ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಜಪ ಜೋರಾಗಿದೆ. ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಕೆತ್ತಿದ ರಾಮಲಲ್ಲಾ ಮೂರ್ತಿಯು ರಾಮಮಂದಿರದ (Ram Mandir) ಗರ್ಭಗುಡಿ ಪ್ರವೇಶಿಸಿದೆ. ಹಾಗಾಗಿ, ಅರುಣ್ ಯೋಗಿರಾಜ್ ಅವರ ಕುಟುಂಬಸ್ಥರನ್ನು ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇನ್ನು ಅರುಣ್ ಯೋಗಿರಾಜ್ ಕುಟುಂಬಸ್ಥರು ಸಿಹಿಯಲ್ಲೇ ರಾಮಮಂದಿರವನ್ನು ತಯಾರಿಸಿದ್ದು, ಅದನ್ನು ಅಯೋಧ್ಯೆಗೆ ತೆಗೆದುಕೊಂಡಿದ್ದಾರೆ. ಸಿಹಿ ತಿನಿಸುಗಳಲ್ಲೇ ತಯಾರಿಸಿದ ರಾಮಮಂದಿರದ ಫೋಟೊ ಈಗ ವೈರಲ್ ಆಗಿದೆ.
ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮಲಲ್ಲಾ ಮೂರ್ತಿಯ ಚಿತ್ರವನ್ನು ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ. ರಾಮಲಲ್ಲಾನ ಮೂರ್ತಿಯನ್ನು ನೋಡಿದ ಭಕ್ತರು ಪುಳಕಿತರಾಗಿದ್ದಾರೆ. ರಾಮಮಂದಿರದ ಗರ್ಭಗುಡಿಯಲ್ಲಿ ಶುಕ್ರವಾರ ರಾಮಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಇದಾದ ಬಳಿಕ ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ನಡೆಯಲಿದೆ. ಹಾಗೆಯೇ, ವಿಶೇಷ ಹವನಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೈದಿಕ ಮಂತ್ರಗಳನ್ನು ಪಠಿಸುವ ಮೂಲಕ ವಿಶೇಷ ಹವನ ಮಾಡಲಾಗುತ್ತದೆ. ಆ ಮೂಲಕ ರಾಮಮಂದಿರದ ಗರ್ಭಗುಡಿಯಲ್ಲಿ ಧಾರ್ಮಿಕ ವಾತಾವರಣ ಹಾಗೂ ಸಕಾರಾತ್ಮಕ ಅಂಶಗಳು ಒಡಮೂಡಲಿ ಎಂಬುದು ಅರ್ಚಕರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Arun Yogiraj: ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಹರಿಹರಪುರ ಶ್ರೀಗಳ ಆಶೀರ್ವಾದ
ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ.
Ayodhya, UP | Glimpse of the idol of Lord Ram inside the sanctum sanctorum of the Ram Temple in Ayodhya
— ANI (@ANI) January 19, 2024
(Source: Sharad Sharma, media in-charge of Vishwa Hindu Parishad) pic.twitter.com/vSuDNzpHm4
ರಾಮಮಂದಿರ ಆವರಣಕ್ಕೆ ಪದೇಪದೆ ಬರುವವರು, ಹಾಗೆ ಬರುವವರ ಚಲನವಲನ, ಯಾವುದೇ ಶಂಕಾಸ್ಪದ ವರ್ತನೆ ಕಂಡುಬಂದರೆ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸ್ವಯಂಚಾಲಿತವಾಗಿ ಅಲರ್ಟ್ ನೀಡುತ್ತದೆ. ಅದರಂತೆ ಭದ್ರತಾ ಸಿಬ್ಬಂದಿಯು ಕಾರ್ಯಪ್ರವೃತ್ತರಾಗುತ್ತಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ