ಬೆಂಗಳೂರು: ಅದೊಂದು ಸುಂದರ ಸಂಸಾರ. ಪತಿ ಲೋಹಿತ್ ಕುಮಾರ್ ಅವರು ಸಿವಿಲ್ ಎಂಜಿನಿಯರ್. ಪತ್ನಿ ತೇಜಸ್ವಿನಿ ಕಾರ್ಡಿಯಾಕ್ ಮೋಟರೋಲಾದಲ್ಲಿ ಎಂಜಿನಿಯರ್. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಎರಡು ವರ್ಷ ಆರು ತಿಂಗಳ ಇಬ್ಬರು ಪುಟ್ಟ ಮಕ್ಕಳು. ಲೋಹಿತ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೊರಟಿದಾರೆ. ಅವರ ಮನೆ ಇರುವುದು ಬೆಂಗಳೂರಿನ ಕಲ್ಕೆರೆಯ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ. ಅಲ್ಲಿಂದ ಪತ್ನಿಯನ್ನು ಮಾನ್ಯತಾ ಟೆಕ್ ಪಾರ್ಕ್‌ಗೆ ಕರೆದುಕೊಂಡು ಹೋಗಿ, ಬಳಿಕ ಮಕ್ಕಳನ್ನು ಬೇಬಿ ಸಿಟ್ಟಿಂಗ್‌ನಲ್ಲಿ ಬಿಟ್ಟು ತಾನು ಕೆಲಸಕ್ಕೆ ಹೋಗುವುದು ಅವರ ಪ್ಲಾನ್ ಆಗಿತ್ತು. ಆದರೆ ಆಗಿದ್ದೇ ಬೇರೆ. ನಾಗವಾರ ಮೆಟ್ರೋ ಪಿಲ್ಲರ್ (Namma Metro Pillar) ಅವರ ಬದುಕಿನ ಕನಸುಗಳೆಲ್ಲವನ್ನೂ ನುಚ್ಚು ನೂರು ಮಾಡಿತು. ತೇಜಸ್ವಿನಿ ಮತ್ತು ಒಂದು ಮಗು ವಿಹಾನ್ ಉರುಳಿಬಿದ್ದ ಪಿಲ್ಲರ್‌ನಡಿ ಸಿಲುಕಿ ಪ್ರಾಣ ಕಳೆದುಕೊಂಡರೆ, ಲೋಹಿತ್ ಮತ್ತು ಇನ್ನೊಂದು ಮಗು ಪವಾಡ ಸದೃಶವೆಂಬಂತೆ ಬದುಕುಳಿದಿದ್ದಾರೆ.
ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ಮಂಗಳವಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ರಾಡುಗಳು ಜೀವ ತೆಗೆದಿದೆ. ಟನ್‌ಗಟ್ಟಲೆ ತೂಕದ ಮೆಟ್ರೋ ಪಿಲ್ಲರ್ ದಿಢೀರ್ ಮರದ ಮೇಲೆ ಉರುಳಿದಿದೆ. ಆ ಮರದ ಕೊಂಬೆ ಅದೇ ಹೊತ್ತಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮತ್ತು ಮಕ್ಕಳ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ತಾಯಿ-ಮಗು ದುರ್ಮರಣ ಹೊಂದಿದ್ದಾರೆ. ಈ ಮಧ್ಯೆ ಪವಾಡ ಎಂಬಂತೆ ತಂದೆ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಲತಃ ಗದಗ ನಿವಾಸಿಗಳಾದ ಲೋಹಿತ್, ತೇಜಸ್ವಿನಿ (೨೮) ದಂಪತಿಗೆ ಅವಳಿ ಜವಳಿ ಮಕ್ಕಳಿದ್ದು, ಕಳೆದ 10 ವರ್ಷಗಳಿಂದ ಬೆಂಗಳೂರಿನ ಕಲ್ಕೆರೆಯ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಮೋಟರೋಲಾದಲ್ಲಿ ಇಂಜಿನಿಯರ್ ಆಗಿರುವ ತೇಜಸ್ವಿನಿ ಅವರನ್ನು ಪತಿ ಲೋಹಿತ್ ಎಂದಿನಂತೆ ಕಚೇರಿಗೆ ಬಿಟ್ಟು ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಬಿಡಲು ತೆರಳುತ್ತಿದ್ದರು. ಆದರೆ ಯಮಸ್ವರೂಪಿಯಾಗಿ ಕಾದು ನಿಂತಿದ್ದ ಮೆಟ್ರೋ ಪಿಲ್ಲರ್‌ಗಳು ಏಕಾಏಕಿ ಮರಕ್ಕೆ ಉರುಳಿ, ಆ ಮರವು ಬೈಕ್‌ನಲ್ಲಿ ಬರುತ್ತಿದ್ದ ತೇಜಸ್ವಿನಿಯ ತಲೆ ಮೇಲೆ ಹಾಗೂ ಎರಡೂವರೆ ವರ್ಷದ ವಿಹಾನ್‌ನ ಬಲಭಾಗದ ಮೇಲೆ ಬಿದ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ತಾಯಿ-ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅದಾಗಲೇ ತೀವ್ರ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಈ ಘಟನೆಯಲ್ಲಿ ಪತಿ ಲೋಹಿತ್, ಮತ್ತೊಂದು ಮಗು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಎಮರ್ಜೆನ್ಸಿ ಸ್ಪೆಷಲಿಸ್ಟ್ ಡಾ ಮಹೇಶ್ ಮಾಹಿತಿ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಯಿಂದ ತೇಜಸ್ವಿನಿ ಹಾಗೂ ವಿಹಾನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರ ಮಾಡಲಾಯಿತು. ವಿಷಯ ತಿಳಿಯುತ್ತಿದ್ದ ಕುಟುಂಬಸ್ಥರು ಆಸ್ಪತ್ರೆ ಬಳಿ ಜಮಾಯಿಸಿದ್ದರು. ತಾಯಿ-ಮಗುವಿನ ಸಾವಿನ ಸುದ್ದಿ ಕೇಳಿ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆಗೆ ಸಿಎಂ ವಿಷಾದ
ತಾಯಿ, ಮಗು ಸಾವು ಹಿನ್ನೆಲೆ ಧಾರವಾಡದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಈಗಷ್ಟೇ ವಿಷಯ ತಿಳಿದು ಬಂದಿದ್ದು, ಘಟನೆ ಹೇಗಾಯಿತು ಎಂಬುದರ ಕುರಿತು ಮಾಹಿತಿ ಕೇಳಿದ್ದೇನೆ. ಮೃತರಿಗೆ ಪರಿಹಾರ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಸ್ತೆಗೆ ಬಿದ್ದಿದ್ದ ಪಿಲ್ಲರ್ ತೆರವು
ರಸ್ತೆಗೆ ಬಿದ್ದಿದ್ದ ಪಿಲ್ಲರ್ ತೆರವುಗೊಳಿಸುವ ಸಲುವಾಗಿ ವಾಹನ್ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಘಟನೆಯಿಂದಾಗಿ ಸುತ್ತಮುತ್ತ 2 ಕಿ.ಮೀವರೆಗೆ ಟ್ರಾಫಿಕ್ ಜಾಮ್ ಉಂಟಾಯಿತು. ಕಾರ್ಮಿಕರ ಸಹಾಯದೊಂದಿಗೆ ಗ್ಯಾಸ್ ಕಟರ್ ಬಳಸಿ ಪಿಲ್ಲರ್ ಕಟ್ ಮಾಡಲಾಯಿತು. ಬಳಿಕ ಕ್ರೇನ್ ಮೂಲಕ ಪಿಲ್ಲರ್ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಘಟನೆ ಸಂಬಂಧ ಡಿಸಿಪಿ ಭೀಮಾಶಂಕರ್ ಗುಳೇದ್ ಮಾತನಾಡಿದ್ದು, ಬೆಳಗ್ಗೆ ಸುಮಾರು ೧೦.೩೦ಕ್ಕೆ ದುರ್ಘಟನೆ ನಡೆದಿದ್ದು, ಸ್ಟೀಲ್ ರಾಡ್ ಸೆಂಟ್ರಿಂಗ್ ಕುಸಿದಿದೆ. ಆಗ ಬೈಕ್‌ನಲ್ಲಿ ಬರುತ್ತಿದ್ದ ಕುಟುಂಬದ ಮೇಲೆ ಬಿದ್ದು, ತಾಯಿ-ಮಗು ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಲ್ಟಿಯಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅವರಿಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮುಂದಿನ ಪ್ರಕ್ರಿಯೆಗೆ ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತಳ ಪತ್ನಿ ಲೋಹಿತ್ ದೂರು ನೀಡಲಿದ್ದು, ಅದರ ಅನ್ವಯ ತನಿಖೆ ನಡೆಸಲಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಬರಲಿದ್ದು, ಸ್ಥಳ ಮಹಜರು ಹಾಗೂ ಸ್ಯಾಂಪಲ್ ಕಲೆಕ್ಟ್ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ | Nagavara Metro Pillar | ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ: ಸ್ಕೂಟಿಯಲ್ಲಿ ತೆರಳುತ್ತಿದ್ದ ಅಮ್ಮ, ಮಗು ದುರ್ಮರಣ