ಬೆಂಗಳೂರು: ಕುವೆಂಪು ವಿರಚಿತ ʻಜೈ ಭಾರತ ಜನನಿಯ ತನುಜಾತೆʼ ಹಾಡನ್ನು ನಾಡಗೀತೆಯಾಗಿ (Kannada Naadageethe) ಹಾಡುವುದೇನೋ ಸರಿ, ಆದರೆ, ಯಾರ ರಾಗ ಸಂಯೋಜನೆಯಲ್ಲಿ ಹಾಡಬೇಕು ಎಂಬ ವಿಚಾರ ಈಗ ಹೈಕೋರ್ಟ್‌ನಲ್ಲಿ (Karnataka High court) ಕುತೂಹಲಕಾರಿ ರೀತಿಯಲ್ಲಿ ವಿಚಾರಣೆಗೆ ಒಳಪಡುತ್ತಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ (Justice Krishna S Dixit) ಅವರ ನೇತೃತ್ವದ ಏಕಸದಸ್ಯ ಪೀಠವು ನಾನಾ ಆಯಾಮಗಳನ್ನು ಗುರುತಿಸಿಕೊಂಡು ವಿಶ್ಲೇಷಣೆಗೆ (Naadageethe row) ಒಳಪಡಿಸುತ್ತಿದೆ. ಈ ಹಿಂದೆ ನಾಡಗೀತೆಯನ್ನು ಐದು ವಿಭಿನ್ನ ರಾಗಗಳಲ್ಲಿ ಹಾಡಿಸಿದ್ದ ಪೀಠ ಈಗ ಸಂಗೀತ ವಿದ್ವಾಂಸರೊಬ್ಬರನ್ನು ನ್ಯಾಯಾಲಯಕ್ಕೆ ಕರೆಸಿ ಮಾಹಿತಿ ಪಡೆಯಲು ಮುಂದಾಗಿದೆ. ಪೀಠದ ಸದ್ಯದ ಆಯ್ಕೆ ಖ್ಯಾತ ಗಾಯಕಿ ಮತ್ತು ಸಂಗೀತಜ್ಞೆ ಬಿ.ಕೆ. ಸುಮಿತ್ರಾ (BK Sumitra) ಅವರು. ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಶೇಷ ವಿಚಾರಣೆಯ ಕುತೂಹಲಕಾರಿ ಕಥೆ ಇಲ್ಲಿದೆ.
ದಿವಂಗತ ಮೈಸೂರು ಅನಂತಸ್ವಾಮಿ (Mysore Ananthaswamy) ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ 2022ರ ಸೆ.25ರಂದು ಹೊರಡಿಸಿತ್ತು. ಈ ಆದೇಶವನ್ನು ಆಕ್ಷೇಪಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ (Kikkeri Krishnamurthy) ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಿಕ್ಕೇರಿ ಅವರು ಸಿ. ಅಶ್ವಥ್ (C Ashwath) ಅವರ ರಾಗ ಸಂಯೋಜನೆಯಲ್ಲಿ ಈ ಹಾಡು ಇರಬೇಕು ಎನ್ನುವ ವಾದದ ಪ್ರತಿಪಾದಕರಾಗಿದ್ದಾರೆ.
ಜುಲೈ 13ರಂದು ನಾಡಗೀತೆಗೆ ಸಂಬಂಧಿಸಿದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿತ್ತು. ಆಗ ಸರ್ಕಾರಿ ವಕೀಲರು, ಕುವೆಂಪು ಅವರು ಕೆಲವೊಂದು ಷರತ್ತು ವಿಧಿಸಿ ಸಿನಿಮಾದಲ್ಲಿ ನಾಡಗೀತೆ ಬಳಸಲು ಮತ್ತು ರಾಗ ಸಂಯೋಜಿಸಲು ಅನುಮತಿ ನೀಡಿದ್ದಾರೆ ಎಂದಿದ್ದರು. ಆಗ ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಅವರು, ಕುವೆಂಪು ಅವರು ಅನುಮತಿ ನೀಡಿರುವುದು ನಿಜವೇ ಎಂದು ಕೇಳಿದರು. ಆಗ ಉತ್ತರಿಸಿದ ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಪರ ವಕೀಲರು, ಕುವೆಂಪು ಸಾಹಿತ್ಯ ಬಳಕೆಗೆ ಮಾತ್ರ ಅನುಮತಿ ನೀಡಿದ್ದಾರೆ ಹೊರತು ಸಂಗೀತ ಸಂಯೋಜನೆ ವಿಚಾರದಲ್ಲಿ ಏನೂ ಹೇಳಿಲ್ಲ ಎಂದರು. ಈ ಉತ್ತರಕ್ಕೆ ತೃಪ್ತರಾಗದ ನ್ಯಾಯಮೂರ್ತಿಗಳು ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಬೇಕು. ಕಕ್ಷಿದಾರರು ಲಭ್ಯವಿದ್ದರೆ ಅವರನ್ನೇ ಕರೆಸಿ ಎಂದರು. ಈ ವೇಳೆ ಕಿಕ್ಕೇರಿ ಕೃಷ್ಣಮೂರ್ತಿ ಅವರು ಅಲ್ಲೇ ಇದ್ದುದರಿಂದ ನ್ಯಾಯಮೂರ್ತಿಗಳು ಅವರಿಂದಲೇ ಮಾಹಿತಿಯನ್ನು ಕೇಳಿದರು.
ನ್ಯಾಯಾಧೀಶರ ಮುಂದೆ ಮಾಹಿತಿ ನೀಡಿದ ಕಿಕ್ಕೇರಿ ಕೃಷ್ಣಮೂರ್ತಿ ಅವರು, ಕುವೆಂಪು ಅವರು ವಾಸ್ತವವಾಗಿ ಸಿನಿಮಾಕ್ಕೆ ನಾಡಗೀತೆಯ ಸಾಲು ಬಳಸಲು ಅನುಮತಿ ನೀಡಿದ್ದರು. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ಕಲ್ಯಾಣಿ ರಾಗದಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಅಶ್ವಥ್ ಅವರು ಉದಯ ರವಿಚಂದ್ರಿಕೆ ರಾಗ ಮತ್ತು ಅನಂತಸ್ವಾಮಿ ಅವರು ಮಾಯಾ ಮಾಳವ ಗೋಳ ಸಂಗೀತದಲ್ಲಿ ರಾಗ ಸಂಯೋಜಿಸಿದ್ದಾರೆ. ಇದಲ್ಲದೆ, ಇನ್ನು ಹಲವು ರಾಗದಲ್ಲಿ ನಾಡಗೀತೆಯನ್ನು ಹಾಡಬಹುದಾಗಿದೆ ಎಂದು ವಿವರಿಸಿದರು.
ಆಗ ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಅವರು, ನೀವು ರಾಗಗಳ ಹೆಸರು ಹೇಳಿದರೆ ಸಾಕಾಗುವುದಿಲ್ಲ. ಹಾಡಿನ ಸೌಂದರ್ಯ ಹಾಗೂ ಪ್ರಾಮುಖ್ಯತೆ, ವಿವಿಧ ರಾಗಗಳಲ್ಲಿನ ವ್ಯತ್ಯಾಸವನ್ನು ಪ್ರಸ್ತುತ ಪಡಿಸುವುದು ಉತ್ತಮ. ವಿವಿಧ ರಾಗದಲ್ಲಿ ಹಾಡಲು ಸಾಧ್ಯವಿದೆ ಎಂದಾದರೆ ನೀವು ಹಾಡಿ ತೋರಿಸಬಹುದೇ ಎಂದು ಕೇಳಿದರು.
ಆಗ ಕಿಕ್ಕೇರಿ ಅವರು ‘ಉದಯ ರವಿಚಂದ್ರಿಕೆ, ಜಂಜೂಟಿ, ಹಿಂಧೋಳ, ಕಲ್ಯಾಣಿ ಮತ್ತು ಮಾಯಾ ಮಾಳವ ಗೋಳ ರಾಗದಲ್ಲಿ ನಾಡಗೀತೆಯ ಸಾಲು ಹಾಡಿದರು. ನ್ಯಾಯಮೂರ್ತಿಗಳು ಆಲಿಸಿದರು.
ಅಂತಿಮವಾಗಿ ಎಲ್ಲ ಚರಣಗಳಿಗೂ ರಾಗ ಸಂಯೋಜನೆ ಮಾಡಲಾಗಿರುವ ಸಿ. ಅಶ್ವಥ್ ಅವರ ಸಂಯೋಜನೆಯಲ್ಲೇ ಹಾಡುವುದು ಸೂಕ್ತ ಎಂದು ಕಿಕ್ಕೇರಿ ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂದಿನ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಲಾಗಿತ್ತು.
ರಾಗಗಳಿಗೆ ಕಾಲದ ಸಂಬಂಧ ಇದೆ ಎಂದ ಹೈಕೋರ್ಟ್
ನಾಡಗೀತೆ ವಿಚಾರವನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ತುಂಬ ಆಳವಾಗಿ ಅಧ್ಯಯನ ನಡೆಸಿದಂತೆ ವಿಚಾರ ಮಂಡಿಸಿದ್ದು ವಿಶೇಷವಾಗಿತ್ತು. ಜುಲೈ 31ರಂದು ನಡೆದ ವಿಚಾರಣೆಯ ವೇಳೆ ಅವರು, “ರಾಗಕ್ಕೆ ಕಾಲ ಸಾಪೇಕ್ಷತೆ ಇದೆ. ಕೆಲವು ರಾಗಗಳನ್ನು ಮುಂಜಾನೆ ಹೇಳಲಾಗದು. ಮತ್ತೆ ಕೆಲವು ರಾಗಗಳನ್ನು ಮಧ್ಯಾಹ್ನ ಹೇಳಲಾಗದು. ಅದೊಂದು ವಿಜ್ಞಾನ. ಸಂಗೀತ ಶಾಸ್ತ್ರ ಆ ರೀತಿಯಲ್ಲಿ ಬೆಳವಣಿಗೆ ಕಂಡಿದೆ” ಎಂದು ವಿವರಿಸಿದರು.
“ನಾನು ಸಂಗೀತ ಶಾಸ್ತ್ರದ ಹಿನ್ನೆಲೆಯಲ್ಲಿ ಆ ಪದ್ಯವನ್ನು ನೋಡಿದ್ದೇನೆ. ಕೆಲವು ಚರಣಗಳು ರಾತ್ರಿ ರಾಗದಲ್ಲಿ, ಮತ್ತೆ ಕೆಲವು ಚರಣಗಳನ್ನು ಮಧ್ಯಾಹ್ನಿಕ ರಾಗದಲ್ಲಿ ಹೇಳಬೇಕಿದೆ. ಒಂದು ಚರಣ ಪ್ರಾರ್ಥನ ರಾಗದಲ್ಲಿದೆ. ಅದನ್ನು ಏಕೆ ಹಾಗೆ ಮಾಡಿದ್ದಾರೆ ಗೊತ್ತಿಲ್ಲ. ಯಾವುದೇ ಒಂದು ರಾಗದಲ್ಲಿ ಆ ಹಾಡವನ್ನು ಹಾಡಬಹುದೇ ಎಂಬ ಪ್ರಶ್ನೆ ಏಳುತ್ತದೆ. ಇದು ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರ. ಒಳ್ಳೆಯ ಸಂಗೀತ ಗ್ರಂಥಗಳನ್ನು ತಂದು ತಿಳಿಸಬೇಕು” ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿದರು.
ಬೇರೆ ರಾಜ್ಯಗಳ ಸ್ಥಿತಿಗತಿ ಅಧ್ಯಯನ ಮಾಡಿ ತಿಳಿಸಿ
“ಬೇರೆ ರಾಜ್ಯಗಳಲ್ಲಿ ಈ ರೀತಿಯ ನಾಡಗೀತೆಗಳು ಇವೆಯೇ? ಯಾವೆಲ್ಲಾ ರಾಜ್ಯಗಳಲ್ಲಿ ಇವೆ. ಅಲ್ಲಿನ ಸರ್ಕಾರ ಏನು ಮಾಡಿವೆ” ಎಂದು ಪರಿಶೀಲಿಸಿ ಎಂದು ನ್ಯಾಯಾಲಯ ಹೇಳಿತು. ಇದಕ್ಕೆ ಅರ್ಜಿದಾರರ ಪರ ವಕೀಲರು “ತಮಿಳುನಾಡಿನಲ್ಲಿ ನಾಡಗೀತೆ ಇದೆ. ಕವಿಯೇ ರಾಗ ಸಂಯೋಜನೆ ಮಾಡಿದ್ದಾರೆ” ಎಂದು ವಿವರಿಸಿದರು.
ಬಿ.ಕೆ. ಸುಮಿತ್ರಾ ಅವರು ನ್ಯಾಯಾಲಯಕ್ಕೆ ಬರುತ್ತಾರಾ?
ಇಷ್ಟಕ್ಕೇ ಸಮಾಧಾನಗೊಳ್ಳದ ನ್ಯಾಯಪೀಠವು ಈ ವಿಚಾರದಲ್ಲಿ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿದೆ. “ಸಂಗೀತ ಶಾಸ್ತ್ರದ ದಿಗ್ಗಜರಲ್ಲಿ ಯಾರನ್ನು ನ್ಯಾಯಾಲಯಕ್ಕೆ ಕರೆಸಬಹುದು” ಎಂದು ಪ್ರಶ್ನಿಸಿತು. ಇದಕ್ಕೆ ಕಿಕ್ಕೇರಿ ಕೃಷ್ಣಮೂರ್ತಿ ಅವರು “ಬಿ ಕೆ ಸುಮಿತ್ರಾ ಅವರನ್ನು ಕರೆಸಬಹುದು” ಎಂದರು. ಆಗ ಪೀಠವು “ಹಾಗಾದರೆ ಅವರನ್ನು ಮುಂದಿನ ವಿಚಾರಣೆಗೆ ಕರೆಯುತ್ತೀರಾ? ಸಂಗೀತಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಓದಿಕೊಂಡು, ಅವುಗಳ ಮೂಲಕ ನ್ಯಾಯಾಲಯಕ್ಕೆ ಸಹಾಯ ಮಾಡಬೇಕು” ಎಂದು ಹೇಳಿದರು. ಮುಂದಿನ ವಿಚಾರಣೆ ಆಗಸ್ಟ್ 17ರಂದು ನಡೆಯಲಿದೆ.
ಇದನ್ನೂ ಓದಿ: Naadageethe row : ಕೋರ್ಟ್ ಕಟಕಟೆಯಲ್ಲಿ ಮೊಳಗಿದ ನಾಡಗೀತೆ; ಪಂಚ ರಾಗದಲ್ಲಿ ಹಾಡಿದ ಕಿಕ್ಕೇರಿ