ಬೆಂಗಳೂರು: ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎಂಎಸ್ ಪದವಿ ಸ್ವೀಕಾರದ ವೇಳೆ ಕನ್ನಡ ಧ್ವಜ ಎತ್ತಿ ಹಿಡಿಯುವ ಮೂಲಕ ಕನ್ನಡ ಪ್ರೇಮವನ್ನು ಮೆರೆದ ಯುವ ಕನ್ನಡಾಭಿಮಾನಿ, ಬೀದರ್ ಮೂಲದ ವಿದ್ಯಾರ್ಥಿ ಆದಿಶ್ ಆರ್. ವಾಲಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಆದರಪೂರ್ವಕ ಗೌರವ ಸಲ್ಲಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಸಿಟಿ ಯೂನಿವರ್ಸಿಟಿ ಆಫ್ ಲಂಡನ್‌ನ ಬೇಯೆಸ್ ಬ್ಯುಸಿನೆಸ್ ಸ್ಕೂಲ್ (ಕ್ಯಾಸ್)ನ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಆದಿಶ್ ಆರ್. ವಾಲಿ ಎಂಬ ಯುವಕ ಎಂಎಸ್ ಪದವಿ ಪೂರೈಸಿದ್ದು, ಪದವಿ ಸ್ವೀಕರಿಸಲು ಬಂದಾಗ ಕನ್ನಡ ಧ್ವಜವನ್ನು ತೆಗೆದು ಎಲ್ಲರ ಎದುರು ಪ್ರದರ್ಶಿಸಿದ್ದಾರೆ. ಈ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಆದಿಶ್ ಹಂಚಿಕೊಂಡಿದ್ದು, ಇದು ಕನ್ನಡಿಗರ ಅಭಿಮಾನಕ್ಕೆ ಕಾರಣವಾಗಿದೆ ಎಂದು ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ʼʼಬ್ರಿಟನ್‌ನಲ್ಲಿ ನಡೆದ ಸಮಾರಂಭದಲ್ಲಿ ನಾನು ನಮ್ಮ ಕರ್ನಾಟಕ ರಾಜ್ಯದ ಧ್ವಜವನ್ನು ಹಾರಿಸಿದ ಹೆಮ್ಮೆಯ ಕ್ಷಣ” ಎಂದು ಬರೆದುಕೊಳ್ಳುವ ಮೂಲಕ ಕನ್ನಡದ ಹೆಮ್ಮೆಯನ್ನು ವಿದೇಶದಲ್ಲಿ ಆದಿಶ್ ಆರ್. ವಾಲಿ ಮೆರೆದಿದ್ದಾರೆ. ಕುವೆಂಪು ಅವರು ಹೇಳಿದಂತೆ “ಎಲ್ಲಾದರೂ ಇರು ಎಂತಾದರೂ ಇರು ಎಂದೆದಿಗೂ ನೀ ಕನ್ನಡವಾಗಿರು” ಎನ್ನುವ ಮಾತನ್ನು ಆದಿಶ್ ವಾಲಿ ಅಕ್ಷರಶಃ ಪಾಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ವಿಸ್ತಾರ ನ್ಯೂಸ್‌ನ ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ ಅಭಿಯಾನ: ಶಿಕ್ಷಣ ಇಲಾಖೆ ಜತೆ ಮಹತ್ವದ ಒಡಂಬಡಿಕೆ
ಕನ್ನಡ ಧ್ವಜವನ್ನು ಹಾರಿಸುತ್ತ ಪದವಿ ಪ್ರಮಾಣ ಪತ್ರ ಪಡೆದಿರುವ ಆದಿಶ್ ಆರ್. ವಾಲಿಯವರ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಶ್ಲಾಘಿಸಿವೆ. ಈ ಕನ್ನಡಿಗನ ಚಿಂತನೆ ಕಂಡು ಇಂಡಿಯಾ ಟುಡೆ ಲಂಡನ್ ಬ್ಯುರೋ ನ್ಯೂಸ್ ಚಾನೆಲ್ ವಿಶೇಷ ಸಂದರ್ಶನಕ್ಕೆ ಆಹ್ವಾನಿಸಿದೆ. ಸದ್ಯ ಆದಿಶ್, ಬ್ರಿಟಿಷ್ ನಾಡಿನಲ್ಲಿ ಕನ್ನಡ ಡಿಂಡಿಮ ಬಾರಿಸುವ ಮೂಲಕ ಕನ್ನಡವನ್ನು ವಿಜೃಂಭಿಸಬೇಕೆಂಬ ಮಹದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ತಾನು ಪಡೆದಿರುವ ಪದವಿಯನ್ನು ಸಮಸ್ತ ಕನ್ನಡಿಗರಿಗೆ ಹಾಗೂ ಕರ್ನಾಟಕಕ್ಕೆ ಅರ್ಪಿಸುವುದಾಗಿ ಹೇಳಿದ್ದು, ಅಚ್ಚ ಕನ್ನಡಿಗನ ಸ್ವಚ್ಛ ಮನಸ್ಸನ್ನು ಬಿಂಬಿಸುತ್ತದೆ. ಈ ಮೂಲಕ ಅವರು ಮೂಲಕ ಇಡೀ ಕನ್ನಡ ನಾಡಿಗೆ ಕಣ್ಮಣಿಯಾಗಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.
ಆದಿಶ್ ಅವರು ಕನ್ನಡತನವನ್ನು ಮೈಗೂಡಿಸಿಕೊಳ್ಳುವಲ್ಲಿ ಪ್ರೇರಣೆಯಾಗಿದ್ದು ಅವರ ಅಜ್ಜ. ಅವರ ಮನೆತನದ ರಕ್ತದಲ್ಲಿ ಕನ್ನಡಾಭಿಮಾನ ಮನೆ ಮಾಡಿದೆ. ಬೀದರ್‌ನ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಹಾಗೂ ದಿ. ಶಕುಂತಲಾ ವಾಲಿ ಅವರ ಮೊಮ್ಮಗನಾಗಿರುವ ಇವರು ಹಿರಿಯರಂತೆ ನಾಡು ನುಡಿಯ ಅಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಅಲ್ಲದೆ, ಖ್ಯಾತ ಉದ್ಯಮಿ ಹಾಗೂ ಪತ್ರಕರ್ತ ಡಾ. ರಜನೀಶ ವಾಲಿ ಮತ್ತು ತಾಯಿ ಅಂಜನಾ ವಾಲಿ ಅವರ ಮಗನಾಗಿದ್ದು, ಈ ಕುಟುಂಬದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್‌ಗೆ ಹೆಮ್ಮೆ ಇದೆ ಎಂದು ಜೋಶೀ ಹೇಳಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ವಿರಾಲಿ ಮೋದಿಯ ಎರಡೂ ಕಾಲುಗಳಲ್ಲಿ ಬಲವಿಲ್ಲ, ಆದರೆ ಆಕೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಾಳೆ!
ಸದ್ಯ ಆದಿಶ್ ಹಾಗೂ ಅವರ ಕುಟುಂಬ ಲಂಡನ್‌ನಲ್ಲಿ ಇದ್ದು, ಅವರು ಭಾರತಕ್ಕೆ ಬಂದ ತಕ್ಷಣ ಅವರನ್ನು ಗೌರವಿಸುವ ಕಾರ್ಯವನ್ನು ಪರಿಷತ್ ಮಾಡಲಿದೆ. ವಿದೇಶಿ ನೆಲದಲ್ಲಿ ಕನ್ನಡ ನಾಡು ನುಡಿಯ ಅಸ್ಮಿತೆಯನ್ನು ಪ್ರದರ್ಶಿಸಿದ ಯುವ ಕನ್ನಡಿಗ ಎಲ್ಲರಿಗೂ ಮಾದರಿಯಾಗಿದ್ದಾರೆ. ಕನ್ನಡದವರು ಕನ್ನಡದಲ್ಲಿ ಮಾತನಾಡಲು ಹಿಂಜರಿಯುವ ಸಂದರ್ಭದಲ್ಲಿ ಆದಿಶ್ ಭಾಷಾ ಪ್ರೇಮ ಎಲ್ಲರಿಗೂ ಮಾದರಿ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.