Site icon Vistara News

Suttur Jatre 2024 : ಫೆ. 6ರಿಂದ ಸುತ್ತೂರು ಜಾತ್ರಾ ಮಹೋತ್ಸವ; ಪ್ರವಾಸಿಗರ ಆಕರ್ಷಿಸಲಿದೆ ಕೃಷಿ ಬ್ರಹ್ಮಾಂಡ

Suttur Jatra Mahotsava To Begin From Feb 6th To 11th

ಮೈಸೂರು: ಮೈಸೂರಿನ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ (Suttur Jatre 2024) ನಡೆದಿದೆ. ಫೆ. 6 ರಿಂದ 11ರವರೆಗೆ ನಡೆಯಲಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಜಾತ್ರೆಯಲ್ಲಿ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳ ಅನಾವರಣಗೊಳ್ಳಲಿದೆ ಎಂದು ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಫೆ.6ಕ್ಕೆ ಕೊಂಡೋತ್ಸವ, 7ಕ್ಕೆ ಹಾಲರವಿ ಉತ್ಸವ, 8ಕ್ಕೆ ರಥೋತ್ಸವ, 9ಕ್ಕೆ ಲಕ್ಷ ದೀಪೋತ್ಸವ, 10ಕ್ಕೆ ತೆಪ್ಪೋತ್ಸವ, 11ರಂದು ಅನ್ನ ಬ್ರಹ್ಮೋತ್ಸವದ ಮೂಲಕ ಮುಕ್ತಾಯಗೊಳ್ಳಲಿದೆ. ಈ ಆರು ದಿನಗಳು ಭಜನೆ, ರಂಗೋಲಿ, ಚಿತ್ರಕಲೆ, ಗಾಳಿಪಟ, ಚಿತ್ರಸಂತೆ, ಕುಸ್ತಿ, ದನಗಳ ಜಾತ್ರೆ, ಕಪಿಲಾರತಿ, ದೋಣಿ ವಿಹಾರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇನ್ನೂ ಸುತ್ತೂರು ಜಾತ್ರೆಗೆ ಸುಮಾರು 25 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ಹೀಗಾಗಿ ಬರುವ ಭಕ್ತರಿಗೆ ಪ್ರಸಾದ ವಿನಿಯೋಗಿಸಲು ಗೋದಾಮಿನಲ್ಲಿ ದಿನಸಿ ಪದಾರ್ಥಗಳ ಶೇಖರಣೆ ಮಾಡಲಾಗಿದೆ. 1000 ಕ್ವಿಂಟಾಲ್ ಅಕ್ಕಿ, 180 ಕ್ವಿಂಟಾಲ್ ತೊಗರಿಬೇಳೆ, 1500 ಕ್ಯಾನ್ ಅಡುಗೆ ಎಣ್ಣೆ, 12 ಟನ್ ಬೆಲ್ಲ, 4000 ಕೆಜಿ ಖಾರದಪುಡಿ, 250 ಕ್ವಿಂಟಾಲ್ ಸಕ್ಕರೆ, 500 ಕೆ.ಜಿ. ನಂದಿನಿ ತುಪ್ಪ, 8000 ಲೀ. ಹಾಲು, 28,000 ಲೀ. ಮೊಸರು, 5000 ಕೆ.ಜಿ. ಉಪ್ಪಿನಕಾಯಿ ಸಿದ್ದಗೊಂಡಿದೆ. ಸುತ್ತೂರು ಮಠದ ಗದ್ದಿಗೆ ಸಮೀಪದ ಗೋದಾಮಿನಲ್ಲಿ ದಿನಸಿ ಪದಾರ್ಥಗಳ ಶೇಖರಣೆ ಮಾಡಲಾಗಿದೆ.

ಜಾತ್ರೆ ನೆಪದಲ್ಲಿ ಕೃಷಿ ಜಾತ್ರೆಗೆ ಮುಂದಾದ ಸುತ್ತೂರು ಮಠ

ಸುತ್ತೂರು ಜಾತ್ರೆಯಲ್ಲಿ ಈ ಬಾರಿ ಕೃಷಿ ಬ್ರಹ್ಮಾಂಡ ಆಕರ್ಷಣೆಯಾಗಿರಲಿದೆ. ಜಾತ್ರೆ ನೆಪದಲ್ಲಿ ಕೃಷಿ ಜಾತ್ರೆಗೆ ಸುತ್ತೂರು ಮಠ ಮುಂದಾಗಿದೆ. ಒಂದು ಎಕರೆ ಜಾಗದಲ್ಲಿ 150 ಬೆಳೆ ಬೆಳೆದಿದ್ದಾರೆ. ಪ್ರತಿ ವರ್ಷದಂತೆ ಈ ಭಾರಿಯು ಸಹ ಕೃಷಿ ಮೇಳ ಆಯೋಜನೆ ಮಾಡಲಾಗಿದೆ. ಕೃಷಿ ಮೇಳದಲ್ಲಿ ವಿವಿಧ ಬಗೆಯ ಹೂ, ತರಕಾರಿ, ಸಸ್ಯಕಾಶಿ ಪ್ರದರ್ಶನ ಇರಲಿದೆ. ಕೃಷಿ ಮೇಳವು ದೇಸಿ ಸೊಗಡಿನ ಮಾದರಿಯಲ್ಲಿ ನಿರ್ಮಾಣಗೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version