Site icon Vistara News

Namma Metro : ಬೆಂಗಳೂರಿನ ಬಳಿಕ ಮೈಸೂರಿಗೂ ಮೆಟ್ರೋ ರೈಲು; ಪ್ರಧಾನಿ ಮೋದಿ ಘೋಷಣೆ

Metro train in Mysore assures Prime minister Modi

ಬೆಂಗಳೂರು: ದೇಶಾದ್ಯಂತ ರೈಲು ಸೇವೆಗಳು ತ್ವರಿತಗತಿಯಲ್ಲಿ ವಿಸ್ತಾರಗೊಳ್ಳುತ್ತಿದ್ದು, ಹಲವು ನಗರಗಳಲ್ಲಿ ಮೆಟ್ರೋ ರೈಲು ಸೇವೆ (Namma Metro) ಆರಂಭವಾಗಲಿದೆ. ಬೆಂಗಳೂರಿನ ಬಳಿಕ ಮೈಸೂರಿನಲ್ಲೂ ಮೆಟ್ರೋ ಸೇವೆ (Metro service at Mysore) ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಘೋಷಿಸಿದರು.

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ದೇಶದ ಮೊದಲ ಪ್ರಾದೇಶಿಕ ರೈಲು ಎಂದೇ ಗುರುತಿಸಲಾಗದ ರ‍್ಯಾಪಿಡ್‌ ಎಕ್ಸ್‌- Rapid X (ನಮೋ ಭಾರತ್‌) ರೈಲಿಗೆ ಚಾಲನೆ ನೀಡಿದ್ದಲ್ಲದೆ, ದೇಶದ ಹಲವು ರೈಲು ಮಾರ್ಗಗಳ ಉದ್ಘಾಟನೆಯನ್ನು ವರ್ಚ್ಯುವಲ್‌ ಆಗಿ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಮಾತು ಹೇಳಿದರು.

Narendra modi Metro

ಬೆಂಗಳೂರಿನ ಹೊಸ ಜೀವನಾಡಿಯಾಗಿರುವ ನಮ್ಮ ಮೆಟ್ರೋದ (Namma Metro) ನೇರಳೆ ಮಾರ್ಗದ (Purple Line) ಎರಡು ವಿಸ್ತೃತ ರೂಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಲೋಕಾರ್ಪಣೆ ಮಾಡಿದರು. ಕೆಆರ್ ಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ಮೆಟ್ರೋ ರೈಲು ವಿಸ್ತೃತ ಮಾರ್ಗ ಇದಾಗಿದ್ದು, ಈಗ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗಿನ ನೇರಳೆ ಮಾರ್ಗ ಕ್ರಮಿಸುವ ಒಟ್ಟು ದೂರ 43.5 ಕಿ.ಮೀ.ಗೆ ವಿಸ್ತರಣೆಯಾಗಿದೆ.

Narendra modi Metro

ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಅವರ ಗೃಹಕಚೇರಿ ಕೃಷ್ಣಾದಲ್ಲಿ ವರ್ಚುಯಲ್ ಸಭೆ ಮೂಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದರು. ರಾಜ್ಯ ಯೋಜನೆ ಆಯೋಗದ ಉಪಾಧ್ಯಕ್ಷ ಪ್ರೊ ರಾಜೀವ್ ಗೌಡ, ಮಾಜಿ ಸಚಿವ, ಶಾಸಕ ಎಸ್ ಟಿ ಸೋಮಶೇಖರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Namma Metro : ನಮ್ಮ ಮೆಟ್ರೊ ವಿಸ್ತೃತ ನೇರಳೆ ಮಾರ್ಗ ಲೋಕಾರ್ಪಣೆ ಮಾಡಿದ ಮೋದಿ; ಏನಿದರ ವಿಶೇಷತೆ?

ಮೈಸೂರಿಗೂ ಮೆಟ್ರೋ ರೈಲು

ಚಲ್ಲಘಟ್ಟ- ವೈಟ್‌ ಫೀಲ್ಡ್‌ ರೈಲು ಮಾರ್ಗದ ಉದ್ಘಾಟನೆಯಿಂದ ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಭಾರಿ ಪ್ರಯೋಜನವಾಗಲಿದೆ ಎಂದು ಮೋದಿ ಹೇಳಿದರು. ಬೆಂಗಳೂರು ಮೆಟ್ರೋ ಇನ್ನಷ್ಟು ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.

Narendra modi Metro

ದೇಶದಲ್ಲಿ ಇನ್ನಷ್ಟು ಕಡೆಗಳಲ್ಲಿ ರೈಲು ಸೇವೆಗಳನ್ನು ವಿಸ್ತರಿಸಲಾಗುತ್ತದೆ, ಪ್ರಮುಖ ನಗರಗಳಲ್ಲಿ ಮೆಟ್ರೋ ಸೇವೆ ಒದಗಲಿದೆ. ಬೆಂಗಳೂರಿನ ಬಳಿಕ ಮೈಸೂರಿನಲ್ಲೂ ಮೆಟ್ರೋ ಸೇವೆ ಆರಂಭವಾಗಲಿದೆ ಎಂದು ಅವರು ಪ್ರಕಟಿಸಿದರು.

ಬೆಂಗಳೂರು ಮತ್ತು ಮೈಸೂರು ನಡುವೆ ಈಗ ಎಕ್ಸ್‌ಪ್ರೆಸ್‌ ವೇ ನಿರ್ಮಾಣವಾಗಿದ್ದು ಕೇವಲ ಎರಡು ಗಂಟೆಗಳಲ್ಲಿ ಎರಡು ನಗರಗಳನ್ನು ಸಂಪರ್ಕಿಸಬಹುದಾಗಿದೆ. ಈ ಹಿಂದೆ ಬೆಂಗಳೂರು ಮತ್ತು ಮೈಸೂರನ್ನು ಮೆಟ್ರೋ ಮೂಲಕವೇ ಸಂಪರ್ಕಿಸುವ ಯೋಜನೆಯ ಬಗ್ಗೆ ಚರ್ಚೆಯಾಗಿತ್ತು. ಇದೀಗ ಪ್ರಧಾನಿಯವರು ಮೈಸೂರಿನಲ್ಲೂ ಮೆಟ್ರೋ ಯೋಜನೆ ಜಾರಿಯ ಪ್ರಸ್ತಾವನೆ ಮಂಡಿಸಿದ್ದಾರೆ.

Exit mobile version