Site icon Vistara News

ಮೂಡಲಗಿ ಮಿಸ್ಟರಿ | ದನಗಳ ನಿಗೂಢ ಸಾವು, ಬಾಲಕಿ ಮೈಯಲ್ಲಿ ವಿಚಿತ್ರ ಗಾಯ, ಪರಿಹರಿಸಲು ಬಂದ ಸ್ವಾಮೀಜಿ

mysterious incidents

ಚಿಕ್ಕೋಡಿ: ಇಲ್ಲಿನ ಮೂಡಲಗಿಯಲ್ಲಿ ಸಂಭವಿಸುತ್ತಿರುವ ದನಗಳ ನಿಗೂಢ ಸಾವು ಹಾಗೂ ಬಾಲಕಿ ಮೈಯಲ್ಲಿ ಗೊತ್ತೇ ಆಗದಂತೆ ಆಗುತ್ತಿರುವ ವಿಚಿತ್ರ ಗಾಯಗಳ ಪ್ರಕರಣಕ್ಕೆ ಈಗ ಮಂತ್ರವಾದಿಗಳ ಎಂಟ್ರಿಯಾಗಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದಲ್ಲಿ ಈ ನಿಗೂಢ ಘಟನೆಗಳು ನಡೆಯುತ್ತಿವೆ. ಇಲ್ಲಿನ ರೈತ ವೆಂಕಪ್ಪ ಚಿನ್ನಾಕಟ್ಟಿ ಅವರಿಗೆ ಸೇರಿದ 18 ದನಗಳು ನಿಗೂಢವಾಗಿ ಸಾವು ಕಂಡಿವೆ. ಜತೆಗೆ, ವೆಂಕಪ್ಪ ಅವರ ಮಗಳ ಮೇಲೆ ಯಾರೋ ಬ್ಲೇಡಿನಿಂದ ಗೀರಿದಂತೆ ಅದರಷ್ಟಕ್ಕೇ ಗಾಯಗಳಾಗುತ್ತಿವೆ. ಈ ವಿಚಿತ್ರದ ಬಗ್ಗೆ ಹಿಂದೆ ವಿಸ್ತಾರ ನ್ಯೂಸ್‌ ವರದಿ ಮಾಡಿತ್ತು. ಇದೀಗ ಅದನ್ನು ಪರಿಹರಿಸಲು ವೆಂಕಪ್ಪ ಅವರು ಮಂತ್ರವಾದಿಯ ಮೊರೆ ಹೋಗಿದ್ದಾರೆ.

ವೆಂಕಪ್ಪ ಚಿನ್ನಾಕಟ್ಟಿ ಅವರ ದನಗಳು ಒಂದೊಂದಾಗಿ ಸಾವನ್ನಪ್ಪಿವೆ. ಇದ್ದಕ್ಕಿದ್ದಂತೆ ದನಗಳ‌ ಮೈ ಮೇಲೆ ಬ್ಲೇಡ್‌ನಿಂದ ಹಲ್ಲೆಯಾದಂತೆ ಗಾಯಗಳಾಗುತ್ತವೆ. ನಂತರ ರಕ್ತ ಸೋರಿ ನಿಂತಲ್ಲೆ ಕುಸಿದು ಬಿದ್ದು ಸಾವು ಕಾಣುತ್ತವೆ. ದನಗಳ ರಕ್ತದ ಮಾದರಿ, ಸಗಣಿ, ಹಾಗೂ ಮೂತ್ರ ಪರೀಕ್ಷೆ ಮಾಡಿಸಲಾಗಿದ್ದು, ವರದಿಯಲ್ಲಿ ದನಗಳಿಗೆ ಯಾವುದೇ ಕಾಯಿಲೆ ಇಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಇದು ಮಾಟ ಇರಬಹುದು ಎಂದು ವೆಂಕಪ್ಪ ಶಂಕಿಸಿ ಪೂಜೆ ಪುನಸ್ಕಾರ, ಮಂತ್ರ ತಂತ್ರದ ಮೊರೆ ಹೋಗಿದ್ದರು. ಇದುವರೆಗೂ 18 ದನಗಳು ಹೀಗೆ ಸತ್ತಿವೆ.

ಇದನ್ನೂ ಓದಿ | ಮಾಟ ಮಾಡಿಸಿದ್ದಾಳೆ ಎಂಬ ಭ್ರಮೆಯಲ್ಲಿ ತಮ್ಮ, ಪ್ರೇಯಸಿ ಜತೆ ಸೇರಿ ತಾಯಿಯನ್ನೇ ಕೊಂದ ಡ್ರೈವರ್‌

ಇದೇ ಸಂದರ್ಭದಲ್ಲಿ ವೆಂಕಪ್ಪ ಅವರ ಮಗಳಿಗೂ ಇದೇ ರೀತಿ ಗಾಯಗಳಾಗುತ್ತಿರುವುದು ಕುಟುಂಬವನ್ನು ಬೆಚ್ಚಿ ಬೀಳಿಸಿದೆ. ಇದರ ಪರಿಹಾರಕ್ಕಾಗಿ ಬೆಂಗಳೂರು ಮೂಲದ ಸ್ವಾಮೀಜಿಯೊಬ್ಬರನ್ನು ವೆಂಕಪ್ಪ ಕರೆಸಿ, ಶಾಂತಿ ಹೋಮ ಆಯೋಜಿಸಿದ್ದಾರೆ. ಬೆಂಗಳೂರಿನಿಂದ ಬಂದ ಸ್ವಾಮೀಜಿ ವೆಂಕಪ್ಪ ಅವರ ಹೊಲದಲ್ಲಿ ಪೂಜೆ ಮಾಡುತ್ತಿದ್ದು, ಇದೇ ಸಂದರ್ಭದಲ್ಲೇ ಮನೆಯಲ್ಲಿದ್ದ ಬಾಲಕಿಯ ಮೈಮೇಲೆ ಗೀರಿದಂತೆ ಗಾಯಗಳಾಗಿರುವುದು ಕಂಡುಬಂದಿದೆ. ಪೂಜೆಯನ್ನು ಸ್ವಾಮೀಜಿ ಫೇಸ್‌ಬುಕ್‌ ಲೈವ್‌ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಗಾಯಗೊಂಡ ಮಗಳನ್ನು ವೆಂಕಪ್ಪ ಎತ್ತಿಕೊಂಡಿರುವುದು ಕಂಡುಬಂದಿದೆ.

ಈ ವಿಚಿತ್ರ ಘಟನೆಗಳು ಗ್ರಾಮದಲ್ಲಿ ಕುತೂಹಲ ಹಾಗೂ ಆತಂಕ ಮೂಡಿಸಿವೆ. ಇದು ಮಾಟ ಇರಬಹುದು ಎಂದು ಕುಟುಂಬವೂ ಸೇರಿ ಕೆಲವರು ಶಂಕಿಸಿದ್ದರೆ, ಕುಟುಂಬ ಕೂಡಲೇ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯವಿದೆ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ | Gowri Habba 2022 | ಗೌರಿ ಪೂಜೆಯಲ್ಲಿ ನೀಡುವ ಬಾಗಿನಕ್ಕಿರುವ ಮಹತ್ವವೇನು? ಬಾಗಿನದಲ್ಲಿ ಏನೆಲ್ಲಾ ಇಡಬೇಕು?

Exit mobile version