Site icon Vistara News

Naganagouda Kandakur: ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನ; ಎಚ್‌.ಡಿ. ದೇವೇಗೌಡ ಸಂತಾಪ

Naganagouda Kandakur And HD Devegowda

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ಕ್ಷೇತ್ರದ (Gurumatakal) ಜೆಡಿಎಸ್‌ ಮಾಜಿ ಶಾಸಕ ನಾಗನಗೌಡ ಕಂದಕೂರು (79) ಅವರು (Naganagouda Kandkur) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಭಾನುವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಅವರನ್ನು ಯಾದಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ಹೃದಯಾಘಾತ (Heart Attack) ಸಂಭವಿಸಿ ನಿಧನರಾಗಿದ್ದಾರೆ.

ಗುರುಮಠಕಲ್‌ನ ಹಾಲಿ ಶಾಸಕ ಶರಣಗೌಡ ಕಂದಕೂರು ಅವರ ತಂದೆಯಾದ ನಾಗನಗೌಡ ಕಂದಕೂರು ಅವರು 2018ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ಜೆಡಿಎಸ್ (JDS) ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ನಿಧನ ಸುದ್ದಿ ತಿಳಿದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅಭಿಮಾನಿ ಬಳಗ ಆಸ್ಪತ್ರೆಗೆ ಧಾವಿಸಿದೆ.

ನಾಗನಗೌಡ ಕಂದಕೂರು ಅವರ ಪಾರ್ಥಿವ ಶರೀರವನ್ನು ಅಂಬ್ಯುಲೆನ್ಸ್‌ನಲ್ಲಿ ಯಾದಗಿರಿ (Yadgiri) ನಗರದ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ಪಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ. ಪತಿಯ ಮೃತದೇಹವನ್ನು ಕಂಡು ಪತ್ನಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ತಾಯಿಯ ಸ್ಥಿತಿ ಕಂಡು ಶಾಸಕ ಶರಣಗೌಡ ಕಂದಕೂರು ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸಂತಾಪ

ಗುರುಮಠಕಲ್ ಕ್ಷೇತ್ರದ ಮಾಜಿ ಶಾಸಕ ನಾಗನಗೌಡ ಕಂದಕೂರು ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಸಂತಾಪ ಸೂಚಿಸಿದ್ದಾರೆ. ಗುರುಮಠಕಲ್ ಕ್ಷೇತ್ರದ ಮಾಜಿ ಶಾಸಕರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ನಾಗನಗೌಡ ಕಂದಕೂರು ಅವರ ಅಗಲಿಕೆ ನನಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ನಾಗನಗೌಡರು, ದಶಕಗಳಿಂದ ವೈಯಕ್ತಿಕವಾಗಿ ನನಗೆ ಬಹಳ ಆತ್ಮೀಯರಾಗಿದ್ದವರು ಹಾಗೂ ನಮ್ಮ ಕುಟುಂಬದ ಜೊತೆ ಅತ್ಯಂತ ಅತ್ಮೀಯ ಒಡನಾಟವನ್ನು ಹೊಂದಿದ್ದರು. ಮೃತರ ಕುಟುಂಬದವರಷ್ಟೆ ನಾನು ಸಮಾನ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | BS Yediyurappa: ರೆಡ್ಡಿ, ಆಯನೂರು ಸೇರಿ ಪಕ್ಷ ಬಿಟ್ಟವರು ವಾಪಸ್‌ ಬರ್ತಾರೆ: ಬಿ.ಎಸ್.‌ ಯಡಿಯೂರಪ್ಪ

ಪಕ್ಷಕ್ಕೆ ಬಹುದೊಡ್ಡ ನಷ್ಟ ಎಂದ ಎಚ್‌ಡಿಕೆ

ಗುರುಮಠಕಲ್ ಕ್ಷೇತ್ರದ ಮಾಜಿ ಶಾಸಕ ನಾಗನಗೌಡ ಕಂದಕೂರು ಅವರ ನಿಧನಕ್ಕೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ಗುರುಮಿಠಕಲ್ ಕ್ಷೇತ್ರದ ಮಾಜಿ ಶಾಸಕರು, ಹಿರಿಯರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿದ್ದ ಶ್ರೀ ನಾಗನಗೌಡ ಕಂದಕೂರ ಅವರ ನಿಧನ ನನಗೆ ಅತೀವ ದುಃಖ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಗುರುಮಿಠಕಲ್ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ವಿಜಯದ ಬಾವುಟ ಹಾರಿಸಿದ್ದ ಅವರು, ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಅವರ ನಿಧನ ಪಕ್ಷಕ್ಕೆ ಬಹುದೊಡ್ಡ ನಷ್ಟ. ಶ್ರೀಯುತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | DK Shivakumar: ನಿಗಮ-ಮಂಡಳಿ ಅಧಿಕಾರ 2 ವರ್ಷ ಮಾತ್ರ ಏಕೆ? ಡಿಕೆಶಿ ಕೊಟ್ಟ ಕಾರಣ ಏನು?

Exit mobile version