ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ (ಜಿಟಿಡಿ) ಜೆಡಿಎಸ್‌ನಲ್ಲೇ ಉಳಿಯಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೆಡಿಎಸ್ ಪಕ್ಷದ ಮಹಾತ್ವಾಕಾಂಕ್ಷಿ ‘ಪಂಚರತ್ನ’ ಯೋಜನೆಯ ಉದ್ಘಾಟನೆ ಅಥವಾ ಸಮಾರೋಪ ಸಮಾರಂಭ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಡೆಯಲಿದೆ. ಆ ಬೃಹತ್ ವೇದಿಕೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಉಭಯ ನಾಯಕರೂ ಮೂರು ವರ್ಷಗಳ ಮುನಿಸು ಮರೆತು ಇತ್ತೀಚೆಗೆ ಮುಖಾಮುಖಿಯಾಗಿದ್ದಾರೆ. ಬೆಂಗಳೂರಿನಲ್ಲಿ ಗೌಪ್ಯ ಸ್ಥಳವೊಂದರಲ್ಲಿ ತಾಸುಗಟ್ಟಲೇ ಮಾತುಕತೆ ನಡೆಸಿದ್ದಾರೆ. ಅಂತಿಮವಾಗಿ ಪಕ್ಷದಲ್ಲೇ ಉಳಿಯುವಂತೆ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ಇದಕ್ಕೆ ಜಿಟಿಡಿ ಅವರೂ ಒಪ್ಪಿಗೆ ಸೂಚಿಸಿದರು ಎಂದು ‘ವಿಸ್ತಾರ ನ್ಯೂಸ್’ಗೆ ಗೊತ್ತಾಗಿದೆ.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿದ್ದೇ ಕೊನೆ. ಜೆಡಿಎಸ್ ಪಕ್ಷದ ಯಾವೊಂದು ಕಾರ್ಯಕ್ರಮದಲ್ಲೂ ಜಿಟಿಡಿ ಕಾಣಿಸಿಕೊಳ್ಳಲಿಲ್ಲ. ಪಕ್ಷ ಸಂಘಟನೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭಗಳಲ್ಲಿ ಪಕ್ಷವೂ ಜಿಟಿಡಿ ಅವರನ್ನು ಪರಿಗಣಿಸಲಿಲ್ಲ. ಜಿಟಿಡಿ ಅವರೂ ನಾಜೂಕಾಗಿ ಅಂತರ ಕಾಯ್ದುಕೊಂಡು ‘ತಟಸ್ಥ’ವಾಗಿ ಉಳಿದುಬಿಟ್ಟಿದ್ದರು. ಈ ನಡುವೆ ಜಿಟಿಡಿ ಅವರನ್ನು ಸೆಳೆದುಕೊಳ್ಳಲು ಬಿಜೆಪಿ ನಾಯಕರೂ ಪ್ರಯತ್ನಿಸಿದರು, ಕಾಂಗ್ರೆಸ್ ನಾಯಕರೂ ಸಂಪರ್ಕಿಸಿದರು.
ಎಚ್.ಡಿ. ದೇವೇಗೌಡರೂ ‘ಚುನಾವಣೆಗೆ ಇನ್ನೂ ಸಮಯವಿದೆ’ ಎನ್ನುವ ಮೂಲಕ ಎಲ್ಲ ಬಾಗಿಲುಗಳನ್ನೂ ತೆರೆದಿಟ್ಟುಕೊಂಡಿದ್ದರು. ತಮ್ಮ ಹಾಗೂ ಪುತ್ರ ಜಿ.ಡಿ. ಹರೀಶ್ ಗೌಡ ರಾಜಕೀಯ ಅಸ್ತಿತ್ವದ ‘ಹಿತದೃಷ್ಟಿ’ ಬಗ್ಗೆ ಅಳೆದು ತೂಗಿ ಜೆಡಿಎಸ್‌ನಲ್ಲೇ ಉಳಿಯುವ ತೀರ್ಮಾನಕ್ಕೆ ಬಂದಿದ್ದಾರೆ. ಮಾತು ಕೊಟ್ಟಂತೆ ಒಂದೆರಡು ತಿಂಗಳಲ್ಲಿ ಕ್ಷೇತ್ರದಲ್ಲಿ ಬೆಂಬಲಿಗರ ಸಭೆ ನಡೆಸಲಿದ್ದಾರೆ. ಮುಂದೆ ಯಾವ ಪಕ್ಷದಿಂದ ಸ್ಪರ್ಧಿಸುತ್ತೀರಿ ಎಂಬುದನ್ನು ಬೇಗ ತೀರ್ಮಾನಿಸಿ ಎಂದು ಒತ್ತಡ ಹಾಕುತ್ತಿರುವ ಬೆಂಬಲಿಗರು, ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ಅದೆಲ್ಲವೂ ಶಾಸ್ತ್ರೋಕ್ತವಾಗಿ ನಡೆದು ಹೋಗುತ್ತವೆ. ಜಿಟಿಡಿ ಜೆಡಿಎಸ್‌ನಲ್ಲೇ ಉಳಿಯುತ್ತಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಎರಡು ಟಿಕೆಟ್ ಖಚಿತ :
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕರಾದ ಜಿ.ಟಿ. ದೇವೇಗೌಡ, 2023ರ ಚುನಾವಣೆಯಲ್ಲಿ ಪುತ್ರ ಜಿ.ಡಿ.ಹರೀಶ್ ಗೌಡ ಅವರನ್ನೂ ಎಂಎಲ್‌ಎ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಜೆಡಿಎಸ್ ನಾಯಕರು ತಂದೆ- ಮಗ ಇಬ್ಬರಿಗೂ ಟಿಕೆಟ್ ನೀಡುವ ಭರವಸೆ ನೀಡಿರುವುದೇ ‘ತೆನೆ ಹೊರಲು’ ಮುಖ್ಯ ಕಾರಣ. 34 ವರ್ಷದ ಹರೀಶ್ ಗೌಡ ತಂದೆಯ ಗರಡಿಯಲ್ಲಿ ಫಳಗಿದ್ದಾರೆ, ವಯಸ್ಸಿಗೂ ಮೀರಿ ರಾಜಕೀಯ ಪಟ್ಟುಗಳನ್ನೂ ಕಲಿತಿದ್ದಾರೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಮೇಲೆ ಉಭಯ ಜಿಲ್ಲೆಗಳಲ್ಲೂ ತಂದೆಯ ‘ಪ್ರಭಾವಳಿ’ ವಿಸ್ತರಿಸಿದ್ದಾರೆ. ಇದೆಲ್ಲವೂ ಜೆಡಿಎಸ್ ವರಿಷ್ಠರ ಕುಟುಂಬಕ್ಕೆ ಚೆನ್ನಾಗಿಯೇ ಗೊತ್ತಿದೆ. ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಹರೀಶ್ ಗೌಡ ಅತ್ಯುತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಜೆಡಿಎಸ್ ಪಾಲಿಗೆ ಒಂದೊಂದು ಎಂಎಲ್ಎ ಸ್ಥಾನವೂ ಅತಿಮುಖ್ಯವಾದ್ದರಿಂದ ಶಾಸಕರಾಗುವ ವರ್ಚಸ್ಸು ಹೊಂದಿರುವ ತಂದೆ-ಮಗ ಜೋಡಿಯನ್ನು ಬಿಟ್ಟುಕೊಡಲು ಸಾಧ್ಯವೇ ಇರಲಿಲ್ಲ.
ಜತೆಗೆ ಜಿಟಿಡಿ ಪಕ್ಷದಲ್ಲೇ ಉಳಿಯುವುದರಿಂದ ಸಮೀಪದ ಪಿರಿಯಾಪಟ್ಟಣ, ಕೆ.ಆರ್. ನಗರ, ಚಾಮರಾಜ, ನರಸಿಂಹರಾಜ, ತಿ.ನರಸೀಪುರ, ಹನೂರು ಸೇರಿದಂತೆ ಅಕ್ಕಪಕ್ಕದ ಕ್ಷೇತ್ರಗಳಿಗೂ ಅನುಕೂಲವಾಗಲಿದೆ. ‘ಜಿಟಿಡಿಗೆ ಜೆಡಿಎಸ್ ಅನಿವಾರ್ಯ, ಜೆಡಿಎಸ್‌ಗೆ ಜಿಟಿಡಿ ಅನಿವಾರ್ಯ’ ಎಂಬ ವಾಸ್ತವವನ್ನು ಎಚ್‌ಡಿಕೆ- ಜಿಟಿಡಿ ಇಬ್ಬರೂ ಅರ್ಥ ಮಾಡಿಕೊಂಡಿದ್ದಾರೆ.
ರಾಜಿಯಾಗದ ಸಿದ್ದರಾಮಯ್ಯ :
ಕಾಂಗ್ರೆಸ್ ನಾಯಕರ ಮುಂದೆ ಜಿಟಿಡಿ ‘ನನಗೆ ಚಾಮುಂಡೇಶ್ವರಿ ಮತ್ತು ಮಗನಿಗೆ ಹುಣಸೂರು, ಕೆ.ಆರ್.ನಗರ, ಚಾಮರಾಜ ಯಾವುದಾದರೂ ಕ್ಷೇತ್ರದಲ್ಲಿ ಟಿಕೆಟ್ ಕೊಡಿ’ ಎಂಬ ಬೇಡಿಕೆ ಇಟ್ಟಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಸ್ಪರ್ಧೆಗೆ ಒಪ್ಪಿದ್ದ ಕಾಂಗ್ರೆಸ್ ನಾಯಕರು, ಜಿ.ಡಿ. ಹರೀಶ್ ಗೌಡ ಅವರಿಗೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಭರವಸೆ ನೀಡಿದ್ದರು.
ಹುಣಸೂರಿನಲ್ಲಿ ಹಾಲಿ ಶಾಸಕ ಎಚ್.ಪಿ.ಮಂಜುನಾಥ್, ಕೆ.ಆರ್.ನಗರದಲ್ಲಿ ಪರಾಜಿತ ಅಭ್ಯರ್ಥಿ ಡಿ.ರವಿಶಂಕರ್, ಚಾಮರಾಜದಲ್ಲಿ ಮಾಜಿ ಶಾಸಕ ವಾಸು ಮತ್ತು ಮುಖಂಡ ಹರೀಶ್‌ಗೌಡ ಚುನಾವಣಾ ತಯಾರಿ ನಡೆಸಿದ್ದಾರೆ. ಹೀಗಾಗಿ ಜಿಟಿಡಿ ಪುತ್ರ ಹರೀಶ್ ಗೌಡಗೆ ‘ಸ್ಥಳಾವಕಾಶ’ ಕಲ್ಪಿಸುವುದು ಸಿದ್ದರಾಮಯ್ಯಗೆ ಕಷ್ಟಸಾಧ್ಯವಾಗಿತ್ತು. ಆದ್ದರಿಂದಲೇ ಎರಡು ಟಿಕೆಟ್ ಬೇಡಿಕೆಗೆ ‘ರಾಜಿ’ ಆಗಲಿಲ್ಲ. ಪರಿಣಾಮ ಜಿಟಿಡಿ ಹಾಗೂ ಸಿದ್ದರಾಮಯ್ಯ ಮಾತುಕತೆ ಮುರಿದುಬಿದ್ದಿದೆ. ಆದ್ದರಿಂದಲೇ ಕೆಲ ತಿಂಗಳ ಹಿಂದೆ ಒಟ್ಟಿಗೆ ವೇದಿಕೆ ಹಂಚಿಕೊಂಡಿಕೊಂಡಿದ್ದ ಸಿದ್ದರಾಮಯ್ಯ, ಈಗ ಜಿಟಿಡಿ ಹೆಸರು ಕೇಳಿದರೆ ಸಿಟ್ಟಾಗುತ್ತಿದ್ದಾರೆ.
ಬಿಜೆಪಿ ನಾಯಕರಿಂದ ಗಾಳ :
ಬಿಜೆಪಿ ವರಿಷ್ಠ ನಾಯಕರು ಹಳೇ ಮೈಸೂರು ಭಾಗದ ಮೇಲೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಪಕ್ಷಕ್ಕೆ ಬಲ ತುಂಬುವ ಸಾಮರ್ಥ್ಯ ಹೊಂದಿರುವ ಜಿ.ಟಿ. ದೇವೇಗೌಡರಿಗೆ ಕಮಲ ಪಾಳಯದ ಪ್ರಮುಖರೇ ಗಾಳ ಹಾಕಿದ್ದಾರೆ. ಜಿಟಿಡಿ ಈಗಾಗಲೇ ‘ಗಣವೇಷ’ ತೊಟ್ಟ ಅನುಭವ ಹೊಂದಿದ್ದು, ಪಕ್ಷ ಮತ್ತು ಸಂಘದ ಅಂತರಂಗವನ್ನು ಹತ್ತಿರದಿಂದ ನೋಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಯಿಂದ ಇಳಿದ ಬಳಿಕ ರಾಜ್ಯ ಬಿಜೆಪಿಯ ಪ್ರಮುಖ ನಿರ್ಧಾರಗಳು ನವದೆಹಲಿಯಲ್ಲಿ ತೀರ್ಮಾನ ಆಗುತ್ತಿವೆ. ಯಾರನ್ನು ನೆಚ್ಚಿಕೊಂಡು ಬಿಜೆಪಿಗೆ ಹೋಗುವುದು ಎಂಬುದೇ ಜಿಟಿಡಿ ಪಾಲಿಗೆ ಯಕ್ಷ ಪ್ರಶ್ನೆಯಾಗಿತ್ತು. ಒಂದೇ ಕುಟುಂಬಕ್ಕೆ ಎರಡು ಟಿಕೆಟ್ ನೀಡುವುದಿಲ್ಲ ಎಂದರೆ ಪುತ್ರನ ರಾಜಕೀಯ ಭವಿಷ್ಯ ಹಾಳು ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಹಿಂದೇಟು ಹಾಕಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತ್ರ ಪ್ರಯತ್ನ ನಿಲ್ಲಿಸಿಲ್ಲ.
ಇದನ್ನೂ ಓದಿ | ತಮಿಳುನಾಡು ವಿಭಜನೆ ಮಾಡ್ಬೇಕಾ? ಮಾಡ್ತೀವಿ ಬಿಡಿ, ನಮ್ಗೆ ಆ ತಾಕತ್ತಿದೆ ಎಂದ ಬಿಜೆಪಿ ನಾಯಕ