Site icon Vistara News

ಸಾರ್ವಕಾಲಿಕ ಸತ್ಯ ಬರೆದ ಸಾಹಿತ್ಯ ಮಾತ್ರವೇ ಜೀವಂತ: ಡಾ. ಗುರುರಾಜ ಕರಜಗಿ ಅಭಿಮತ

DVG Award Mysuru

ಮೈಸೂರು: ಸಾರ್ವಕಾಲಿಕ ಸತ್ಯಗಳನ್ನು ಬರೆದವರು ಎಲ್ಲ ಕಾಲದಲ್ಲೂ ಜೀವಂತವಾಗಿರುತ್ತಾರೆ ಎಂದು ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.

ಡಿವಿಜಿ ಬಳಗ ಪ್ರತಿಷ್ಠಾನ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಡಿವಿಜಿ ಪ್ರಶಸ್ತಿ-೨೦೨೨’ ಸ್ವೀಕರಿಸಿ ಮಾತನಾಡಿದರು.

ಡಿ.ವಿ. ಗುಂಡಪ್ಪ ಅವರು ಮಂಕುತಿಮ್ಮನ ಕಗ್ಗ ಬರೆದಿದ್ದು 1943ರಲ್ಲಿ. ಆ ಕಾಲದಲ್ಲಿ ಅದನ್ನು ಓದಿದವರ ಸಂಖ್ಯೆ ಅತ್ಯಂತ ಕಡಿಮೆ ಇತ್ತು. ಈಗ ಕಗ್ಗವನ್ನು ನೂರುಪಟ್ಟು ಜನ ಓದುತ್ತಿದ್ದಾರೆ. ಮಹಾಭಾರತ, ಭಗವದ್ಗೀತೆ ಎಷ್ಟು ಹಳೆಯದ್ದು, ಆದರೆ ಅವುಗಳನ್ನು ಓದುವವರ ಸಂಖ್ಯೆ ಈಗ ಸಾವಿರಪಟ್ಟು ಹೆಚ್ಚಾಗಿದೆ.

ಪ್ರಸ್ತುತಕ್ಕೆ ಸಂಬಂಧಪಟ್ಟ ಬರಹಗಳು ಕೆಲ ದಿನಗಳ ನಂತರ ಮರೆಯಾಗಿ ಹೋಗುತ್ತವೆ. ಆದರೆ ಸಾರ್ವಕಾಲಿಕ ಸತ್ಯಗಳು ಎಂದಿಗೂ ಜನಮಾನಸದಿಂದ ಮರೆಯಾಗುವುದಿಲ್ಲ. ಮುಂದಿನ ತಲೆಮಾರುಗಳಲ್ಲೂ ಪ್ರಸಿದ್ಧಿ ಪಡೆಯುತ್ತಲೇ ಹೋಗುತ್ತವೆ. ಡಿವಿಜಿ ಅವರ ಮಂಕುತಿಮ್ಮನ ಕಗ್ಗ, ಭಗವದ್ಗೀತೆ ಪುಸ್ತಕಗಳಲ್ಲಿ ಅಂತಹ ಸಾರ್ವಕಾಲಿಕ ಸತ್ವ ಇದೆ ಎಂದು ಅಭಿಪ್ರಾಯಪಟ್ಟರು.

ಡಿವಿಜಿ ಅವರ ಬಗ್ಗೆ ವಿದೇಶಿಗರೂ ಹುಚ್ಚು ಪ್ರೀತಿ ಹೊಂದಿದ್ದಾರೆ. ನಾನು ಅಮೆರಿಕ, ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳಲ್ಲಿ ಡಿವಿಜಿ ಕುರಿತು ಭಾಷಣ ಮಾಡಿದ್ದೇನೆ. ಒಮ್ಮೆ ನ್ಯೂಯಾರ್ಕ್‌ನಿಂದ ಮ್ಯಾಂಚೆಸ್ಟರ್‌ಗೆ ಹೋಗಬೇಕಿತ್ತು. ಕಾರಿನಲ್ಲಿ ಎರಡು ಗಂಟೆ ಪ್ರಯಾಣ ಮಾಡಬೇಕಿತ್ತು. ಡ್ರೈವರ್ ಕಾರಿನಲ್ಲೇ ಕ್ಯಾಮರಾ ಆನ್ ಮಾಡಿ, ಸಮಯ ವ್ಯರ್ಥ್ಯ ಮಾಡುವುದು ಬೇಡ, ಡಿವಿಜಿ ಕುರಿತು ಸಂವಾದ ಮಾತನಾಡಿ ಅಂತ ಇಕ್ಕಟ್ಟಿಗೆ ಸಿಲುಕಿಸಿದ. ಪ್ರಪಂಚದ ಬೇರೆ ಭಾಷೆಯವರು, ಕರ್ನಾಟಕದವರು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಟ್ಟೆ. ಡಿವಿಜಿ 1979ರಲ್ಲೇ ನಿಧನರಾದರು. ನಾಲ್ಕೈದು ದಶಕಗಳ ನಂತರವೂ ಜನ ಡಿವಿಜಿ ಬಗ್ಗೆ ಹೊಂದಿರುವ ಪ್ರೀತಿ, ಅಕ್ಕರೆ ಕಂಡು ಆಶ್ಚರ್ಯ ಪಟ್ಟಿದ್ದೇನೆ ಎಂದು ಅನುಭವ ಹಂಚಿಕೊಂಡರು.

ಡಿವಿಜಿ ಬಹುಮುಖಿ ಆಯಾಮ ಹೊಂದಿದ್ದರು. ಅವರನ್ನು ಕವಿ, ವಿಮರ್ಶಕ, ಸಮಾಜ ಸುಧಾರಕ, ರಾಜಕೀಯ ವಿಶ್ಲೇಷಕ ಹೀಗೆ ಏನೆಂದು ಕರೆಯಬೇಕೆಂದು ಗೊತ್ತಾಗುವುದಿಲ್ಲ. ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದ ಅವರಿಗೆ ಒಂದು ರೂಪಾಯಿ, ಹನ್ನೆರಡಾಣೆ ಪ್ರಯಾಣ ವೆಚ್ಚ ಕೊಡುತ್ತಿದ್ದರು. ಬಂದು ಹೋಗಲು ಕಷ್ಟವಾಗುತ್ತದೆ ಎಂದು ತಿಳಿದು ೫ ರೂ. ಕೊಡಲಾಯಿತು. ತಮ್ಮೊಬ್ಬರಿಗೇ ಹೆಚ್ಚು ಹಣ ಕೊಟ್ಟಿರುವುದನ್ನು ತಿಳಿದುಕೊಂಡ ಡಿವಿಜಿ ಪೂರ್ತಿ ಹಣವನ್ನು ವಾಪಸ್ ಕೊಟ್ಟುಬಿಟ್ಟರು. ಹಣಕ್ಕಿಂತ ಆತ್ಮಾಭಿಮಾನ ಮುಖ್ಯ ಎಂಬ ಮೌಲ್ಯವನ್ನು ಡಿವಿಜಿ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಸ್ಥೂಲಕಾಯ ಹೊಂದಿದ್ದ ಅವರು ಅನಾರೋಗ್ಯದ ನಡುವೆಯೂ ಬಾಯಿ ಚಪಲಕ್ಕೆ ಸಿಹಿ ತಿನ್ನುತ್ತಿದ್ದರು. ತಿಂಡಿಪೋತರ ಸಂಘ ರಚಿಸಿ ಅಧ್ಯಕ್ಷರಾಗಿದ್ದರು. ಅವರೊಂದಿಗೆ ಒಡನಾಡುವ ಅವಕಾಶ ಸಿಕ್ಕಿದ್ದು ನನ್ನ ಜೀವಮಾನದ ಸೌಭಾಗ್ಯ ಎಂದು ಸ್ಮರಿಸಿಕೊಂಡರು.

ಶಿವಮೊಗ್ಗದ ಉಪನ್ಯಾಸಕ ವಿದ್ವಾನ್ ಜಿ.ಎಸ್.ನಟೇಶ್ ಮಾತನಾಡಿ, ಸರ್ಕಾರಿ ಪ್ರಶಸ್ತಿಗಳನ್ನು ಪಡೆದವರಿಗೆ ವಿಜೇತರು ಎಂದು ಸಂಭೋಧಿಸುವ ಕಾಲ ಬಂದಿದೆ. ಅರ್ಜಿ ಹಾಕಿ, ಕಚೇರಿಯಿಂದ ಕಚೇರಿಗೆ ಸುತ್ತಾಡಿ, ಯಾರದ್ದೋ ಕೃಪೆಯಿಂದ ಪ್ರಶಸ್ತಿ ಪಡೆದು, ಅದರಲ್ಲಿ ಬಂದ ಹಣದಲ್ಲಿ ಪಾಲು ಕೊಡುವ ಸನ್ನಿವೇಶ ನಿರ್ಮಾಣವಾಗಿದೆ. ಹೀಗಿರುವಾಗ ಡಿವಿಜಿ ಬಳಗ ಪ್ರತಿಷ್ಠಾನದವರು ಗುರುರಾಜ ಕರಜಗಿ ಅಂಥವರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ಮಾಡುತ್ತಿರುವುದು ಸಂತೋಷ. ಇದರಿಂದ ಪ್ರಶಸ್ತಿಗೂ ಘನತೆ ಬಂದಿದೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್, ಪ್ರತಿಷ್ಠಾನದ ಸಂಚಾಲಕ ಸಿ.ಕನಕರಾಜು ಇದ್ದರು.

Exit mobile version