Site icon Vistara News

Tiger death : ರಸ್ತೆ ದಾಟುತ್ತಿದ್ದ ವೇಳೆ ಡಿಕ್ಕಿ ಹೊಡೆದ ಕಾರು; ಹುಲಿ ಸ್ಥಳದಲ್ಲೇ ಸಾವು

Tiger death accident

ಮೈಸೂರು: ವೇಗವಾಗಿ ಸಾಗುತ್ತಿದ್ದ ಕಾರೊಂದು ರಸ್ತೆ ದಾಟುತ್ತಿದ್ದ ಹುಲಿಗೆ ಡಿಕ್ಕಿ (Car hits tiger) ಹೊಡೆದು ಹುಲಿ ಸ್ಥಳದಲ್ಲೇ ಮೃತಪಟ್ಟಿದೆ (Tiger death). ಮೈಸೂರು-ನಂಜನಗೂಡು ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ (Mandakalli Airport) ಬಳಿ ಘಟನೆ ನಡೆದಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯ ಸಾವು ಒಂದು ಕಡೆ ಆತಂಕಕ್ಕೆ ಕಾರಣವಾಗಿದ್ದರೆ, ಇನ್ನೊಂದು ಕಡೆ ಮಂಡಕಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಹುಲಿಗಳ ಸಂಚಾರವೂ ಆತಂಕ ಮೂಡಿಸಿದೆ. ಸುಮಾರು ಒಂದೂವರೆ ವರ್ಷದ ಗಂಡು ಹುಲಿ ಇದಾಗಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಸತಿ ಶಾಲೆ ಆವರಣದಲ್ಲಿ 25 ಕಾಡಾನೆಗಳ ಗ್ಯಾಂಗ್‌!

ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಅಬ್ಬರ ಜೋರಾಗಿದೆ. ಹಂತಕ ಆನೆ ಭೀಮನೂ ಸೇರಿದಂತೆ 25 ಆನೆಗಳಿರುವ ಕಾಡಾನೆಗಳ ತಂಡ (Elephant herd) ಊರೂರಿನಲ್ಲಿ ತಿರುಗಾಡುತ್ತಾ ಜನರಲ್ಲಿ ಭಯ ಮೂಡಿಸಿದೆ. ಈ ಬೀಟಮ್ಮ ಅಂಡ್ ಗ್ಯಾಂಗ್ ಇದೀಗ ಒಂದು ವಸತಿ ಶಾಲೆಯ ಆವರಣದಲ್ಲಿ ಬೀಡು ಬಿಟ್ಟು ಭಯ ಹುಟ್ಟಿಸಿದೆ.

ಚಿಕ್ಕಮಗಳೂರಿನ ಮುಗ್ತಿಹಳ್ಳಿ ಗ್ರಾಮ ಸಮೀಪದ ಅಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯ ಆವರಣದಲ್ಲಿ 25 ಕಾಡಾನೆಗಳು ಇವೆ. ಈ ಬೀಟಮ್ಮ ಗ್ಯಾಂಗ್‌ನಲ್ಲಿ ಅರಣ್ಯ ಅಧಿಕಾರಿಯೊಬ್ಬರನ್ನು ಬಲಿ ಪಡೆದ ಹಂತಕ ಸಲಗ ಭೀಮ ಕೂಡಾ ಇರುವುದು ಭಯ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.

ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಮೂಗ್ತಿಹಳ್ಳಿ ಗ್ರಾಮ ಬರುತ್ತದೆ. ಅಂದರೆ, ಚಿಕ್ಕಮಗಳೂರು ಹೊರ ವಲಯದ ಪ್ರದೇಶ ಇದು. ಇದೊಂದು ಕಾಡಂಚಿನ ಗ್ರಾಮವಾಗಿದೆ.

ಹಾಸನ ಜಿಲ್ಲೆಯಲ್ಲಿ ಸಾಕಷ್ಟು ರಂಪ ಎಬ್ಬಿಸಿರುವ ಈ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಅಲ್ಲಿಂದ ತಪ್ಪಿಸಿಕೊಂಡ ಕಾಡಾನೆಗಳು ಬೇಲೂರು ಮಾರ್ಗವಾಗಿ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರವೇಶ ಮಾಡಿವೆ. 30ಕ್ಕೂ ಅಧಿಕ ಕಾಡಾನೆಗಳು ಈ ಗುಂಪಿನಲ್ಲಿವೆ.

ಬೀಟಮ್ಮ ಗ್ಯಾಂಗ್ ನಿಂದ ಬೇರ್ಪಟ್ಟಿರುವ 8 ಕಾಡಾನೆಗಳ ತಂಡ ಎರಡು ದಿನದಿಂದ ಚಿಕ್ಕಮಗಳೂರು ಹೊರ ವಲಯದ ಗ್ರಾಮದಲ್ಲಿ ಸಂಚಾರ ಮಾಡುತ್ತಿವೆ. ಇವುಗಳ ಅಡ್ಡಾದಿಟ್ಟಿ ಸಂಚಾರ ಭಾರಿ ಭಯವನ್ನು ಸೃಷ್ಟಿ ಮಾಡಿದೆ. ಜನರು ಮನೆಯಿಂದ ಹೊರಬರಲು, ಊರಿನಲ್ಲಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣಗೊಂಡಿದೆ.

ಇದನ್ನೂ ಓದಿ : Road Accident: ಸ್ನೇಹ ಸಂಭ್ರಮ ಮುಗಿಸಿ ಬರುತ್ತಿದ್ದ ಶಾಲಾ ವಿದ್ಯಾರ್ಥಿಗಳಿಗೆ ಯಮನಾದ ಟ್ರಾಕ್ಟರ್‌, 4 ಮಕ್ಕಳ ಸಾವು

ವಸತಿ ಶಾಲೆಯ ಕಾಂಪೌಂಡ್‌ ಪ್ರವೇಶಿಸಿದ ಆನೆಗಳು

ಈ ನಡುವೆ, ಕಾಂಪೌಂಡ್ ಮುರಿದು ವಸತಿ ಶಾಲಾ ಆವರಣಕ್ಕೆ ‌ಬಂದಿರುವ ಕಾಡಾನೆ ಹಿಂಡು ಭಯ ಹುಟ್ಟಿಸಿದೆ. ವಸತಿ ಶಾಲೆಯಲ್ಲಿ ನೂರಾರು ಮಕ್ಕಳು ಮತ್ತು ಶಿಕ್ಷಕರು ಇದ್ದಾರೆ. ಅವರೆಲ್ಲ ಈ ಆನೆಗಳು ಯಾವಾಗ ದಾಳಿ ನಡೆಸುತ್ತವೋ ಎಂಬ ಆತಂಕದಲ್ಲಿದ್ದಾರೆ. ವಸತಿ ಶಾಲೆಯಿಂದ ಹೊರಬರದಂತೆ ವಿದ್ಯಾರ್ಥಿಗಳು, ಶಿಕ್ಷಕರಿಗೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ದೌಡಾಯಿಸಿದ್ದಾರೆ.

Exit mobile version