ಬೆಂಗಳೂರು: ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಶೀತಲ ಸಮರ ಸ್ಫೋಟಕ ಹಂತಕ್ಕೆ ತಲುಪುವ ಸಾಧ್ಯತೆ ಕಾಣಿಸುತ್ತಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡ್ ಯಾತ್ರೆಯ ಶ್ರೇಯಸ್ಸು ಪಡೆಯುವ ವಿಚಾರದಲ್ಲಿ ಸಿದ್ದು-ಡಿಕೆಶಿ ಬಣಗಳ ನಡುವೆ ಸಂಘರ್ಷ ಉದ್ಧವಿಸಿರುವುದು ಸ್ಪಷ್ಟವಾಗಿಯೇ ಗೋಚರಿಸುತ್ತಿದೆ.
ಈ ನಡುವೆ ಶನಿವಾರ, ಡಿ ಕೆ ಶಿವಕುಮಾರ್ ಅವರ ನಡೆಗೆ ಪಕ್ಷದ ಹಿರಿಯ ಮುಖಂಡರಾದ ದಿನೇಶ್ ಗುಂಡೂರಾವ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದ್ದ ಪದಾಧಿಕಾರಿಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಪಕ್ಷದ ಹಿರಿಯ ನಾಯಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಮತ್ತು ಆರ್ ವಿ ದೇಶಪಾಂಡೆ ವಿರುದ್ಧ ಅವರು ಅಸಮಾಧಾನ ಹೊರಹಾಕಿದ್ದರು.
ರಾಜ್ಯ ಕಾಂಗ್ರೆಸ್‌ನ ಈ ಇಬ್ಬರು ದಿಗ್ಗಜರ ನಡುವೆ ಇದೇ ರೀತಿ ಕಲಹ ಮುಂದುವರಿದರೆ ಇಲ್ಲೂ ಪಂಜಾಬ್ ಕಾಂಗ್ರೆಸ್‌ನ ಪರಿಸ್ಥಿತಿ ಮರುಕಳಿಸಲಿದೆ ಎಂದು ಪಕ್ಷದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಉಭಯ ನಾಯಕರ ನಡುವಿನ ಕಚ್ಚಾಟ ನಿಭಾಯಿಸಲಾಗದೆ ಹೈಕಮಾಂಡ್ ಕೂಡ ಸುಸ್ತು ಹೊಡೆದಿದೆ. ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸುವ ಬಗ್ಗೆ ಸಿದ್ದರಾಮಯ್ಯ ಅವರು ಇನ್ನೂ ಕೊಸರಾಡುತ್ತಲೇ ಇದ್ದಾರೆ.
ಬಿಜೆಪಿ ಸರ್ಕಾರದ ವೈಫಲ್ಯ, ಸರಣಿ ವಿವಾದ ಕಾಂಗ್ರೆಸ್ಗೆ ಬಯಸದೇ ಬಂದ ಭಾಗ್ಯ. ಅದರಲ್ಲೂ ಸಿದ್ದರಾಮೋತ್ಸವಕ್ಕೆ ಸೇರಿದ ಜನಸ್ತೋಮ ಕೈಪಡೆಯ ಉತ್ಸಾಹ ಹೆಚ್ಚಿಸಿದೆ. ಈ ಪರಿಸ್ಥಿತಿಯ ಲಾಭ ಪಡೆದುಕೊಳ್ಳಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ನಲ್ಲಿ ಬಣ ಬಡಿದಾಟ ತಾರಕಕ್ಕೇರಿರುವುದು, ನಿಷ್ಠಾವಂತ ನಾಯಕರು, ಕಾರ್ಯಕರ್ತರ ನಿದ್ದೆಗೆಡಿಸಿದೆ. ಇಷ್ಟು ದಿನ ಸಿದ್ದರಾಮಯ್ಯ ಜತೆ ಒಗ್ಗಟ್ಟಾಗಿರುವುದಾಗಿ ತೋರಿಸಿಕೊಳ್ಳುತ್ತಿದ್ದ ಡಿಕೆ ಶಿವಕುಮಾರ್ ಅವರು ಏಕಾಏಕಿ ಸಿದ್ಧರಾಮಯ್ಯ ಬಣದ ವಿರುದ್ಧ ಮುಗಿಬೀಳುತ್ತಿರುವುದು, ಪಕ್ಷದಲ್ಲಿ ನಾನೇ ಬಾಸ್ ಎಂದು ಹೇಳುತ್ತಿರುವುದು ವರಿಷ್ಠರಿಗೆ ತಲೆಬೇನೆ ತರಿಸಿದೆ.
ದಿನೇಶ್ ಗುಂಡೂರಾವ್ ಹೇಳಿದ್ದೇನು?
ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ತೋರಿಸುವುದಿಲ್ಲ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ದಿನೇಶ್ ಗುಂಡೂರಾವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಿ ಕೆ ಶಿವಕುಮಾರ್ ಯಾವ ಅರ್ಥದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಟಿಕೆಟ್ ಫೈನಲ್ ಮಾಡುವುದು ಹೈಕಮಾಂಡ್. ಕೆಪಿಸಿಸಿಗೆ ಜಿಲ್ಲಾ ಘಟಕಗಳಿಂದ ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ರವಾನೆ ಆಗುತ್ತದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಅಧ್ಯಕ್ಷರು ಮತ್ತು ಸಿಎಲ್ಪಿ ನಾಯಕರು ಇರುವ ಚುನಾವಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗುತ್ತದೆ. ಬಳಿಕ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನೆ ಮಾಡುತ್ತೇವೆ. ನಾವು ಟಿಕೆಟ್ ಹಂಚಿಕೆಯಲ್ಲಿ ಒಂದು ಸಂಪ್ರದಾಯ ಮಾಡಿಕೊಂಡು ಬಂದಿದ್ದೇವೆ. ಆ ಸಂಪ್ರದಾಯ ಬದಲಾಗುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಿದ್ದರಾಮಯ್ಯ ಜನಪ್ರಿಯ ನಾಯಕ
ಸಿದ್ದರಾಮಯ್ಯ ಅವರ ಐದು ವರ್ಷಗಳ ಆಡಳಿತವನ್ನು ಮುಂದೆ ಇಟ್ಟುಕೊಂಡು ನಾವು ಚುನಾವಣೆಗೆ ಹೋಗುತ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಳ್ಳೆಯ ಸಂಘಟನೆಕಾರ. ಆದರೆ ಅವರು ಹಿರಿಯರನ್ನು ಕಡೆಗಣಿಸಬಾರದು ಎಂದು ಸಲಹೆ ನೀಡಿದ್ದಾರೆ.
ದೇಶಪಾಂಡೆ, ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ನಾಯಕರು ಪಕ್ಷದಲ್ಲಿ ಇದ್ದಾರೆ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಿ ಬಿಜೆಪಿ ವೈಪಲ್ಯಗಳನ್ನ ಎತ್ತಿ ತೋರಿಸಿ ಚುನಾವಣೆ ಗೆಲ್ಲಬೇಕು. ಸಿದ್ದರಾಮೋತ್ಸವ ನಡೆದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಸುರ್ಜೇವಾಲಾ ಜತೆ ಮಾತನಾಡುತ್ತೇನೆ
ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಕೂರಿಸಿಕೊಂಡು ಮಾತನಾಡಿ ಎಂದು ಪಕ್ಷದ ಉಸ್ತುವಾರಿ ಸುರ್ಜೆವಾಲಾ ಅವರಿಗೆ ಹೇಳುತ್ತೇನೆ. ನಾವು ಸಮ್ಮಿಶ್ರ ಸರ್ಕಾರದಿಂದ ಹೊರ ಬಂದಿದ್ದೆ ನಮಗೆ ಪೂರಕವಾಗಿದೆ. ಪಕ್ಷ ಸಂಘಟನೆ ಹೆಚ್ಚಾಗಲು ಕಾರಣವಾಗಿದೆ ಎಂದವರು ಹೇಳಿದರು.
ಇದನ್ನೂ ಓದಿ| ನನಗೆ, ಸಿದ್ದರಾಮಯ್ಯಗೆ ಜಯಕಾರ ಬೇಡ; ದೇಶಕ್ಕೆ ಜೈ ಎನ್ನಿ: ಭಾರತ್ ಜೋಡೊ ಪೂರ್ವಭಾವಿ ಸಭೆಯಲ್ಲಿ ಡಿಕೆಶಿ