ಮೈಸೂರು: ವೇಗವಾಗಿ ಬಂದ ಸೈಕಲ್ ಅನ್ನು ನಿಯಂತ್ರಿಸಲು ಸಾಧ್ಯವಾಗದೆ ಚಲಿಸುತ್ತಿದ್ದ ಟೆಂಪೋ ಟೈರ್ನಡಿಗೆ ಬಿದ್ದು ಇಬ್ಬರು ಬಾಲಕರು ಬಿದ್ದುಬಿಟ್ಟಿದ್ದಾರೆ. ಒಬ್ಬ ಬಾಲಕ ಸ್ಥಳದಲ್ಲೇ ಸಾವಗೀಡಾಗಿದ್ದು, ಇನ್ನೊಬ್ಬ ಬಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ.
ಮೈಸೂರಿನ ಅಭಿಷೇಕ್ ವೃತ್ತದಲ್ಲಿ ನಡೆದ ಘಟನೆ ಇದಾಗಿದೆ. ಚಾಮರಾಜನಗರ ಜಿಲ್ಲೆ ಯಳಂದೂರಿನ ರಾಮಣ್ಣ ಅವರ ಪುತ್ರ ಬಾಲಾಜಿ ಅಲಿಯಾಸ್ ತಿರುಪತಿ ಮೃತ ಬಾಲಕ. 10 ವರ್ಷದ ಬಾಲಾಜಿ ಐದನೇ ತರಗತಿ ವಿದ್ಯಾರ್ಥಿಯಾಗಿದ್ದ. ಇಬ್ಬರೂ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ.
ಬಾಲಾಜಿ ಚಲಾಯಿಸುತ್ತಿದ್ದ ಸೈಕಲ್ ನಿಯಂತ್ರಿಸಲು ಸಾಧ್ಯವಾಗದೆ ವೇಗವಾಗಿ ಬಂದು ಟೆಂಪೋಗೆ ಡಿಕ್ಕಿ ಹೊಡೆದಿದೆ. ಟೆಂಪೋ ಹಿಂಬದಿಯ ಟಯರ್ಗೆ ಸಿಲುಕಿ ಸ್ಥಳದಲ್ಲೇ ಬಾಲಾಜಿ ಮೃತಪಟ್ಟಿದ್ದಾನೆ. ತೀವ್ರ ರಕ್ತಸ್ರಾವದಿಂದ ಅಲ್ಲೇ ಅಸುನೀಗಿದ್ದಾನೆ. ಜತೆಗಿದ್ದ ಮತ್ತೊಬ್ಬ ಬಾಲಕ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾನೆ. ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿಗೆ ಟ್ರಕ್ ಡಿಕ್ಕಿಯಾಗಿ ಇಬ್ಬರು ಸಾವು
ಹಾವೇರಿ: ಶಿಗ್ಗಾಂವ್ ತಾಲೂಕಿನ ತಿಮ್ಮಾಪೂರ ಗ್ರಾಮದ ಬ್ರಿಜ್ ಮೇಲೆ ಕಾರು ಮತ್ತು ಟ್ರಕ್ ಡಿಕ್ಕಿಯಾಗಿ ಇಬ್ಬರು ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದೆ.
ಬೆಂಗಳೂರು ಕಡೆಯಿಂದ ಬಾಂಬೆ ಕಡೆಗೆ ಹೊರಟಿದ್ದ ಎರ್ಟಿಗಾ ಕಾರ್ನಲ್ಲಿದ್ದ ಬೆಂಗಳೂರು ಮೂಲದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮನೋಹರ್ ಬಿ. (38), ಪ್ರಿಯಾಂಕ (23) ಮೃತಪಟ್ಟವರು. ಗಾಯಾಳುಗಳಾಗಿರುವ ಮೊನಾಲಿಸಾ (38), ಸೀಖಾ (7)ರನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲು ಮಾಡಲಾಗಿದೆ. ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: BMTC Bus Accident: ಬಿಎಂಟಿಸಿ ಬಸ್ಗೆ ಸಿಲುಕಿ ಪಾದಚಾರಿ ಸಾವು; ತಲೆ ಛಿದ್ರ ಛಿದ್ರ