Site icon Vistara News

Namma Metro Pillar | ಮೆಟ್ರೋ ಪಿಲ್ಲರ್‌ ಕುಸಿತ: ಕಳಪೆ ಕಾಮಗಾರಿಯೇ, ಎಂಜಿನಿಯರ್‌ಗಳ ನಿರ್ಲಕ್ಷ್ಯವೇ: IISCಯಿಂದ ತನಿಖೆ

ಬೆಂಗಳೂರು: ಇಲ್ಲಿನ ನಾಗವಾರ ಸಮೀಪ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Namma Metro Pillar) ಕುಸಿತವಾಗಿ ತಾಯಿ-ಮಗು ದುರ್ಮರಣ ಹೊಂದಿದ್ದು, ಈ ಘಟನೆಗೆ ಎಂಜಿನಿಯರ್‌ಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಕಳಪೆ ಕಾಮಗಾರಿಯಿಂದಲೇ ಈ ರೀತಿ ಆಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಗೆ ನಿಜವಾದ ಕಾರಣ ಏನು ಎನ್ನುವ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೂಲಕ ತನಿಖೆ ನಡೆಸಲಾಗುವುದು ಎಂದು ಮೆಟ್ರೋ ಸಂಸ್ಥೆ ಹೇಳಿದೆ.

ನಮ್ಮ ಮೆಟ್ರೋ ಕಾಮಗಾರಿ ವೇಳೆ ಅಧಿಕಾರಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಇಂದು ನನ್ನ ಸೊಸೆ ಹಾಗೂ ಮೊಮ್ಮಗನನ್ನು ಕಳೆದುಕೊಂಡಿದ್ದೇನೆ ಎಂದು ಲೋಹಿತ್‌ ಅವರ ತಂದೆ ವಿಜಯಕುಮಾರ್‌ ಅಳಲು ತೋಡಿಕೊಂಡರು. ಕಳಪೆ ಕಾಮಗಾರಿಯ ವಿರುದ್ಧ ನಾವು ದೂರನ್ನು ಕೊಡುತ್ತೇವೆ ಕಾನೂನು ಹೋರಾಟ ಮಾಡುತ್ತೇವೆ, ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಘಟನಾ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಹೆಣ್ಣೂರು-ನಾಗವಾರ ಮೆಟ್ರೋ ರೈಲು ಮಾರ್ಗದಲ್ಲಿ ಈ ಅವಘಡ ಸಂಭವಿಸಿದೆ. ಮೇಲ್ನೋಟಕ್ಕೆ ಐರನ್ ಪಿಲ್ಲರ್‌ನ ರಚನಾತ್ಮಕ ಸಮಸ್ಯೆ (Structural problem) ಇರುವುದು ಕಂಡು ಬಂದಿದೆ. ತಾಂತ್ರಿಕ ಅಂಶಗಳ ಪರಿಶೀಲನೆ ಆಗಬೇಕಿದ್ದು, ಅದನ್ನು ತಜ್ಞರ ತಂಡ ಮಾಡಲಿದೆ ಎಂದರು.

ಗೋವಿಂದಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲು
ಇತ್ತ ಘಟನೆ ನಡೆಯುತ್ತಿದ್ದಂತೆ ಮೃತ ತೇಜಸ್ವಿನಿ ಪೋಷಕರು ಗೋವಿಂದಪುರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ಸಂಬಂಧ ತೇಜಸ್ವಿನಿ ಪತಿ ಲೋಹಿತ್ ಬಳಿ ಮಾಹಿತಿ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟ ಬಿಎಂಆರ್‌ಸಿಎಲ್‌ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ನಿರ್ಲಕ್ಷ್ಯ ಮಾಡಿರುವ ಆರೋಪದಡಿ IPC ಸೆಕ್ಷನ್ 337, 338, 304a, 427 RW 34 ಅಡಿ ಪ್ರಕರಣ ದಾಖಲಾಗಿದೆ.

ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದ ಬಿಎಂಆರ್‌ಸಿಎಲ್‌
ಘಟನೆ ನಡೆದು ನಾಲ್ಕು ಗಂಟೆ ಬಳಿಕ ಸ್ಥಳಕ್ಕೆ ಆಗಮಿಸಿದ ಬಿಎಂಆರ್‌ಸಿಎಲ್‌ ಎಂಡಿ ಅಂಜುಂ ಪರ್ವೇಜ್‌ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದರು. ಬಳಿಕ ಮಾತನಾಡಿದ ಅವರು ಈ ಘಟನೆಯಿಂದ ಬಹಳ ದುಃಖವಾಗಿದ್ದು, ತನಿಖೆ ಮಾಡಿಸುತ್ತೇವೆ.ಈ ರೀತಿ ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ, ಪ್ರಕರಣ ಸಂಬಂಧ ಅಧಿಕಾರಿಗಳಿಗೆ ನೋಟಿಸ್​ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಕಾಮಗಾರಿ ಸ್ಥಗಿತ
ಎರಡು-ಮೂರು ದಿನಗಳ ಕಾಲ ಕಾಮಗಾರಿ ಸ್ಥಗಿತಗೊಳಿಸುತ್ತೇವೆ ಎಂದು ಅಂಜುಂ ಪರ್ವೇಜ್‌ ತಿಳಿಸಿದ್ದಾರೆ. ಸಮಸ್ಯೆ ಯಾರ ಕಡೆಯಿಂದ ಆಗಿದೆ ಎಂದು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ವರದಿ ಬಂದ ಬಳಿಕ ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ತಜ್ಞರ ವರದಿ ಬಂದ ಬಳಿಕ ಅದರಂತೆ ಕೆಲಸ ನಡೆಯುತ್ತದೆ. ಈ ರೀತಿ ದುರಂತ ನಡೆದಿರುವುದು ಇದೇ ಮೊದಲು, ಎಲ್ಲ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಕೆಲಸ ಮಾಡಿದ್ದೇವೆ. ಘಟನೆ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಯಾಕೆ ಈ ರೀತಿ ಘಟನೆ ನಡೆದಿದೆ ಎಂದು ಮಾಹಿತಿ ಪಡೆಯುತ್ತೇವೆ ಎಂದರು.

ಇದನ್ನೂ ಓದಿ | Nagavara Metro Pillar | ಮೆಟ್ರೋ ಪಿಲ್ಲರ್‌ ರೂಪದಲ್ಲಿ ಕಾದು ಕುಳಿತಿತ್ತು ಮೃತ್ಯು; ಛಿದ್ರವಾಯಿತು ಸುಂದರ ಸಂಸಾರ

Exit mobile version