ಬೆಂಗಳೂರು: ಆರ್ಥಿಕ ನಷ್ಟದಿಂದಾಗಿ ಸ್ಥಗಿತಗೊಂಡಿದ್ದ ಮೈಸೂರು ಸಕ್ಕರೆ ಕಾರ್ಖಾನೆಯನ್ನು (Mysugar Factory) ಪುನಸ್ಥಾಪನೆ ಮಾಡಿ ೩೦ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರವು ಕೂಡಲೇ ಬಾಕಿ ಹಣವನ್ನು ಹಾಗೂ ದುಡಿಯುವ ಬಂಡವಾಳವನ್ನು ಬಿಡುಗಡೆ ಮಾಡಿ ರೈತರಿಗೆ ಎದುರಾಗಿರುವ ಆತಂಕವನ್ನು ದೂರ ಮಾಡಬೇಕು. ಅಲ್ಲದೆ, ಈ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳ ಸಭೆ ಕರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಬಾಕಿ ಉಳಿದಿರುವ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ವಿಧಾನ ಪರಿಷತ್ ಸದಸ್ಯರು, ಬಾಕಿ ಇರುವ ೨೦ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲು ಕೋರಿದ್ದಾರೆ.
ಮುಖ್ಯಮಂತ್ರಿಗೆ ಬರೆದ ಪತ್ರದಲ್ಲೇನಿದೆ?
ಮಂಡ್ಯದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಹಾಗೂ ಕಾರ್ಖಾನೆಯ ಪ್ರಾರಂಭಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರವು ಕಳೆದ ಆಯವ್ಯಯದಲ್ಲಿ ರೂ.50.00 ಕೋಟಿ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಅದರಂತೆ ರಾಜ್ಯ ಸರ್ಕಾರವು ಕೇವಲ ರೂ.30.00 ಕೋಟಿಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಉಳಿಕೆ ರೂ.20.00 ಕೋಟಿ ಮೊತ್ತವನ್ನು ಇದುವರೆಗೂ ಬಿಡುಗಡೆ ಮಾಡಿರುವುದಿಲ್ಲ.
2022ರ ಸೆಪ್ಟೆಂಬರ್ 1ನೇ ತಾರೀಖಿನಿಂದ ಮೈಸೂರು ಸಕ್ಕರೆ ಕಾರ್ಖಾನೆಯು ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದು, ಪ್ರತಿದಿನ 300-400 ಟನ್ ಕಬ್ಬು ಅರೆಯುವಿಕೆಯಿಂದ ಪ್ರಾರಂಭವಾಗಿ ಪ್ರಸ್ತುತ ಸುಮಾರು 1500-1600 ಟನ್ ಕಬ್ಬನ್ನು ಅರೆಯಲಾಗುತ್ತಿದೆ. ಮೈಸೂರು ಸಕ್ಕರೆ ಕಾರ್ಖಾನೆಗೆ ರೈತರು ಸುಮಾರು 3 ಲಕ್ಷ ಟನ್ ಕಬ್ಬನ್ನು ಸರಬರಾಜು ಮಾಡಲು ಒಪ್ಪಿಗೆ ಕರಾರಾಗಿರುತ್ತದೆ. ಆದರೆ, ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಮತ್ತು ಕಬ್ಬು ಅರೆಯುವಿಕೆಯು ನಿಧಾನಗತಿಯಿಂದ ಕೂಡಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುತ್ತಿರುವುದು ಪ್ರತಿನಿತ್ಯ ಕಂಡು ಬರುತ್ತಿದೆ.
ಆದಾಗ್ಯೂ ಸಹ ಸೆಪ್ಟೆಂಬರ್ 1 ರಿಂದ ಇದುವರೆಗೂ ಸುಮಾರು 36,000 ಟನ್ ಕಬ್ಬು ಅರೆಯಲಾಗುತ್ತಿದೆ. ಇಷ್ಟಾದರೂ ನಿಗದಿತ ಗುರಿ ಸಾಧನೆ ಮಾಡಲಾಗದೆ, ಪ್ರತಿ ದಿನ ಸುಮಾರು 3,000 ಟನ್ ಕಬ್ಬನ್ನು ಮಾತ್ರ ಅರೆಯಲಾಗುತ್ತಿದೆ. ನಿಗದಿತ ಗುರಿಯನ್ನು ಮುಟ್ಟದಿರುವುದರಿಂದ ಕಾರ್ಖಾನೆಗೆ ನಷ್ಟವುಂಟಾಗುತ್ತಿದೆ. ತಾವು ಈ ಹಿಂದೆ ಹಣಕಾಸು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಾಕಿಯಿರುವ ರೂ.20.00 ಕೋಟಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಆದೇಶ ನೀಡಿದ್ದರೂ ಇದುವರೆಗೂ ಅಧಿಕಾರಿಗಳು ಹಣ ಬಿಡುಗಡೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಕಾರ್ಖಾನೆಗೆ ದುಡಿಯುವ ಬಂಡವಾಳ (working capital) ಪಡೆಯಲು ಸರ್ಕಾರ ಇದುವರೆಗೂ ಅನುಮತಿಯನ್ನು ನೀಡಿರುವುದಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು ಮತ್ತು ಕಬ್ಬು ಸರಬರಾಜು ಮಾಡಿದ ರೈತರಿಗೆ ಹಾಗೂ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು/ಕಾರ್ಮಿಕರುಗಳಿಗೆ ವೇತನ ನೀಡಲು ಸಹ ತುಂಬಾ ತೊಂದರೆಯಾಗಿರುತ್ತದೆ.
ಆದುದರಿಂದ, ಮೈಸೂರು ಸಕ್ಕರೆ ಕಾರ್ಖಾನೆಗೆ ಬಾಕಿ ಇರುವ ರೂ.20.00 ಕೋಟಿ ಹಣವನ್ನು ಬಿಡುಗಡೆ ಮಾಡಬೇಕೆಂದು ಹಾಗೂ ದುಡಿಯುವ ಬಂಡವಾಳ (working capital) ಪಡೆಯಲು ಸರ್ಕಾರ ಅನುಮತಿ ನೀಡಬೇಕು. ಜತೆಗೆ ಮುಂದಿನ ಸಾಲಿಗೆ ಕಬ್ಬು ಸರಬರಾಜು ಮಾಡಲು ರೈತರಿಂದ ಒಪ್ಪಿಗೆ ಕರಾರು ಪತ್ರವನ್ನು ಮಾಡಿಸಿಕೊಳ್ಳಲು ಸಂಬಂಧಪಟ್ಟವರಿಗೆ ಆದೇಶಿಸಬೇಕೆಂದು ಕೋರುತ್ತೇನೆ. ಈ ಎಲ್ಲ ವಿಷಯಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಸಭೆಯನ್ನು ಕೂಡಲೇ ಕರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರದಲ್ಲಿ ಕೋರಿದ್ದಾರೆ.
ಇದನ್ನೂ ಓದಿ | ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಪ್ರಾರಂಭಿಸಿ; ಸಿಎಂಗೆ ಪತ್ರ ಬರೆದ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ