೆ ಅವರು ನೋ ಕಮೆಂಟ್ಸ್‌ ಎಂದರು. ಮಹಿಷಾ ದಸಾರ ವಿಚಾರವಾಗಿ ಉತ್ತರಿಸಲ್ಲ ಎಂದು ಸಂಜ್ಞೆ ಮಾಡಿದರು ಹಂಸಲೇಖ.

ʻʻಅಕಪಕ್ಕದ ಮನೆಯ ವಿಚಾರ ನನಗೆ ಏಕೆ.? ನನಗೆ ಕರೆದಿರೋದು ದಸರಾ ಉದ್ಘಾಟನೆಗೆ. ಅದು ಬಿಟ್ಟು ಬೇರೆ ವಿಚಾರಗಳ ಬಗ್ಗೆ ಚರ್ಚೆ ಬೇಡʼʼ ಎಂದು ಮಹಿಷಾ ದಸರಾ ಆಚರಣೆ ವಿಚಾರಕ್ಕೆ ಹಂಸಲೇಖ ನೀಡಿದ ಉತ್ತರ.

ʻʻನನಗೆ ಯಾರು ಕರೆಯುತ್ತಾರೆ ಮಹಿಷ ದಸರಾ ಉದ್ಘಾಟನೆಗೆ. ನಾನು ಈಗಾಗಲೇ ನಾಡಹಬ್ಬ ದಸರಾ ಉದ್ಘಾಟಕನಾಗಿದ್ದೇನೆ. ಒಬ್ಬನೇ ಎರಡು ಕಾರ್ಯಕ್ರಮ ಹೇಗೆ ಉದ್ಘಾಟಿಸುತ್ತಾನೆʼʼ ಎಂದು ಚಟಾಕಿ ಹಾರಿಸಿದರು.

Exit mobile version