Site icon Vistara News

Basanagowda Pateel Yatnal : ನ ದೈನ್ಯಂ, ನ ಪಲಾಯನಂ ; ಯತ್ನಾಳ್‌ ಮಾತಿನ ಅರ್ಥವೇನು?

Basanagowda pateel yatnal

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ (Opposition leader) ಆಯ್ಕೆ ವಿಚಾರದಲ್ಲಿ ಸಿಡಿದೆದ್ದಿರುವ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagowda pateel Yatnal) ಅವರು ʻನ ದೈನ್ಯಂ, ನ ಪಲಾಯನಂʼ ಎಂದು ಟ್ವೀಟ್‌ ಮೂಲಕ ಸದ್ದು ಮಾಡಿದ್ದಾರೆ.

ನ ದೈನ್ಯಂ, ನಾ ಪಲಾಯನಂ ಎಂದು ಕನ್ನಡದಲ್ಲಿ ಬರೆದು ಇಂಗ್ಲಿಷ್‌ನಲ್ಲಿ A warrior cannot complain or regret anything. His life is an endless challenge, and challenges cannot possibly be good or bad. Challenges are simply challenges ಎಂದು ಹೇಳಿದ್ದಾರೆ.

ಒಬ್ಬ ಸೈನಿಕ ಯಾವುದೇ ವಿಚಾರದಲ್ಲಿ ದೂರು ಹೇಳುವಂತಿಲ್ಲ, ಯಾವುದೇ ವಿಚಾರದಲ್ಲೂ ವಿಷಾದ ವ್ಯಕ್ತಪಡಿಸುವಂತಿಲ್ಲ. ಯಾಕೆಂದರೆ ಅವನ ಬದುಕು ಕೊನೆಯೇ ಇಲ್ಲದ ಸವಾಲು. ಸವಾಲುಗಳಲ್ಲಿ ಒಳ್ಳೆಯದು ಅಥವಾ ಕೆಟ್ಟದು ಎಂಬುದಿಲ್ಲ. ಸವಾಲು ಎಂದರೆ ಸವಾಲು ಅಷ್ಟೆ- ಇದು ಅವರ ಇಂಗ್ಲಿಷ್‌ ಮಾತಿನ ವಿವರಣೆ.

ಹಾಗಿದ್ದರೆ ನ ದೈನ್ಯಂ, ನ ಪಲಾಯನಂ ಎಂದರೆ ಏನು?
ಇದರ ನೇರ ಅರ್ಥ ಎಂದೂ ತಲೆ ಬಾಗುವುದಿಲ್ಲ, ಪಲಾಯನ ಮಾಡುವುದಿಲ್ಲ

ಬಸನಗೌಡನ ಪಾಟೀಲ್‌ ಯತ್ನಾಳ್‌ ಅವರು ಶುಕ್ರವಾರ ಬೆಳಗ್ಗಿನಿಂದಲೇ ಆಕ್ರೋಶಿತರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರತಿಪಕ್ಷದ ನಾಯಕನ ಆಯ್ಕೆಯ ಮೇಲ್ವಿಚಾರಣೆಗಾಗಿ ವೀಕ್ಷಕರಾಗಿ ಬಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮುಂದೆಯೂ ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದರು. ಉತ್ತರ ಕರ್ನಾಟಕಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ಮಂಡಿಸಿದ್ದರು.

ನಿರ್ಮಲಾ ಸೀತಾರಾಮನ್‌ ಅವರ ಭೇಟಿಯ ಬಳಿಕ ಮಾತನಾಡಿದ ಅವರು ನಾನು ಯಾರಿಗೂ ಡೊಗ್ಗು ಸಲಾಂ ಹೊಡೆಯಲ್ಲ, ಚೇಲಾಗಿರಿ ಮಾಡಲ್ಲ ಎಂದು ಹೇಳಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರ ಆಯ್ಕೆಯನ್ನೂ ಪ್ರಶ್ನೆ ಮಾಡಿದ್ದರು.

ಸಂಜೆ ನಗರದ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಪಕ್ಷ ಸಭೆಗೆ ಆಗಮಿಸಿದ ಯತ್ನಾಳ್‌ ಅವರು ಕೆಲವೇ ನಿಮಿಷ ಅಲ್ಲಿ ನಿಂತು ಬಳಿಕ ʻಇದು ಬಡವರು ಚಹಾ ಕುಡಿಯುವ ಜಾಗ ಅಲ್ಲʼ ಎಂದು ಹೇಳಿ ಹೊರಟಿದ್ದರು. ಇದು ಅವರ ಅಸಮಾಧಾನವನ್ನು ಸ್ಪಷ್ಟವಾಗಿ ತೋರಿಸಿತ್ತು.

ಟ್ವೀಟ್‌ ಮಾಡಿದ ಬಸನಗೌಡ ಪಾಟೀಲ್‌ ಯತ್ನಾಳ್‌

ಇತ್ತ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ ಆರ್‌ ಅಶೋಕ್‌ ಅವರ ಆಯ್ಕೆ ಇನ್ನೇನು ನಡೆಯಲಿದೆ ಎನ್ನುವಾಗ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಒಂದು ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ ಉಲ್ಲೇಖವಾಗಿರುವುದೇ ʻನ ದೈನ್ಯಂ ನ ಪಲಾಯನಂʼ.

ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಸೆ ಪಟ್ಟಿದ್ದ ಯತ್ನಾಳ್‌ ಅವರು ಅದು ಸಿಗದೆ ಇದ್ದುದಕ್ಕೆ ಆಕ್ರೋಶದ ರೂಪದಲ್ಲಿ ಈ ಮಾತು ಆಡಿದ್ದಾರೆ. ನಾನು ಯಾವುದನ್ನೂ ದಯನೀಯವಾಗಿ, ದೈನ್ಯತೆಯಿಂದ ಬೇಡಿ ಕೊಳ್ಳುವುದಿಲ್ಲ. ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ. ಇಲ್ಲೇ ಇದ್ದು ಹೋರಾಡುತ್ತೇನೆ ಎನ್ನುವ ಸಂದೇಶ ನೀಡಿದ್ದಾರೆ. ಇಲ್ಲಿ ತಲೆ ಬಾಗುವುದಿಲ್ಲ ಎನ್ನುವುದು ಪ್ರಮುಖವಾಗಿ ಶತ್ರುಗಳ ಮುಂದೆ ತಲೆ ಬಾಗುವುದಿಲ್ಲ ಎನ್ನುವುದೇ ಆಗಿದೆ!

ಇದನ್ನೂ ಓದಿ : Opposition Leader : ಎಲ್ಲರನ್ನೂ ಗೆಲ್ಲಬಲ್ಲ ಅಜಾತಶತ್ರು ಸಾಮ್ರಾಟ್‌ ಅಶೋಕ್‌ ಈಗ ವಿಪಕ್ಷ ನಾಯಕ

ಇದು ವಾಜಪೇಯಿ ಅವರ ಕವನ ಸಂಕಲನ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ತಮ್ಮ ಕವನಗಳ ಸಂಕಲನಕ್ಕೂ ʻನ ದೈನ್ಯಂ ನ ಪಲಾಯನಂʼ ಎಂದೇ ಹೆಸರಿಟ್ಟಿದ್ದರು. ಅವರು ಕೂಡಾ ತಲೆ ಬಾಗುವುದಿಲ್ಲ, ಪಲಾಯನ ಮಾಡುವುದಿಲ್ಲ ಎಂಬರ್ಥದಲ್ಲಿ ಬಳಕೆ ಮಾಡಿದ್ದರು.

Geethopadesham

ಮಹಾಸುಭಾಷಿತದಲ್ಲೂ ಉಲ್ಲೇಖ, ಶ್ರೀ ಕೃಷ್ಣ ಹೇಳಿದ್ದೂ ಇದನ್ನೇ!

ಮಹಾಸುಭಾಷಿತದಲ್ಲಿ
ʻಅರ್ಜುನಸ್ಯ ಪ್ರತಿಜ್ಞೇ ದ್ವೇ ನ ದೈನ್ಯಂ ನ ಪಲಾಯನಂ
ಆಯು ರಕ್ಷತಿ ಮರ್ಮಾಣಿ ಆಯುರನ್ನಂ ಪ್ರಯಚ್ಛತಿ

ಗೀತೋಪದೇಶದ ಸಂದರ್ಭದಲ್ಲಿ ಶ್ರೀಕೃಷ್ಣ ಅರ್ಜುನನಿಗೂ ಇದೇ ಮಾತನ್ನು ಹೇಳುತ್ತಾನೆ. ಬದುಕಿನ ಸಮಸ್ಯೆಗಳಿಂದ ಯಾವತ್ತೂ ಪಲಾಯನ ಮಾಡಬಾರದು, ಯಾವತ್ತೂ ಶಸ್ತ್ರ ತ್ಯಾಗ ಮಾಡಬಾರದು, ಶತ್ರುಗಳ ಮುಂದೆ ತಲೆಬಾಗಬಾರದು. ಒಮ್ಮೆ ನೀವು ಮಾನಸಿಕವಾಗಿ, ದೈಹಿಕವಾಗಿ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ನಿರ್ಧರಿಸಿದರೆ ನೀನು ಬದುಕಿನ ಯುದ್ಧವನ್ನು ಗೆದ್ದಂತೆಯೇ ಎಂದು ಕೃಷ್ಣ ಹೇಳುತ್ತಾನೆ.

Exit mobile version