ಹಾಸನ: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಕೆಲವರು ಕ್ಷೇತ್ರ ಸುತ್ತಾಟದಲ್ಲಿ ನಿರತರಾಗಿದ್ದಾರೆ. ಇನ್ನು ಕೆಲವರು ಪ್ರಚಾರವನ್ನೇ ಪ್ರಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ತಿಂಗಳಿನಿಂದ ಕ್ಷೇತ್ರ ಸುತ್ತಾಟ ನಡೆಸುತ್ತಿರುವ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್.ಆರ್. ಸಂತೋಷ್‌ಗೆ ಬೆಳಗುಂಬ ಗ್ರಾಮದ ಗೊಲ್ಲರಹಟ್ಟಿ ಜನರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ (ಫೆ.೨೫) ರಾತ್ರಿ ನಡೆದಿದೆ. ಅಲ್ಲದೆ, ಹಲ್ಲೆಗೂ ಮುಂದಾಗಿದ್ದಾರೆನ್ನಲಾಗಿದೆ.
ಗೊಲ್ಲರಹಟ್ಟಿಗೆ ಸಂತೋಷ್ ಶುಕ್ರವಾರ ಪ್ರಚಾರಕ್ಕಾಗಿ ಬಂದಿದ್ದಾರೆ. ಈ ವೇಳೆ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ್ದಾರೆ. ಹೀಗೆ ಮಾತನಾಡುವಾಗ ಊರಿನ ಸೊಸೈಟಿ ಬಗ್ಗೆ ಹೇಳಿಕೆ ನೀಡುತ್ತಿದ್ದಂತೆ ಗ್ರಾಮಸ್ಥರು ಕೆರಳಿದ್ದಾರೆನ್ನಲಾಗಿದೆ. ಈ ವಿಚಾರವಾಗಿ ಸಂತೋಷ್‌ರನ್ನು ಹಿಗ್ಗಾಮುಗ್ಗ ಜಾಡಿಸಿದ್ದಾರೆ.
ನಮ್ಮೂರಿನ ಸೊಸೈಟಿ ಬಗ್ಗೆ ಮಾತನಾಡಲು ನೀನ್ಯಾರು? ನಾವೆಲ್ಲ ಕಷ್ಟಪಟ್ಟು ಸೊಸೈಟಿಗೆ ಒಂದು ಕೋಟಿ ದುಡ್ಡನ್ನು ಹಾಕಿಸಿದ್ದೇವೆ. ಈಗ ನೀನು ಮತ ಕೇಳಿಕೊಂಡು ಬಂದಿದ್ದೀಯಾ? ಇಲ್ಲಿಂದ ಮೊದಲು ಹೋಗು. ನೀನು ಬಂದು ಊರಿಗೆ ಊರನ್ನೇ ಹೊಡೆದಾಡುವಂತೆ ಮಾಡುತ್ತಿದ್ದೀಯ, ನೀನು ಏನು ಒಳ್ಳೆಯ ಕೆಲಸವನ್ನು ಮಾಡಿದ್ದೀಯಾ? ನಿನಗೆ ನಮ್ಮ ಸೊಸೈಟಿ ಬಗ್ಗೆ ಆಸಕ್ತಿ ಇದ್ದರೆ ನಿನ್ನ ಸ್ವಂತ ಜಾಗ ಕೊಡು. ನಾವ್ಯಾಕೆ ನಿನ್ನ ಜತೆ ಬರಬೇಕು? ನಿನ್ನಂತಹವರನ್ನು ಬಹಳ ಜನರನ್ನು ನೋಡಿದ್ದೇವೆ ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Mass Murder: ಭಟ್ಕಳದ ನಾಲ್ವರ ಕೊಲೆ ಆರೋಪಿ ಇನ್ನೂ ನಾಪತ್ತೆ, ಆಸ್ತಿಗಾಗಿ ಕೊಲೆಗೆ ಕುಮ್ಮಕ್ಕು ನೀಡಿದ ಸೊಸೆ
ಈ ವೇಳೆ ಸಂತೋಷ್ ಸಮಜಾಯಿಷಿ ನೀಡಲು ಮುಂದಾದರೂ ಕೇಳುವ ತಾಳ್ಮೆ ಇಟ್ಟುಕೊಳ್ಳದ ಗ್ರಾಮಸ್ಥರು, ಎಲ್ಲಿಂದಲೋ ಬಂದು ನಮ್ಮ ಮೇಲೆ ದೌರ್ಜನ್ಯ ಮಾಡಲು ಬರುತ್ತೀಯಾ ಎಂದು ಪ್ರಶ್ನೆ ಮಾಡಿ ಹಲ್ಲೆಗೂ ಮುಂದಾಗಿದ್ದಾರೆನ್ನಲಾಗಿದೆ. ಇದರಿಂದ ಆತಂಕಗೊಂಡ ಎನ್.ಆರ್. ಸಂತೋಷ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.