Site icon Vistara News

40 ಪರ್ಸೆಂಟ್‌ | ರಾಜ್ಯ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಆಧಾರ ರಹಿತ ಆರೋಪ: ಎನ್.ರವಿಕುಮಾರ್

Criminal Politics

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಅವರು 40% ಸರ್ಕಾರ ಎಂದು ಆಧಾರ ರಹಿತ ಹೇಳಿಕೆ ನೀಡಿರುವುದು ತೀವ್ರ ಖಂಡನೀಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದಿರುವ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿಕೊಟ್ಟಿದ್ದು ನೀವು ಹೇಳಿ, ಹಾದಿ-ಬೀದಿಯಲ್ಲಿ ಹೇಳುವಂತವರಾಗಬೇಡಿ. ಇದು ನಿಮ್ಮ ಅಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಈ ಹಿಂದೆ ಕೇಂದ್ರದಲ್ಲಿ ಮನಮೋಹನ ಸಿಂಗ್ ಮತ್ತು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸಾಲು ಸಾಲು ಹಗರಣಗಳಲ್ಲಿ ಭಾಗಿಯಾಗಿದ್ದವು ಎಂಬುವುದನ್ನು ನೀವು ಮರೆತಿದ್ದೀರಿ, ಕಾಮನ್‌ವೆಲ್ತ್‌ ಗೇಮ್ಸ್‌ ಹಗರಣ, ಹೌಸಿಂಗ್ ಸ್ಕ್ಯಾಮ್, ಕಲ್ಲಿದ್ದಲು ಹಗರಣ, 2ಜಿ ಸ್ಪೆಕ್ಟ್ರಮ್ ಹಗರಣ ಸೇರಿ ಅನೇಕ ಹಗರಣಗಳಲ್ಲಿ ಕಾಂಗ್ರೆಸ್‌ ಸರ್ಕಾರ ಭಾಗಿಯಾಗಿತ್ತು. ಅಲ್ಲದೇ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮಕ್ಕಳ ಹಾಸಿಗೆ, ತಲೆದಿಂಬು ಖರೀದಿ ಹಗರಣ, ಅರ್ಕಾವತಿ ಬಡಾವಣೆಯ ರೀಡೂ ಹಗರಣ, ಮರಳು ಲೂಟಿ ಹಗರಣ, ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಖರೀದಿಯಲ್ಲಿ ಅಕ್ರಮ, ಬಿಬಿಎಂಪಿ ಕಸ ಹಗರಣ, ಕೊಳೆಗೇರಿ ಮಂಡಳಿ ಹಗರಣ, ಅರ್ಜಿ ಹಾಕದೆ ಶಿಕ್ಷಕರ ನೇಮಕಾತಿಯಲ್ಲಿ ಹಗರಣದಂತಹ ಅನೇಕ ಹಗರಣಗಳು ನಡೆದಿದ್ದವು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರವೆಂದರೆ ಕಾಂಗ್ರೆಸ್ ಆಗಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಬುದ್ಧಿವಾದ ಬಿಜೆಪಿ ಪಕ್ಷಕ್ಕೆ ಅಗತ್ಯವಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಇಡೀ ದೇಶದ ಜನರು ಬುದ್ಧಿ ಕಲಿಸಿ ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸದ್ಯದ ಪರಿಸ್ಥಿತಿ ಜೈಲ್ ಕಾಂಗ್ರೆಸ್, ಬೇಲ್ ಕಾಂಗ್ರೆಸ್ ಎಂಬಂತಾಗಿದೆ. ಕಾಂಗ್ರೆಸ್ ನ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಮಗ ರಾಹುಲ್ ಗಾಂಧಿ ಸೇರಿ ಅನೇಕ ನಾಯಕರು ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಬೇಲ್ ಮೇಲೆ ಹೊರಗಿದ್ದಾರೆ. ಹಾಗಾಗಿ ಇಂತಹ ಪಕ್ಷದವರ ಉಪದೇಶ ಬಿಜೆಪಿಗೆ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಅಂದು ನೆಹರು ದೇಶ ವಿಭಜನೆ ಮಾಡಿದ್ದು, ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ತಪ್ಪಾ? ಇದನ್ನು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರು ಒಪ್ಪಿಕೊಳ್ಳುವಿರಾ? ಹಾಗಾದರೇ ಕಾಂಗ್ರೆಸ್‌ನ ಭಾರತ್ ಜೋಡೊ ಪಾದಯಾತ್ರೆಯು ದೇಶವಿಭಜನೆಯ ಪ್ರಾಯಶ್ಚಿತ ಪಾದಯಾತ್ರೆಯೇ ಎಂದು ಪ್ರಶ್ನಿಸಿರುವ ಅವರು, ಇದು ಕೇವಲ ನಿಮ್ಮ ಚುನಾವಣೆ ಗಿಮಿಕ್‌ ಎಂಬುವುದು ದೇಶದ ಜನತೆಗೆ ಗೊತ್ತಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ನ ಚೋಡೋ ಯಾತ್ರೆ ಆಗಲಿದೆ ಎಂದು ಕಿಡಿ ಕಾರಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಮನ್ ಮ್ಯಾನ್ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ 300ಕ್ಕಿಂತ ಹೆಚ್ಚು ಯೋಜನೆಗಳಿಂದ ನಾಡಿನ ಜನತೆಗೆ ನೇರವಾಗಿ ಅವರವರ ಖಾತೆಗೆ ಸಹಾಯಧನ ತಲುಪುತ್ತಿದೆ. ಕಾಂಗ್ರೆಸ್ ನ ಯೋಜನೆಗಳು, ಅನುದಾನಗಳು ಕೆಲವೇ ಕೆಲವು ಜನರ ಸ್ವತ್ತಾಗಿತ್ತು ಮತ್ತು ಕಾಂಗ್ರೆಸ್‌ ಪಕ್ಷದಲ್ಲಿಯೇ ಅವು ಸೋರಿಕೆಯಾಗುತ್ತಿದ್ದವು ಎಂಬುವುದನ್ನು ನೀವು ಮರೆಯಬೇಡಿ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರವು ಜನರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತದೆ, ಹಾಗಾಗಿ ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಪಾಠ ಕಲಿಸಲು ತಯಾರಾಗಿದ್ದಾರೆ. ನಿಮ್ಮ ಭಾರತ ಜೋಡೋ ಯಾತ್ರೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೇವಲ ಪ್ರಚಾರಕ್ಕೆ ಸೀಮಿತವಾಗಲಿದೆ. ದೇಶದ ಜನತೆ ಮತ್ತೆ ಬಿಜೆಪಿಗೆ ಬೆಂಬಲಿಸಲಿದ್ದಾರೆ. ನಿಮಗೆ ಚುನಾವಣೆಯಲ್ಲಿ ತಕ್ಕಪಾಠವನ್ನು ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | PFI Banned | ಕಾಂಗ್ರೆಸ್‌ನ 40% ಆಘಾತಕ್ಕೆ ವಿಲವಿಲನೆ ಒದ್ದಾಡುತ್ತಿದ್ದ BJPಗೆ ಸಿಕ್ಕಿತು ʼಬ್ಯಾನ್‌ʼ ಬಲ

Exit mobile version