ಬೆಂಗಳೂರು: ಬೆಂಗಳೂರು-ಹೊಸೂರು ಮುಖ್ಯರಸ್ತೆಯ ಚಿಕ್ಕತೋಗೂರಿನಲ್ಲಿ ಕಿಡಿಗೇಡಿಗಳು ನಾಗದೇವರ ಕಲ್ಲುಗಳನ್ನು ಧ್ವಂಸಗೊಳಿಸಿದ್ದಾರೆ. ಹೆದ್ದಾರಿಯ ಪಕ್ಕದಲ್ಲಿಯೇ ಇರುವ ನಾಗದೇವರ ಅರಳಿಕಟ್ಟೆಯಲ್ಲಿರುವ ನಾಗದೇವರ ಮೂರ್ತಿಯನ್ನು ಕಲ್ಲಿನಿಂದ ಹೊಡೆದು ವಿರೂಪಗೊಳಿಸಲಾಗಿದೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಸಿಸಿಟಿವಿಗಳಿದ್ದು, ಅವುಗಳ ಫೂಟೇಜ್‌ಗಳನ್ನು ಗಮನಿಸಲಾಗುತ್ತಿದ್ದು, ದುಷ್ಕರ್ಮಿಗಳು ಸಿಕ್ಕಿಬೀಳುವ ಸಾಧ್ಯತೆ ಖಚಿತವಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿಗೆ ಒಳಪಡುವ ಚಿಕ್ಕತೋಗೂರಿನ ಅರಳಿ ಕಟ್ಟೆ ಬಳಿ ಈ ನಾಗದೇವರ ಕಟ್ಟೆ ಇದ್ದು, ಸುಮಾರು 30 ವರ್ಷಗಳಿಂದ ಇಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದೆ. ಮಂಗಳವಾರ ರಾತ್ರಿ ಯಾರೋ ದುಷ್ಕರ್ಮಿಗಳು ಬಂದು ಈ ವಿಕೃತಿ ಮೆರೆದಿದ್ದಾರೆ.
ದೇವರ ಮೂರ್ತಿಯನ್ನು ವಿರೂಪಗೊಳಿಸಿದ್ದು ಬೆಳಗ್ಗೆ ಬಯಲಿಗೆ ಬರುತ್ತಿದ್ದಂತೆಯೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಬಜರಂಗದಳ ಮತ್ತು ಹಿಂದೂ ಪರ ಹೋರಾಟಗಾರರು ತಕ್ಷಣವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳಕ್ಕಾಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | ಪಂಜಾಬ್ ಭಟಿಂಡಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು