ಬೆಂಗಳೂರು: ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯನ್ನೇ ಉಳಿಸಿಕೊಳ್ಳಬೇಕು, ನಾಡಗೀತೆ ಒಂದೇ ನಿಮಿಷದಲ್ಲಿ ಮುಗಿಯಬೇಕು, ಕೇವಲ ಎರಡು ಚರಣಗಳು ಸಾಕು: ಇದು ಖ್ಯಾತ ಸಾಹಿತಿ ಡಾ.ಕಮಲಾ ಹಂಪನಾ ಅವರ ಅಭಿಮತ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಆವರಣದಲ್ಲಿರುವ ಶ್ರೀ ಕೃಷ್ಣ ಪರಿಷನ್ಮಂದಿರದ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಈ ಸಲಹೆ ನೀಡಿದರು.
ಸುನಿಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಿಗೇ ನಾಡಗೀತೆಯನ್ನು ಅಂತಿಮಗೊಳಿಸುವುದಾಗಿ ಹೇಳಿದ್ದರು. ಆದರೆ, ಆಗಲೇ ಯಾರ ಸಂಗೀತ ಸಂಯೋಜನೆ ಎನ್ನುವ ವಿಚಾರ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ ಸಾಹಿತ್ಯ ಪರಿಷತ್ ವೇದಿಕೆಯಲ್ಲೇ ಕಮಲಾ ಹಂಪನಾ ಸರಕಾರದ ಮುಂದೆ ಈ ವಿಚಾರವನ್ನು ಮಂಡಿಸಿದ್ದಾರೆ.
ನಮ್ಮ ನಾಡಗೀತೆಗೆ ಹಿಂದಿನ ರಾಗ ಸಂಯೋಜನೆಯನ್ನು ಇಟ್ಟುಕೊಳ್ಳಬೇಕು. ಮೈಸೂರು ಅನಂತಸ್ವಾಮಿ ಅವರ ರಾಗಸಂಯೋಜನೆ ಅಳವಡಿಸಿಕೊಳ್ಳಬೇಕು, ನಾಡಗೀತೆಯ ಮೊದಲ ಚರಣ ಹಾಗೂ ಸರ್ವ ಜನಾಂಗದ ಶಾಂತಿಯ ತೋಟ ಚರಣ ಮಾತ್ರ ಸಾಕು. ಆ ಮೂಲಕ ನಾಡಗೀತೆ ಒಂದು ನಿಮಿಷದಲ್ಲಿ ಮುಗಿಯುವಂತೆ ಮಾಡಬೇಕುʼʼಎಂದು ಹೇಳಿದ ಅವರು, ʻʻನಾನು ಕುವೆಂಪು ಅವರ ಶಿಷ್ಯೆ, ನಾನು ಅವರ ಶಿಷ್ಯೆಯಾಗಿ ಇದನ್ನು ಹೇಳುತ್ತಿದ್ದೇನೆ. ಸರ್ಕಾರ ಯಾರ ಒತ್ತಡಕ್ಕೂ ಮಣಿಯದೇ ನಾಡಗೀತೆಯ ಎರಡು ಚರಣಗಳನ್ನು ಹಾಡುವಂತೆ ಮಾಡಬೇಕುʼʼ ಎಂದರು.
ʻʻಎಲ್ಲ ರಾಷ್ಟ್ರಗಳ ರಾಷ್ಟ್ರಗೀತೆಗಳು ಒಂದು ನಿಮಿಷದಲ್ಲಿ ಮುಗಿಯುತ್ತವೆ, ಅದರಂತೆಯೆ ನಮ್ಮ ರಾಷ್ಟ್ರಗೀತೆಯೂ ೫೨ ಸೆಕೆಂಡುಗಳಷ್ಟಿದೆ. ಹೀಗಾಗಿ ನಾಡಗೀತೆಯೂ ಒಂದು ನಿಮಿಷದಲ್ಲಿ ಮುಗಿಯುವಂತೆ ಸರ್ಕಾರ ಮಾಡಬೇಕುʼʼ ಎಂದು ಬೇಡಿಕೆ ಮಂಡಿಸಿದರು.
ಇದರ ಜತೆಗೆ ಚಿಕ್ಕಪೇಟೆಯ ಕನ್ನಡ ಶಾಲೆಯನ್ನು ಸರ್ಕಾರ ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಬೇಕು ಎಂದೂ ಮನವಿ ಮಾಡಿದರು ಕಮಲಾ ಹಂಪನಾ.
ಸಚಿವ ಅಶೋಕ್ ಭರವಸೆ
ಕಮಲಾ ಹಂಪನಾ ಅವರ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್ ಅವರು, ಡಾ. ಕಮಲಾ ಹಂಪನಾ ಅವರು ಸರ್ಕಾರದ ಎದುರು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವರ ಬೇಡಿಕೆಗಳನ್ನು ೨ ದಿನಗಳಲ್ಲಿ ಈಡೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂದರು.