Site icon Vistara News

Naked parade : ಮಹಿಳೆ ವಿವಸ್ತ್ರ ಪ್ರಕರಣದ ಹಿಂದೆ ಜಾರಕಿಹೊಳಿ; ಬಿಜೆಪಿ ಸಮಿತಿ ಸಂಶಯ

BJP Team Fact finding

ಬೆಳಗಾವಿ: ಹೊಸ ವಂಟಮೂರಿ ಗ್ರಾಮದಲ್ಲಿ ಡಿ.11ರಂದು ರಾತ್ರಿ ಮಹಿಳೆಯನ್ನು ನಗ್ನಗೊಳಿಸಿ (Naked Parade) ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆಯ ಉಳಿದ ಆರೋಪಿಗಳನ್ನೂ ಬಂಧಿಸಬೇಕು ಎಂದು ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ಸತ್ಯಶೋಧನಾ ಸಮಿತಿಯ (BJP fact Finding Committee) ಸದಸ್ಯರಾದ ಸಂಸದೆ ಅಪರಾಜಿತಾ ಸಾರಂಗಿ (Aparajitha Sarangi) ಅವರು ಆಗ್ರಹಿಸಿದ್ದಾರೆ. ಜತೆಗೆ ಈ ಕೃತ್ಯದ ಹಿಂದೆ ಲೋಕೋಪಯೋಗಿ ಸಚಿವರಾಗಿರುವ ಸತೀಶ್‌ ಜಾರಕಿಹೊಳಿ (Satish Jarakiholi) ಮತ್ತು ಅವರ ಆಪ್ತರು ಇದ್ದಾರೆ ಎಂಬ ಗಂಭೀರ ಸಂಶಯವನ್ನು ಸಮಿತಿ ವ್ಯಕ್ತಪಡಿಸಿದೆ.

ಬೆಳಗಾವಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆದ ಸ್ಥಳ, ಊರು, ಮನೆ ಮತ್ತು ಮಹಿಳೆಯನ್ನು ಭೇಟಿ ಬಳಿಕ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಪರಾಧಿಗಳು ಹೊರಬರದಂತೆ ನೋಡಿಕೊಂಡು ಗ್ರಾಮದಲ್ಲಿರುವ ಭೀತಿಯ ವಾತಾವರಣವನ್ನು ಸರಿಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು. ಅಪರಾಧಿಗಳು ಹೊರಕ್ಕೆ ಬಂದರೆ ಕುಟುಂಬಕ್ಕೆ ಅಪಾಯವಿದೆ ಎಂಬ ಭಯ ಅಲ್ಲಿದೆ. ಮುಖ್ಯಮಂತ್ರಿ ಮತ್ತು ಅವರ ಸಂಪುಟವು ಗ್ರಾಮಕ್ಕೆ ಭೇಟಿ ಕೊಟ್ಟು ಜನರಿಗೆ ಸುರಕ್ಷತೆಯ ಭರವಸೆ ನೀಡಬೇಕು ಎಂದೂ ಅವರು ಆಗ್ರಹಿಸಿದರು.

ಘಟನೆಯ ಹಿಂದೆ ಲೋಕೋಪಯೋಗಿ ಇಲಾಖೆ ಸಚಿವರ ಕೈವಾಡ ಇದ್ದಂತಿದೆ ಎಂದು ಅಪರಾಜಿತಾ ಸಾರಂಗಿ ಆರೋಪಿಸಿದರು. ಗ್ರಾಮದ ಜನತೆ ಮಾತನಾಡಲು ಸಿದ್ಧರಿಲ್ಲ; ಅಲ್ಲಿನ ಜನರು ಭಯ, ಆತಂಕದಿಂದ ಬದುಕುತ್ತಿದ್ದಾರೆ ಎಂದು ವಿವರಿಸಿದರು.

ಮಧ್ಯರಾತ್ರಿ ಘಟನೆ ನಡೆದರೂ ಪೊಲೀಸರು ಬರಲು ವಿಳಂಬ ಮಾಡಿದ್ದೇಕೆ? ಆಸ್ಪತ್ರೆಗೆ ಕರೆದೊಯ್ಯಲು ವಿಳಂಬ ಮಾಡಿದ್ದೇಕೆ? ಲಾರಿ ಚಾಲಕರಾದ ಪತಿ ಹೊರಗಿದ್ದಾಗ ಈ ದುರ್ಘಟನೆ ನಡೆದಿದೆ. ಪೊಲೀಸರ ಉಪಸ್ಥಿತಿಯಲ್ಲೂ ಇದು ಮುಂದುವರೆಯಿತು. ಮಧ್ಯರಾತ್ರಿ ಇದೆಲ್ಲ ನಡೆದರೂ ಮರುದಿನ ಬೆಳಿಗ್ಗೆ 9 ಗಂಟೆಗೆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಅಪರಾಜಿತಾ ಟೀಕಿಸಿದರು.

ಇಡೀ ರಾಜ್ಯ ಸರಕಾರವೇ ಬೆಳಗಾವಿಯಲ್ಲಿ ಇದ್ದರೂ ಮುಖ್ಯಮಂತ್ರಿ, ಡಿಜಿಪಿ, ಮುಖ್ಯ ಕಾರ್ಯದರ್ಶಿಗಳು ಮಹಿಳೆ ನಗ್ನಗೊಳಿಸಿ ಥಳಿಸಿದ ಘಟನೆ ನಡೆದ ಸ್ಥಳಕ್ಕೆ ತಕ್ಷಣವೇ ಭೇಟಿ ಕೊಟ್ಟಿಲ್ಲವೇಕೆ, ಸಂತ್ರಸ್ತೆಯನ್ನು ಭೇಟಿ ಮಾಡಿಲ್ಲವೇಕೆ ಎಂದೂ ಅವರು ಕೇಳಿದರು.

ಮಾಧ್ಯಮ ಮಿತ್ರರೂ ಈ ಹಳ್ಳಿಗೆ ಭೇಟಿ ಕೊಡಬೇಕು ಎಂದು ಮನವಿ ಮಾಡಿದರು. ಈ ಘಟನೆ ನಡೆದುದೇಕೆ? ಎಂದು ಇಡೀ ದೇಶ ಪ್ರಶ್ನಿಸುತ್ತಿದೆ. ಕಾನೂನು- ವ್ಯವಸ್ಥೆ ಕುಸಿದಾಗ ಹೀಗಾಗುತ್ತದೆ. 15 ಜನರು ಮನೆಗೆ ನುಗ್ಗಿ ಮಹಿಳೆಯನ್ನು ವಿವಸ್ತ್ರಗೊಳಿಸಲು ಹೇಗೆ ಸಾಧ್ಯ? ಕಾಂಗ್ರೆಸ್ ಸರಕಾರ ಕಾನೂನು- ಸುವ್ಯವಸ್ಥೆ ವಿಚಾರದಲ್ಲಿ ವಿಫಲತೆ ಅನುಭವಿಸಿದೆ ಎಂದು ಟೀಕಿಸಿದರು.

ಸಂಸದೆ, ಸಮಿತಿ ಸದಸ್ಯೆ ಶ್ರೀಮತಿ ಸುನಿತಾ ದುಗ್ಗಲ್ ಅವರು ಮಾತನಾಡಿ, ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೇ ಈ ದುರ್ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಜನತೆ ಕಾಂಗ್ರೆಸ್‍ಗೆ ತಕ್ಕ ಉತ್ತರ ಕೊಡಲಿದ್ದಾರೆ ಎಂದು ತಿಳಿಸಿದರು. ಹೈಕೋರ್ಟ್, ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮುಖ್ಯಮಂತ್ರಿ ಮತ್ತು ಗೃಹಸಚಿವರು ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಪಾರದರ್ಶಕ ರೀತಿಯಲ್ಲಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಇಂಡಿ ಒಕ್ಕೂಟದ ನಾಯಕರು ಎಲ್ಲಿ ಹೋಗಿದ್ದಾರೆ ಎಂದೂ ಅವರು ಪ್ರಶ್ನಿಸಿದರು.

ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ವರದಿ ನೀಡಲಾಗುವುದು ಎಂದರು. ದುರ್ಘಟನೆಯ ತೀವ್ರತೆ ಗಮನಿಸಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಸಮಿತಿಯನ್ನು ಕಳುಹಿಸಿದ್ದಾಗಿ ವಿವರ ನೀಡಿದರು.

ಈ ಸಮಿತಿ ಸದಸ್ಯರು ಹಾಗೂ ಸಂಸದರಾದ ರಂಜಿತಾ ಕೋಲಿ, ಲಾಕೆಟ್ ಚಟರ್ಜಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರಾ ಅವರು ಉಪಸ್ಥಿತರಿದ್ದರು. ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಬಿಜೆಪಿ ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

Exit mobile version