ಬೆಂಗಳೂರು: ರಾಜ್ಯ ಕಾಂಗ್ರೆಸ್ ಆಯೋಜಿಸಿದ್ದ ಮಹತ್ವಾಕಾಂಕ್ಷಿ ಮಹಿಳಾ ಸಮಾವೇಶದಲ್ಲಿ (ನಾ ನಾಯಕಿ) ರಾಜ್ಯದ ಜನಪ್ರಿಯ ಕೈ ನಾಯಕಿಯೇ ಮಿಸ್ಸಿಂಗ್! ಹೌದು ಒಂದು ಕಾಲದಲ್ಲಿ ಕಾಂಗ್ರೆಸ್‌ನ ಮುಂಚೂಣಿ ನಾಯಕಿಯಾಗಿದ್ದ ಚಿತ್ರ ನಟಿ ರಮ್ಯ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ʻನಾ ನಾಯಕಿʼ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ!
ಒಂದು ಕಾಲದಲ್ಲಿ ಚಿತ್ರ ನಟಿ ರಮ್ಯಾ ಮಂಡ್ಯ ಸಂಸದರಾಗಿ, ಬಳಿಕ ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆಯಾಗಿ ರಾಜ್ಯ ಮಾತ್ರವಲ್ಲ ದೇಶಾದ್ಯಂತ ಹವಾ ಎಬ್ಬಿಸಿದ್ದರು. ಮಹಿಳಾ ನಾಯಕಿಯರಲ್ಲಿ ಮುಂಚೂಣಿಯಲ್ಲಿದ್ದರು. ಆದರೆ, ಬಳಿಕ ಒಮ್ಮಿಂದೊಮ್ಮೆಗೇ ನಾಪತ್ತೆಯಾದ ಅವರು ಈಗಂತೂ ಕಾಂಗ್ರೆಸ್ ಪಾಲಿಗೆ ಅತಿಥಿ!
ಹೆಚ್ಚು ಕಡಿಮೆ ಕಾಂಗ್ರೆಸ್‌ನ ಪ್ರಮುಖ ವಾಹಿನಿಯಿಂದಲೇ ಮಿಸ್ ಆಗಿದ್ದ ರಮ್ಯಾ ಅವರು ಕರ್ನಾಟಕದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಕೊನೆಯ ಚರಣದಲ್ಲಿ ಕೆಲವು ನಿಮಿಷಗಳ ಕಾಲ ರಾಯಚೂರಿನಲ್ಲಿ ರಾಹುಲ್ ಗಾಂಧಿ ಅವರ ಜತೆ ನಡೆದು ಅಚ್ಚರಿ ಮೂಡಿಸಿದರು. ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರುತ್ತಾರೆ ಎಂಬ ನಿರೀಕ್ಷೆ ಹುಟ್ಟಿಸಿದ್ದರು.
ನಿಜವೆಂದರೆ, ಈ ಹಿಂದೆ ಕೆಲವು ಸಮಯ ರಮ್ಯಾ ಅವರು ದೇಶದಿಂದಲೇ ನಾಪತ್ತೆಯಾಗಿದ್ದರು. ವಿದೇಶದಲ್ಲೇ ಇದ್ದರು. ಈ ಕಾರಣಕ್ಕಾಗಿ ಅವರು ಪಕ್ಷದಿಂದ ದೂರವಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಈಗ ರಮ್ಯಾ ಅವರು ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ, ಚಿತ್ರಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿ ಕರ್ನಾಟಕದಲ್ಲೇ ಇದ್ದಾರೆ. ಹಾಗಿದ್ದರೂ ಅವರು ಕಾಂಗ್ರೆಸ್ ಕಾರ್ಯಕ್ರಮದಿಂದ ದೂರ ಉಳಿದಿದ್ದು ಯಾಕೆ ಎನ್ನುವುದು ಎಲ್ಲರ ಕುತೂಹಲ.
ʻನಾ ನಾಯಕಿʼ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನ ಚರಿಷ್ಮಾಟಿಕ್ ನಾಯಕಿ ಪ್ರಿಯಾಂಕಾ ಗಾಂಧಿಯವರೇ ಬಂದಿದ್ದರು. ಕರ್ನಾಟಕದ ಪಾಲಿಗೆ ಇದೊಂದು ಮಹತ್ವದ ಕಾರ್ಯಕ್ರಮವಾಗಿತ್ತು. ಅದಕ್ಕಿಂತಲೂ ಮುಖ್ಯವಾಗಿ ಇದು ಮಹಿಳೆಯರೇ ಮುಂಚೂಣಿಯಲ್ಲಿದ್ದ ಕಾರ್ಯಕ್ರಮ. ಎಲ್ಲ ಮಹಿಳಾ ನಾಯಕಿಯರಿಗೆ ಇಲ್ಲಿಗೆ ಆಹ್ವಾನ ನೀಡಲಾಗಿತ್ತು. ಶಾಸಕಿಯರು, ಮಾಜಿ ಶಾಸಕಿಯರು, ಮಾಜಿ ಸಚಿವೆಯರು, ನಾನಾ ಹಂತದ ಪದಾಧಿಕಾರಿಗಳು ಮತ್ತು ದೊಡ್ಡ ಮಟ್ಟದ ಕಾರ್ಯಕರ್ತೆಯರು ಬಂದಿದ್ದರು. ಆದರೆ, ರಮ್ಯಾ ಇರಲಿಲ್ಲ.
ರಮ್ಯಾಗೆ ಅಹ್ವಾನವೇ ಇರಲಿಲ್ಲ!
ನಾ ನಾಯಕಿ ಕಾರ್ಯಕ್ರಮಕ್ಕೆ ಮಾಜಿ ಸಂಸದೆಯಾಗಿರುವ ರಮ್ಯಾ ಅವರಿಗೇ ಆಹ್ವಾನ ಇರಲಿಲ್ಲ ಎನ್ನುವುದು ವಿಸ್ತಾರ ನ್ಯೂಸ್‌ಗೆ ತಿಳಿದುಬಂದಿರುವ ಮಾಹಿತಿ. ಹೀಗಾಗಿ ಅವರು ಪ್ರಿಯಾಂಕಾ ಗಾಂಧಿ ಅವರ ಕಾರ್ಯಕ್ರಮಕ್ಕೂ ಬಂದಿಲ್ಲವಂತೆ.
ರಮ್ಯಾ ಅವರ ಬಗ್ಗೆ ಈಗಲೂ ರಾಜ್ಯದ ಕೆಲವು ನಾಯಕರಿಗೆ ಮಾತ್ರವಲ್ಲ ನಾಯಕರಿಗೂ ಭಯ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ರಮ್ಯಾ ಅವರಿಗೆ ಇನ್ನೂ ಸೆಲೆಬ್ರಿಟಿ ಸ್ಟೇಟಸ್ ಇದೆ. ಜನಪ್ರಿಯತೆ ಇದೆ. ರಾಜಕೀಯದಲ್ಲೂ ಉತ್ತಮ ಹೆಸರು ಮಾಡಿದ ಹಿನ್ನೆಲೆ ಇದೆ. ಅವರು ಒಂದು ವೇಳೆ ತಮ್ಮನ್ನು ಓವರ್‌ಟೇಕ್ ಮಾಡಬಹುದು ಎನ್ನುವುದು ಅವರ ಆತಂಕದ ಮೂಲ.
ಅದರಲ್ಲೂ ಮುಖ್ಯವಾಗಿ ಪ್ರಿಯಾಂಕಾ ಗಾಂಧಿ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ವೇದಿಕೆಯಲ್ಲಿ ಅವರು ಪ್ರಿಯಾಂಕಾ ಜತೆ ಆತ್ಮೀಯವಾಗಿ ಅವರಷ್ಟೇ ಸರಿಸಮನಾಗಿ ವಿಜೃಂಭಿಸಬಹುದು. ಪ್ರಿಯಾಂಕಾ ಅವರು ರಮ್ಯಾ ಅವರ ಹೆಸರನ್ನೂ ಉಲ್ಲೇಖಿಸಬಹುದು ಎನ್ನುವುದೆಲ್ಲ ಕೈ ನಾಯಕರ ಆತಂಕಕ್ಕೆ ಕಾರಣವಾದ ಅಂಶಗಳು ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ರಮ್ಯಾ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆಯೇ ಜೈ ಅನಿಸಿಬಿಟ್ಟಿದ್ದಾರೆ!
ಇದನ್ನೂ ಓದಿ | Deepika Padukone | ಪಠಾಣ್ ಕೇಸರಿ ವಿವಾದ : ಸ್ತ್ರೀ ದ್ವೇಷಿಗಳ ವಿರುದ್ಧ ಕಿಡಿಕಾರಿದ ಮೋಹಕ ತಾರೆ ರಮ್ಯಾ, ಟ್ವೀಟ್ ವೈರಲ್!