ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS News) ಕಾರ್ಯಕ್ರಮವೊಂದರಲ್ಲಿ ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಭಾಗವಹಿಸುತ್ತಿದ್ದಾರೆ ಎನ್ನುವುದು ಶುಕ್ರವಾರ ಬೆಳಗ್ಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚಿತ ವಿಷಯ.
ಜುಲೈ 16ರಂದು ಬೆಂಗಳೂರಿನ ದೊಡ್ಡಬಸವಣ್ಣನ ಗುಡಿ ರಸ್ತೆಯಲ್ಲಿರುವ ಶ್ರೀ ನಿಜಗುಣ ಕಲ್ಯಾಣ ಮಂಟಪದಲ್ಲಿ ಶ್ರೀ ಗುರುಪೂಜಾ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗತಿಹಳ್ಳಿ ಚಂದ್ರಶೇಖರ ವಹಿಸಿಕೊಳ್ಳುತ್ತಾರೆ ಎಂದು ಆಹ್ವಾನ ಪತ್ರಿಕೆಯೊಂದು ಶುಕ್ರವಾರ ಹರಿದಾಡಿತು. ಇಲ್ಲಿವರೆಗೆ ಎಡಪರ ಚಿಂತನೆ ಹೊಂದಿದ್ದ ನಾಗತಿಹಳ್ಳಿ ಚಂದ್ರಶೇಕರ್ ಮನುವಾದಿಯಾದರು ಎಂದು ಕೆಲವರು ಹೇಳಿದರೆ, ಇಲ್ಲಿವರೆಗೆ ಒಳಗೆ ಮಾತ್ರ ಇದ್ದ ಭಾವನೆ ಬಹಿರಂಗಗೊಂಡಿದೆ ಎಂದು ಕೆಲವರು ಹೇಳಿದ್ದಾರೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದಾಗ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರಲ್ಲಿ ಏನು ತಪ್ಪು? ಆರ್‌ಎಸ್‌ಎಸ್ ಏನು ನಿಷೇಧಿತ ಸಂಘಟನೆಯೇ? ಎಂದೂ ಅನೇಕರು ಪ್ರಶ್ನಿಸಿದ್ದಾರೆ. ಇದೆಲ್ಲ ಚರ್ಚೆಯ ನಡುವೆ ನಾಗತಿಹಳ್ಳಿ ಚಂದ್ರಶೇಖರ್ ಉತ್ತರಿಸಿದ್ದಾರೆ.
ನಾಗತಿಹಳ್ಳಿ ಸ್ಪಷ್ಟನೆ
ವಿವಾದದ ಕುರಿತು ನಾಗತಿಹಳ್ಳಿ ಚಂದ್ರಶೇಖರ್ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿಲ್ಲ.ಅದನ್ನು ನಾನು ಸ್ಪಷ್ಟಪಡಿಸಿಯೂ ಆಮಂತ್ರಣದಲ್ಲಿ ನನ್ನ ಹೆಸರು ಅಚ್ಚಾಗಿದೆ.ಅದು ‘ಆಕಸ್ಮಿಕ’ಎಂದು ಅವರು ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ವಿಷಯ ಮುಕ್ತಾಯಗೊಂಡಿದೆ. ಆ ದಿನಾಂಕದಂದು ನಾನು ದೂರದ ದೇಶದಲ್ಲಿ ಚಿತ್ರೀಕರಣದಲ್ಲಿರುವುದು ನನ್ನನ್ನು ಬಲ್ಲವರಿಗೆಲ್ಲ ತಿಳಿದಿದೆ.
ನನ್ನನ್ನು ಅತ್ಯಂತ ಹತ್ತಿರದಿಂದ ಬಲ್ಲ, ನನ್ನನ್ನು ನಂಬುವ,ನನ್ನನ್ನು ಪ್ರೀತಿಸುವ, ನನ್ನನ್ನು ಬೆಳೆಸಿರುವ,ನನ್ನೊಂದಿಗೆ ಹಳ್ಳಿಯ ಕೆಲಸದಲ್ಲಿ ಕೈಜೋಡಿಸಿರುವ ಅಕ್ಕರೆಯ ಎಲ್ಲ ಮನಸ್ಸುಗಳಿಗೆ ಹೇಳುವ ಒಂದು ಮಾತು: ನಾನು ಏನಾಗಿದ್ದೀನೋ ಅದೇ ಆಗಿ ಇರುತ್ತೇನೆ. ನಾನು ಏನು ಮಾಡುತ್ತಿದ್ದೀನೋ ಅದು ಸರಿ ಇದೆ.ಅದನ್ನೇ ಮುಂದುವರೆಸುತ್ತೇನೆ.
ತಪ್ಪು ತಿಳಿಯಲು,ತಪ್ಪು ಹರಡಲು ತುದಿಗಾಲಲ್ಲಿ ನಿಂತವರನ್ನು, ನಿತ್ಯ ಹೊಸ,ಹುಸಿ ರೋಮಾಂಚನ ಬಯಸುವ ಮಹನೀಯರನ್ನು ಮನ್ನಿಸಿ ಮುಂದೆ ಹೋಗೋಣ. ಇಲ್ಲಿ ನಾವೆಲ್ಲ ಮಾಡಲೇಬೇಕಾದ ಜನಪರ ಕೆಲಸಗಳು ಬಹಳಷ್ಟಿವೆ. ಮಾಡೋಣ. ಇನ್ನು ಮಾತು ಸಾಕು ಎಂದು ನಾಗತಿಹಳ್ಳಿ ಚಂದ್ರಶೇಕರ್ ತಿಳಿಸಿದ್ದಾರೆ.