ನೆಲ್ಯಾಡಿ (ದಕ್ಷಿಣ ಕನ್ನಡ ಜಿಲ್ಲೆ): ಒಂದೇ ಊರಿನ, ಅಕ್ಕಪಕ್ಕದ ಮನೆಯ ಇಬ್ಬರು ಯುವತಿಯರು ಒಂದೇ ದಿನ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾರಣವೂ ಒಂದೇ. ಅವರಿಬ್ಬರೂ ಹೊಟ್ಟೆ ನೋವಿನಿಂದ ನರಳಿ ಕೊನೆಗೆ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದರು. ಅಲ್ಲಿ ಒಂದೇ ದಿನ ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರೂ ಒಂದೇ ಮಾದರಿಯ ಉದ್ಯೋಗವನ್ನೇ ಮಾಡುತ್ತಿದ್ದರು. ಈ ಎಲ್ಲ ವಿಚಾರಗಳು ಸಾವಿನ ಜತೆ ಹಲವು ಅನುಮಾನಗಳನ್ನು ಹುಟ್ಟಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಪಟ್ರಮೆ ಗ್ರಾಮದ ಪಟ್ಟೂರು ಬಾಬು ಎಂಬವರ ಪುತ್ರಿ ರಕ್ಷಿತಾ (22) ಮತ್ತು ಶ್ರೀನಿವಾಸ ಆಚಾರ್ಯ ಎಂಬವರ ಪುತ್ರಿ ಲಾವಣ್ಯ (21) ಮೃತಪಟ್ಟವರು. ಇವರಲ್ಲಿ ಲಾವಣ್ಯ ಸುರತ್ಕಲ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ರಕ್ಷಿತಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೆನ್ನಲಾಗಿದೆ.
ಈ ಯುವತಿಯರಿಬ್ಬರು ಸೇವಾ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 4ರಂದು ಸಂಜೆ ರಕ್ಷಿತಾ ಮತ್ತು ಲಾವಣ್ಯ ತಮ್ಮ ಮನೆಯಲ್ಲಿ ಹೊಟ್ಟೆ ನೋವಿನಿಂದ ನರಳಾಡಿದ್ದರು. ಇವರಿಬ್ಬರನ್ನು ಮೊದಲು ನೆಲ್ಯಾಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ನಂತರದ ರಕ್ಷಿತಾ ಅವರನ್ನು ಅವರ ಮನೆಯವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಮತ್ತು ಲಾವಣ್ಯರನ್ನು ಅವರ ಮನೆಯವರು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಸುರತ್ಕಲ್ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಕ್ಷಿತಾ ಮತ್ತು ಲಾವಣ್ಯ ಸಾವನ್ನಪ್ಪಿದ್ದಾರೆ. ಈ ಬಗ್ಗೆ ವೈದ್ಯಕೀಯ ವರದಿ ಬಂದ ನಂತರ ಮರಣಕ್ಕೆ ಸ್ಪಷ್ಟ ಕಾರಣ ತಿಳಿದು ಬರಬೇಕಿದೆ. ಧರ್ಮಸ್ಥಳ ಪೊಲೀಸರು ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ : House Collapse : ಸಿಡಿಲಿನ ಹೊಡೆತಕ್ಕೆ ಮನೆಯ ಚಾವಣಿ ಕುಸಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು