Site icon Vistara News

Yathindra Siddaramaiah : ಟ್ರಾನ್ಸ್‌ಫರ್‌ ಆಗಿರುವ ವಿವೇಕಾನಂದ ಯಾರೆಂದೇ ಗೊತ್ತಿಲ್ಲ!; ಯತೀಂದ್ರ ಸ್ಪಷ್ಟನೆ

yathindra Siddaramaiah vivekananda inspector

ಮೈಸೂರು: ಕೆಲವು ದಿನಗಳ ಹಿಂದೆ ಜನತಾ ದರ್ಶನ ಕಾರ್ಯಕ್ರಮದ ನಡುವೆ ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಜತೆ ಫೋನ್‌ನಲ್ಲಿ ಮಾತನಾಡುವ ವೇಳೆ ʻವಿವೇಕಾನಂದ ಎಲ್ಲಿಗೆʼ (Vivekananda row) ಎಂದು ಸ್ಪಷ್ಟವಾಗಿ ಹೇಳಿರುವ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಅವರು ಈಗ ʻನನಗೆ ವಿವೇಕಾನಂದ ಯಾರೆಂದೇ ಗೊತ್ತಿಲ್ಲʼ ಎಂದು ಹೇಳಿದ್ದಾರೆ. ನಾನು ಹೇಳಿದ ವಿವೇಕಾನಂದ ಬೇರೆ, ಟ್ರಾನ್ಸ್‌ ಫರ್‌ ಆದ ವಿವೇಕಾನಂದ ಅವರಿಗೂ ಸಂಬಂಧವೇ ಇಲ್ಲ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಜತೆ ಮಾತನಾಡುವ ವೇಳೆ ʻವಿವೇಕಾನಂದ ಹೆಸರು ಹೇಗೆ ಬಂತು, ನಾನು ಕೊಟ್ಟ ಪಟ್ಟಿಯಲ್ಲಿ ಇರಲಿಲ್ಲ. ಯಾರು ತಿದ್ದಿದ್ದುʼ ಎಂದೆಲ್ಲ ಚೀರಾಡಿದ್ದ ಯತೀಂದ್ರ, ವಿಶೇಷಾಧಿಕಾರಿ ಮಹದೇವ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ನಾನು ಕೊಟ್ಟ ಲೀಸ್ಟನ್ನೇ ಫೈನಲ್‌ ಮಾಡಬೇಕು ಎಂದು ಸಿದ್ದರಾಮಯ್ಯ ಅವರಿಗೂ ಆಗ್ರಹಿಸಿದ್ದರು.

ಈ ನಡುವೆ, ನವೆಂಬರ್‌ 17ರಂದು 21 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ನಾಲ್ಕನೇ ಹೆಸರಾಗಿ ವಿವೇಕಾನಂದ ಅವರ ಹೆಸರು ಇರುವುದು ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ವಿವೇಕಾನಂದ ಅವರನ್ನು ಇಂಟೆಲಿಜೆನ್ಸ್‌ ವಿಭಾಗದಿಂದ ಮೈಸೂರಿನ ವಿವಿ ಪುರಂ ಠಾಣೆಗೆ ವರ್ಗ ಮಾಡಲಾಗಿದೆ. ಈ ವಿಚಾರವನ್ನು ಇಟ್ಟುಕೊಂಡು ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರು ಇದೇ ವಿವೇಕಾನಂದ ಅವರ ಬಗ್ಗೆ ಯತೀಂದ್ರ ಪ್ರಸ್ತಾಪ ಮಾಡಿದ್ದು ಎಂದಿದ್ದಾರೆ. ಈ ಮೂಲಕ ಇದೊಂದು ವರ್ಗಾವಣೆ ದಂಧೆ ಎನ್ನುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

ನಾನು ಹೇಳಿದ ವಿವೇಕಾನಂದ ಅವರೇ ಬೇರೆ ಎಂದ ವಿಜಯೇಂದ್ರ

ವಿಡಿಯೊ ವೈರಲ್‌ ಬಳಿಕ ಮೊದಲ ಬಾರಿಗೆ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ʻʻನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ. ನಾನು ಹತ್ತಾರು ವಿಚಾರಗಳ ಬಗ್ಗೆ ಸಿಎಂ ಜತೆ ಮಾತನಾಡುತ್ತೇನೆ. ಈಗ ನಾನು ದುಡ್ಡಿನ ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು. ಆದರೂ ಈಗ ಅದರ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ಅವತ್ತು ಮಾತನಾಡಿರುವುದು ಸಿಎಸ್ಆರ್ ಫಂಡ್ ವಿಚಾರದ ಬಗ್ಗೆ ಲಿಸ್ಟ್ ಎಂದ ಕೂಡಲೇ ಅದನ್ನು ವರ್ಗಾವಣೆ ಯಾಕೆ ತೆಗೆದುಕೊಂಡು ಹೋಗುತ್ತಾರೆ. ಇವರ ಅವಧಿಯಲ್ಲಿ ಲಿಸ್ಟ್ ಅಂದರೇ ವರ್ಗಾವಣೆ ಅಂದರೇ ಅದು ದಂಧೆಯಾಗಿತ್ತಾ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.

ʻʻಇವರ (ಎಚ್.‌ಡಿ ಕುಮಾರಸ್ವಾಮಿ) ಪತ್ನಿ, ಮಗ ಮತ್ತು ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಅವರ ಮೇಲೂ ನಾವೂ ಅದೇ ರೀತಿ ಮಾತನಾಡಲು ಆಗುತ್ತದಾ? ಹಾಗಾದರೇ ಇವರ ಅವಧಿಯಲ್ಲಿ ಮಾಡಿದ ವರ್ಗಾವಣೆಯಲ್ಲಾ ದಂಧೆಯೇ? ಹಣ ಪಡೆದೇ ವರ್ಗಾವಣೆ ಮಾಡಿದ್ದಾರಾ?ʼʼ ಎಂದು ಕೇಳಿರುವ ಅವರು, ʻʻನನಗೆ ವರುಣ ಕ್ಷೇತ್ರದ ಜವಾಬ್ದಾರಿ ಇದೆ. ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿಸಿದರು ಅದರಲ್ಲಿ ತಪ್ಪೇನಿದೆ.. ಎಲ್ಲಾ ವರ್ಗಾವಣೆಯನ್ನೂ ಇವರು ಹಣದ ದೃಷ್ಟಿಯಲ್ಲಿ ನೋಡಿದರೇ ಇವರು ಅದೇ ಕೆಲಸ ಮಾಡುತ್ತಿದ್ದರು ಎಂದು ಅರ್ಥ ಅಲ್ವಾʼʼ ಎಂದಿದ್ದಾರೆ.

ʻʻಆರೋಪಗಳನ್ನು ಮಾಡುವಾಗ ದಾಖಲೆ ಇಟ್ಟು ಆರೋಪ ಮಾಡಲಿ. ದಾಖಲೆ ಇಲ್ಲದೆ ಸುಖಾಸುಮ್ಮನೆ ಆರೋಪ ಮಾಡಬೇಡಿ. ನಾನು ನನ್ನ ಪಾಡಿಗೆ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ಎಲ್ಲಾ ವಿಚಾರವಾಗಿ ನನ್ನ ಹೆಸರನ್ನು ಡ್ರ್ಯಾಗ್ ಮಾಡಬೇಡಿʼʼ ಎಮದು ಮೈಸೂರಿನಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ : Yathindra Siddaramaiah: ಯತೀಂದ್ರ ಮಾತಿಗೆ ತಾಳೆಯಾದ ವಿವೇಕಾನಂದ ವರ್ಗ, ʼಸಾಕ್ಷಿ ಇಲ್ಲಿದೆ ನೋಡಿʼ ಎಂದ ಎಚ್‌ಡಿಕೆ

ವಿವೇಕಾನಂದ ಯಾರು ಎನ್ನುವುದು ನನಗೆ ಗೊತ್ತಿಲ್ಲ

ನೀವು ಹೇಳುತ್ತಿರುವ ವಿವೇಕಾನಂದ ಯಾರು ಎನ್ನುವುದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದ ಟ್ರಾನ್ಸ್‌ಫರ್ ಎಲ್ಲಿಗೆ ಆಗಿದೆ? ಆ ಕ್ಷೇತ್ರದ ವ್ಯಾಪ್ತಿ ಯಾವುದು.? ಅದರ ಬಗ್ಗೆ ಕ್ಷೇತ್ರದ ಶಾಸಕರನ್ನು ಕೇಳಿಕೊಳ್ಳಿ. ಅದಕ್ಕೂ ನನಗೂ ಏನೂ ಸಂಬಂಧʼʼ ಎಂದು ಕೇಳಿರುವ ಅವರು, ನಮ್ಮ ಕ್ಷೇತ್ರದಲ್ಲಿ ಒಬ್ಬರು ಬಿಇಒ ವಿವೇಕಾನಂದ ಇದ್ದಾರೆ‌. ಇವತ್ತಿನ ವರ್ಗಾವಣೆ ಹೆಸರು ನನಗೆ ಗೊತ್ತಿಲ್ಲ. ಅವರಿಗೆ ಸಂಬಂಧಿಸಿದಂತೆ ಸಿಎಸ್‌ಆರ್‌ ಫಂಡ್‌ ವಿಚಾರ ನಾನು ಮಾತನಾಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

ʻʻಆಧಾರವಿಲ್ಲದೆ ಆರೋಪ ಮಾಡುವುದು ನೀಚ ರಾಜಕಾರಣʼʼ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ʻʻಕುಮಾರಸ್ವಾಮಿ ಅವರಿಗೆ ತಂದೆಯವರ ವಿಚಾರದಲ್ಲಿ ಏನೂ ಆರೋಪ ಮಾಡಲು ಆಗುತ್ತಿಲ್ಲ. ಹೀಗಾಗಿ ಕುಟುಂಬದವರನ್ನು ಬಳಸಿಕೊಂಡು ಅವರನ್ನು ಹಣಿಯುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದರಲ್ಲಾದರೂ ಸಿಎಂ ಕುಟುಂಬವನ್ನು ಸಿಲುಕಿಸುವ ಯತ್ನ ನಡೆಯುತ್ತಿದೆ. ಹಿಂದೆ ವೈಎಸ್‌ಟಿ ಅಂತ ಆರೋಪ ಕೇಳಿಬಂದಿತ್ತು. ಆ ಆರೋಪ ಮಾಡಿವದವರು ಅವರದ್ದೇ ಪಕ್ಷದವರುʼʼ ಎಂದು ಹೇಳಿದರು.

Exit mobile version