Site icon Vistara News

Naadageethe row : ಕೋರ್ಟ್‌ ಕಟಕಟೆಯಲ್ಲಿ ಮೊಳಗಿದ ನಾಡಗೀತೆ; ಪಂಚ ರಾಗದಲ್ಲಿ ಹಾಡಿದ ಕಿಕ್ಕೇರಿ

Kuvempu Naadageethe row in High court

ಬೆಂಗಳೂರು: ಕುವೆಂಪು ಅವರ ʻಜೈ ಭಾರತ ಜನನಿಯ ತನುಜಾತೆʼ ಹಾಡನ್ನು ನಾಡಗೀತೆಯಾಗಿ (Kannada Naadageethe) ಸ್ವೀಕರಿಸಿ ಯಾವುದೋ ಕಾಲವಾಗಿದೆ. ಆದರೆ, ಯಾರ ರಾಗ ಸಂಯೋಜನೆಯಲ್ಲಿ ಹಾಡಬೇಕು ಎಂಬ ವಿಚಾರದಲ್ಲಿ ವಿವಾದ (Naadageethe row) ಮುಂದುವರಿದಿದೆ. ಈ ವಿವಾದ ಈಗ ಕೋರ್ಟ್‌ ಕಟಕಟೆಯಲ್ಲಿದೆ. ಈ ನಡುವೆ, ರಾಜ್ಯ ಹೈಕೋರ್ಟ್‌ (Karnataka High court) ಇದರ ವಿಚಾರಣೆ ನಡೆಸುವ ವೇಳೆ, ವಿಭಿನ್ನ ರಾಗದಲ್ಲಿ ಕುವೆಂಪು ಅವರ ನಾಡಗೀತೆಯನ್ನು ಹಾಡಿಸಿದ (Naadageethe rendered in High court) ಘಟನೆ ಗುರುವಾರ ನಡೆದಿದೆ.

ದಿವಂಗತ ಮೈಸೂರು ಅನಂತಸ್ವಾಮಿ (Mysore Ananthaswamy) ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ 2022ರ ಸೆ.25ರಂದು ಹೊರಡಿಸಿತ್ತು. ಈ ಆದೇಶವನ್ನು ಆಕ್ಷೇಪಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ (Kikkeri Krishnamurthy) ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಿಕ್ಕೇರಿ ಅವರು ಸಿ. ಅಶ್ವಥ್‌ (C Ashwath) ಅವರ ರಾಗ ಸಂಯೋಜನೆಯಲ್ಲಿ ಈ ಹಾಡು ಇರಬೇಕು ಎನ್ನುವ ವಾದದ ಪ್ರತಿಪಾದಕರು.

ನಾಡಗೀತೆಗೆ ಸಂಬಂಧಿಸಿದ ಈ ವಿವಾದದ ವಿಚಾರಣೆ ಗುರುವಾರ ಹೈಕೋರ್ಟ್‌ನಲ್ಲಿ ನಡೆಯಿತು. ವಿಚಾರಣೆಯ ವೇಳೆ ಸರ್ಕಾರಿ ವಕೀಲರು, ಕುವೆಂಪು ಅವರು ಕೆಲವೊಂದು ಷರತ್ತು ವಿಧಿಸಿ ಸಿನಿಮಾದಲ್ಲಿ ನಾಡಗೀತೆ ಬಳಸಲು ಮತ್ತು ರಾಗ ಸಂಯೋಜಿಸಲು ಅನುಮತಿ ನೀಡಿದ್ದಾರೆ ಎಂದರು. ಆಗ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌ ದೀಕ್ಷಿತ್‌ ಅವರು, ಕುವೆಂಪು ಅವರು ಅನುಮತಿ ನೀಡಿರುವುದು ನಿಜವೇ ಎಂದು ಕೇಳಿದರು. ಆಗ ಉತ್ತರಿಸಿದ ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಪರ ವಕೀಲರು, ಕುವೆಂಪು ಸಾಹಿತ್ಯ ಬಳಕೆಗೆ ಮಾತ್ರ ಅನುಮತಿ ನೀಡಿದ್ದಾರೆ ಹೊರತು ಸಂಗೀತ ಸಂಯೋಜನೆ ವಿಚಾರದಲ್ಲಿ ಏನೂ ಹೇಳಿಲ್ಲ ಎಂದರು.

ಈ ಉತ್ತರಕ್ಕೆ ತೃಪ್ತರಾಗದ ನ್ಯಾಯಮೂರ್ತಿಗಳು ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಬೇಕು. ಕಕ್ಷಿದಾರರು ಲಭ್ಯವಿದ್ದರೆ ಅವರನ್ನೇ ಕರೆಸಿ ಎಂದರು. ಈ ವೇಳೆ ಕಿಕ್ಕೇರಿ ಕೃಷ್ಣಮೂರ್ತಿ ಅವರು ಅಲ್ಲೇ ಇದ್ದುದರಿಂದ ನ್ಯಾಯಮೂರ್ತಿಗಳು ಅವರಿಂದಲೇ ಮಾಹಿತಿಯನ್ನು ಕೇಳಿತು.

ಕಿಕ್ಕೇರಿ ಕೃಷ್ಣಮೂರ್ತಿ ಅವರು ಹೇಳಿದ್ದೇನು?

ನ್ಯಾಯಾಧೀಶರ ಮುಂದೆ ಮಾಹಿತಿ ನೀಡಿದ ಕಿಕ್ಕೇರಿ ಕೃಷ್ಣಮೂರ್ತಿ ಅವರು, ಕುವೆಂಪು ಅವರು ವಾಸ್ತವವಾಗಿ ಸಿನಿಮಾಕ್ಕೆ ನಾಡಗೀತೆಯ ಸಾಲು ಬಳಸಲು ಅನುಮತಿ ನೀಡಿದ್ದರು. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್‌ ಅವರು ಕಲ್ಯಾಣಿ ರಾಗದಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಅಶ್ವಥ್‌ ಅವರು ಉದಯ ರವಿಚಂದ್ರಿಕೆ ರಾಗ ಮತ್ತು ಅನಂತಸ್ವಾಮಿ ಅವರು ಮಾಯಾ ಮಾಳವ ಗೋಳ ಸಂಗೀತದಲ್ಲಿ ರಾಗ ಸಂಯೋಜಿಸಿದ್ದಾರೆ. ಇದಲ್ಲದೆ, ಇನ್ನು ಹಲವು ರಾಗದಲ್ಲಿ ನಾಡಗೀತೆಯನ್ನು ಹಾಡಬಹುದಾಗಿದೆ ಎಂದು ವಿವರಿಸಿದರು.

ಆಗ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌ ದೀಕ್ಷಿತ್‌ ಅವರು, ನೀವು ರಾಗಗಳ ಹೆಸರು ಹೇಳಿದರೆ ಸಾಕಾಗುವುದಿಲ್ಲ. ಹಾಡಿನ ಸೌಂದರ್ಯ ಹಾಗೂ ಪ್ರಾಮುಖ್ಯತೆ, ವಿವಿಧ ರಾಗಗಳಲ್ಲಿನ ವ್ಯತ್ಯಾಸವನ್ನು ಪ್ರಸ್ತುತ ಪಡಿಸುವುದು ಉತ್ತಮ. ವಿವಿಧ ರಾಗದಲ್ಲಿ ಹಾಡಲು ಸಾಧ್ಯವಿದೆ ಎಂದಾದರೆ ನೀವು ಹಾಡಿ ತೋರಿಸಬಹುದೇ ಎಂದು ಕೇಳಿದರು.

ಆಗ ಕಿಕ್ಕೇರಿ ಅವರು ‘ಉದಯ ರವಿಚಂದ್ರಿಕೆ, ಜಂಜೂಟಿ, ಹಿಂಧೋಳ, ಕಲ್ಯಾಣಿ ಮತ್ತು ಮಾಯಾ ಮಾಳವ ಗೋಳ ರಾಗದಲ್ಲಿ ನಾಡಗೀತೆಯ ಸಾಲು ಹಾಡಿದರು. ನ್ಯಾಯಮೂರ್ತಿಗಳು ಆಲಿಸಿದರು.

ಅಶ್ವಥ್‌ ಅವರ ಸಂಯೋಜನೆ ಉತ್ತಮ ಎಂದ ಕಿಕ್ಕೇರಿ

ಇದೇ ಸಂದರ್ಭದಲ್ಲಿ ತಮ್ಮ ವಾದವನ್ನೂ ಮಂಡನೆ ಮಾಡಿದ ಕಿಕ್ಕೇರಿ ಕೃಷ್ಣಮೂರ್ತಿ ಅವರು, ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಒಂದು ವೇಳೆ ಅನಂತಸ್ವಾಮಿಯವರೇ ಸಂಯೋಜಿಸಿದ ಧಾಟಿಯಲ್ಲೇ ಹಾಡುವುದಾದರೆ, ಅವರು ಪೂರ್ಣ ಪ್ರಮಾಣದಲ್ಲಿ ಸಂಯೋಜಿಸಿದ ಧಾಟಿಯನ್ನು ನಮ್ಮ ಮುಂದೆ ಸರ್ಕಾರ ಪ್ರಸ್ತುತಪಡಿಸಲಿ. ಆಗ ನಾವು ಒಪ್ಪುತ್ತೇವೆ ಎಂದರು. ಸಿ. ಅಶ್ವತ್‌ ಅವರು, ನಾಡಗೀತೆಯ ಎಲ್ಲ ಚರಣಗಳಿಗೂ ರಾಗ ಸಂಯೋಜನೆ ಮಾಡಿದ್ದಾರೆ. ಹಾಗಾಗಿ ಅದೇ ರಾಗದಲ್ಲಿ ಹಾಡುವುದು ಸೂಕ್ತ ಎಂದು ಕೋರ್ಟ್‌ಗೆ ಮನವಿ ಮಾಡಿಕೊಟ್ಟರು.

ಈ ಎಲ್ಲ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ಕಿಕ್ಕೇರಿ ಕೃಷ್ಣಮೂರ್ತಿ ಅವರು ಪ್ರಕರಣವನ್ನು ಪರಿಗಣಿಸಲು ಯೋಗ್ಯವಾದ ಕಾರಣಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಕುರಿತು ಸರ್ಕಾರಿ ವಕೀಲರು ತಮ್ಮ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಸಿದರು. ಮುಂದಿನ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿದರು.

Exit mobile version