ಬೆಂಗಳೂರು: ಹಾವೇರಿಯಲ್ಲಿ ನಡೆಯಬೇಕಿದ್ದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದಾದ ಮೇಲೊಂದು ಸಮಸ್ಯೆಗಳು ಸೃಷ್ಟಿಯಾಗುತ್ತಿರುವುದು ಕಂಡರೆ ಇದೊಂದು ಶಾಪಗ್ರಸ್ತ ಸಮ್ಮೇಳನವಾಗುತ್ತಿದ್ದೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಸಮ್ಮೇಳನದ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಹಾವೇರಿ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟಣ್ಣನವರ ಅವರನ್ನು ವರ್ಗಾವಣೆ ಮಾಡಿರುವುದು ಸೂಕ್ತವಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
ಆಡಳಿತ ಸುಧಾರಣೆಯ ಹೆಸರಿನಲ್ಲಿ ಕೆಲವು ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ಕಾಲ ಕಾಲಕ್ಕೆ ಆಡಳಿತ ಹಿತ ದೃಷ್ಟಿಯಿಂದ ಅಧಿಕಾರಿಗಳು ಅಥವಾ ಸಿಬ್ಬಂದಿ ವರ್ಗಾವಣೆ ಮಾಡುವುದರಲ್ಲಿ ಯಾವುದೇ ಆಕ್ಷೇಪ ಇಲ್ಲ. ಆದರೆ ಕೆಲವು ಮಹತ್ವದ ಯೋಜನೆಗಳು, ಕಾರ್ಯಗಳು ಜಾರಿಯಲ್ಲಿ ಇರುವಾಗ ಆ ಭಾಗದ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿರುವಾಗ ಏಕಾಏಕಿ ಅಂತಹವರನ್ನು ವರ್ಗಾವಣೆ ಮಾಡುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನೆಮಾಡಿದ್ದಾರೆ.
ಇದನ್ನೂ ಓದಿ | ಡಿ.12ಕ್ಕೆ ಪಂಚಮಸಾಲಿ ನಡಿಗೆ ವಿಧಾನಸೌಧದ ಒಳಗೆ; 25 ಲಕ್ಷ ಮಂದಿಯೊಂದಿಗೆ ಪ್ರತಿಭಟನೆ: ಜಯಮೃತ್ಯುಂಜಯ ಶ್ರೀ
ನಾನಾ ಕಾರಣಗಳಿಗೆ ಮುಂದೂಡಲ್ಪಡುತ್ತಿರುವ ಈ ಸಮ್ಮೇಳನ ಕೊನೆಗೂ ೨೦೨೩ರ ಜನವರಿ ೬ ,೭ ಹಾಗೂ ೮ ರಂದು ನಡೆಸಲು ಸರ್ಕಾರ ಘೋಷಿಸಿತು. ಅದಕ್ಕೆ ತಕ್ಕಂತೆ ಕನ್ನಡ ಸಾಹಿತ್ಯ ಪರಿಷತ್ತು, ಹಾವೇರಿ ಜಿಲ್ಲಾಡಳಿತ ಸೇರಿ ಸಿದ್ಧತೆಗಳನ್ನು ಹಮ್ಮಿಕೊಂಡಿತ್ತು. ಅ.೨೭ ರಂದು ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಸಭೆಯನ್ನು ಸಹ ಕರೆಯಲಾಗಿತ್ತು. ಈ ನಿಟ್ಟಿನಲ್ಲಿ ಹಾವೇರಿ ಜಿಲ್ಲಾಧಿಕಾರಿ ಎಸ್. ಬಿ. ಶೆಟ್ಟಣ್ಣನವರ ನೇತೃತ್ವದಲ್ಲಿ ಹಾವೇರಿ ಸಮ್ಮೇಳನದ ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು ೨೦ಕ್ಕೂ ಹೆಚ್ಚು ಸಮಿತಿಗಳನ್ನು ಸಿದ್ಧಪಡಿಸಲು ವ್ಯವಸ್ಥೆ ಮಾಡಲಾಗಿದೆ. ಸದ್ಯದಲ್ಲಿಯೇ ಸಮ್ಮೇಳನದ ಲಾಂಛನ ಬಿಡುಗಡೆಗೆ ಸಿದ್ಧವಾಗಿದೆ, ಪರಿಷತ್‌ನಲ್ಲಿ ಸಮ್ಮೇಳನದ ಹಿನ್ನೆಲೆಯಲ್ಲಿ ೮೬ ಗ್ರಂಥಗಳು ಪ್ರಕಟವಾಗುತ್ತಿವೆ. ಇದರ ಜತೆಗೆ ಸಾಕಷ್ಟು ಕೆಲಸಗಳು ಪ್ರಗತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧಿಕಾರಿಯವರು ಸಮರ್ಥವಾಗಿ ಸಮ್ಮೇಳನದ ರೂಪುರೇಷೆ ಸಿದ್ಧಪಡಿಸಿದ್ದಾರೆ. ಆದರೆ ದಿಢೀರನೆ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರದ ಆಡಳಿತದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಯಾವತ್ತೂ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಸಮಸ್ತ ಕನ್ನಡಿಗರ ಅಭಿಮಾನ ಹಾಗೂ ಅಸ್ಮಿತೆಯ ಪ್ರತೀಕವಾಗಿರುವ ಹಾವೇರಿ ಸಾಹಿತ್ಯ ಸಮ್ಮೇಳನದ ಮೇಲೆ ಒಂದಿಲ್ಲೊಂದು ಕರಿನೆರಳು ಆವರಿಸುತ್ತಿರುವುದನ್ನು ಪರಿಷತ್ ಸಹಿಸುವುದಿಲ್ಲ. ಈಗಾಗಲೆ ಹಾವೇರಿಗೆ ವರ್ಗಾವಣೆ ಮಾಡಿರುವ ಅಧಿಕಾರಿಗಳು ಸಮರ್ಥರಲ್ಲ ಎನ್ನುವ ಭಾವನೆ ನಮ್ಮಲ್ಲಿ ಇಲ್ಲ. ಬದಲಾಗಿ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿರುವ ಅಧಿಕಾರಿಗಳಿಂದಲೇ ಹಾವೇರಿಯಲ್ಲಿ ನಿಯೋಜಿತ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನು ಓದಿ | ಸರ್ಕಾರಿ ಶಾಲೆಗೆ ಪೋಷಕರಿಂದ ₹100 ವಂತಿಗೆ; ಸರ್ಕಾರದ ನಡೆಗೆ ತಿರುಗಿಬಿದ್ದಿದ್ದ ಪ್ರತಿಪಕ್ಷ ನಾಯಕರು, ಶಿಕ್ಷಣ ತಜ್ಞರು