Site icon Vistara News

ಸಿದ್ದರಾಮಯ್ಯ ಅವರು ಈ ಸಾರಿ ಗೆಲ್ಲೋದು ಬಿಡಿ, ಟಿಕೆಟ್‌ ಸಿಗೋದೇ ಡೌಟು ಎಂದ ನಳಿನ್‌ ಕುಮಾರ್‌ ಕಟೀಲ್‌!

Nalin katee

ಬಾಗಲಕೋಟೆ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗೋದು ಬಿಡಿ, ಈ ಸಾರಿ ಚುನಾವಣೆಯಲ್ಲಿ ಗೆಲ್ಲೋದೇ ಇಲ್ಲ. ಅಷ್ಟೇ ಯಾಕೆ ಅವರಿಗೆ ಈ ಬಾರಿ ಟಿಕೆಟ್‌ ಕೂಡಾ ಸಿಗುವುದು ಡೌಟು: ಹೀಗೆಂದು ಹೇಳಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌.

ಸಿದ್ದರಾಮಯ್ಯ ಅವರಿಗೆ ಯಾಕೆ ಟಿಕೆಟ್‌ ಸಿಗುವುದಿಲ್ಲ, ಅವರು ಯಾಕೆಗೆ ಗೆಲ್ಲುವುದಿಲ್ಲ ಎಂಬ ಬಗ್ಗೆಯೂ ನಳಿನ್‌ ಕುಮಾರ್‌ ಕಟೀಲ್‌ ಅವರು ತಮ್ಮ ವಾದ ಮುಂದಿಟ್ಟಿದ್ದಾರೆ. ಜತೆಗೆ ಬಿಜೆಪಿ ಸಿದ್ದರಾಮಯ್ಯ ಅವರನ್ನೇ ಯಾಕೆ ಟಾರ್ಗೆಟ್‌ ಮಾಡುತ್ತಿದೆ ಎನ್ನುವ ಪ್ರಶ್ನೆಗೂ ಉತ್ತರ ನೀಡಿದ್ದಾರೆ.

ಟಿಕೆಟ್‌ ಕೊಡದಿರಲು ಕಾರಣಗಳು
೧. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋತವರು, ವರುಣಾ ಕ್ಷೇತ್ರವನ್ನು ಕೈಬಿಟ್ಟವರು, ಬಾದಾಮಿ ಕ್ಷೇತ್ರದಲ್ಲಿ ಕಷ್ಟದಲ್ಲಿ ಗೆದ್ದವರು. ಈ ಬಾರಿ ಅವರು ಬಾದಾಮಿಯಲ್ಲಿ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಸುರಕ್ಷಿತ ಕ್ಷೇತ್ರ ಹುಡುಕುತ್ತಿದ್ದಾರೆ. ಕೋಲಾರದಲ್ಲಿ ನಿಂತರೂ ಅವರು ಗೆಲ್ಲುವುದು ಸಂಶಯವೆ.

೨. ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಾಕಷ್ಟು ತುಳಿದಿದ್ದಾರೆ. ಖರ್ಗೆ ಈಗ ಎಐಐಸಿ ಅಧ್ಯಕ್ಷರು. ಅವರಿಗೆ ಸ್ವಾಭಿಮಾನ ಇದ್ದರೆ ಖಂಡಿತವಾಗಿಯೂ ಸಿದ್ದರಾಮಯ್ಯ ಅವರಿಗೆ ಟಿಕೆಟ್‌ ಕೊಡುವುದಿಲ್ಲ. ಅವರು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿಯೇ ಮುಗಿಸ್ತಾರೆ.

೩. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಸಾಕಷ್ಟು ಜನಪ್ರಿಯತೆ ಹೊಂದಿರುವ ಕ್ಷೇತ್ರದಲ್ಲೇ ಗೆಲ್ಲಲಾಗುತ್ತಿಲ್ಲ ಎಂದರೆ ಅವರೆಂಥ ನಾಯಕ. ನಾಯಕ ಅಂದರೆ ಒಂದೆ ಒಂದು ಕಾಂಗ್ರೆಸ್‌ ಮತವಿಲ್ಲದ ಕ್ಷೇತ್ರದಲ್ಲೂ ಹೋಗಿ ಗೆದ್ದುಕೊಂಡುಬರುವಷ್ಟು ತಾಕತ್ತು ಇರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯಲ್ಲಿ ದೊಡ್ಡ ಅಂತರದಿಂದ ಗೆದ್ದ ಹಾಗೆ.

ಬಿಜೆಪಿಗೆ ಸಿದ್ದರಾಮಯ್ಯ ಅಂದ್ರೆ ಭಯವಾ
ಸಿದ್ದರಾಮಯ್ಯ ಅಂದರೆ ಬಿಜೆಪಿಗರಿಗೆ ಬಹಳ ಭಯ ಆವರಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಳಿನ್‌ ಕುಮಾರ್‌ ಕಟೀಲ್‌, ʻʻಸಿದ್ದರಾಮಯ್ಯ ಬಗ್ಗೆ ನಮಗೆ ಭಯವೇ ಇಲ್ಲ. ನಿಜಾಂದ್ರೆ ನಮಗೆ ಬಹಳ ಖುಷಿ ಇದೆ. ಬಿಜೆಪಿಗೆ ಹೆಚ್ಚು ವೋಟ್ ಬರುವುದೇ ಸಿದ್ದರಾಮಯ್ಯ ಮಾತಿನಿಂದ. ಎಲ್ಲಿಯವರೆಗೆ ರಾಹುಲ್ ಇರ್ತಾರೋ ಅಲ್ಲಿಯವರೆಗೆ ಕೇಂದ್ರದಲ್ಲಿ ಬಿಜೆಪಿ ಇರುತ್ತದೆ. ಎಲ್ಲಿಯವರೆಗೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಇರ್ತಾರೋ ಅಲ್ಲಿಯವರೆಗೆ ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತದೆʼʼ ಎಂದರು.

ʻʻಸಿದ್ದರಾಮಯ್ಯ ದುರಹಂಕಾರ ಬಿಡದೇ ಇದ್ದರೆ, ರಾಜಕೀಯ ಮುತ್ಸದ್ದಿಯಾಗಿದ್ದೂ ಈ ರೀತಿ ನಡೆದುಕೊಂಡರೆ ಅವರನ್ನು ಬಿಜೆಪಿ ಟಾರ್ಗೆಟ್ ಮಾಡುವುದು ಗ್ಯಾರಂಟಿʼʼ ಎಂದರು ನಳಿನ್‌.

ʻʻಕಾಂಗ್ರೆಸ್ ನಲ್ಲಿ ಅವರೇ ಒಂದು ಬದಿಗೆ ಸರಿಯುತ್ತಿದ್ದಾರೆ. ಪಕ್ಷದಲ್ಲಿ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಈಗ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡ್ತಿದಾರೆ. ಹಾಗಾಗಿ ನಮ್ಮ ಟಾರ್ಗೆಟ್ ಸಿದ್ದರಾಮಯ್ಯ ಅವರೇ ಆಗಬೇಕಲ್ವಾ? ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅನ್ನೋದು ಈಗ ಡಿಕೆಶಿಗೂ ಗೊತ್ತಾಗಿದೆ. ಹಾಗಾಗಿ, ಸಿದ್ದರಾಮಯ್ಯ ರಾಜಕೀಯವಾಗಿ ಹಾಳಾಗ್ತಾರೆ ಹಾಳಾಗ್ಲಿ ಅಂತಾ ಡಿಕೆಶಿಯೂ ಬಿಟ್ಟ ಬಿಟ್ಟಿದ್ದಾರೆʼʼ ಎಂದರು ನಳಿನ್‌ ಕುಮಾರ್‌.

ಭಯದಲ್ಲಿ ಬದುಕುತ್ತಿರುವ ಸಿದ್ದರಾಮಯ್ಯ
ರಾಜ್ಯದಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣ ಇದೆ.‌ ಹಾಗಾಗಿ ಕಾಂಗ್ರೆಸ್‌ಗೆ ಭಯ ಪ್ರಾರಂಭ ಆಗಿದೆ. ಸಿದ್ದರಾಮಯ್ಯಗೆ ಏನು ಭಯ ಇದೆ ಅಂದರೆ, ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಭಯ ಇದೆ! ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ʻʻಒಬ್ಬ ಮಾಜಿ ಸಿಎಮ್ ಆದವರು ಅವರ ಕ್ಷೇತ್ರದಲ್ಲಿ ಕಳೆದ ಬಾರಿ ಹೀನಾಯ ಸೋಲು ಕಂಡಿದ್ದಾರೆ‌‌‌. ಬಹಳಷ್ಟು ಅಹಂಕಾರ, ದುರ್ವರ್ತನೆ ತೋರಿಸ್ತಿದ್ದಾರೆ. ಐದು ವರ್ಷ ಸಿಎಮ್ ಆಗಿದ್ದ ಅವರಿಗೆ ಕಾಂಗ್ರೆಸ್ ಬೆಂಗಾವಲಾಗಿತ್ತು. ಆದರೂ ಪುನಃ ಪಕ್ಷವನ್ನು ಅಧಿಕಾರಕ್ಕೆ ತರಲು ಆಗಲಿಲ್ಲ. ಅವರು ಈ ಬಾರಿ ಬಾದಾಮಿ ಕ್ಷೇತ್ರದಲ್ಲಿ ನಿಲ್ಲುವ ಪರಿಸ್ಥಿತಿಯಲ್ಲಿಲ್ಲ. ಬೇರೆ ಕ್ಷೇತ್ರವನ್ನು ಹುಡುಕುವ ಸ್ಥಿತಿಗೆ ಬಂದಿದ್ದಾರೆ. ಅವರಿಗೆ ದಮ್ ಇದ್ದರೆ, ತಾಕತ್ ಇದ್ರೆ ಬಾದಾಮಿ ಕ್ಷೇತ್ರಕ್ಕೆ ನಿಂತು ನೋಡಲಿ. ಅಥವಾ ಚಾಮುಂಡಿ ಕ್ಷೇತ್ರದಲ್ಲಿ ಬಂದು ನೋಡಲಿ. ಮುಖ್ಯಮಂತ್ರಿ ಆದವರಿಗೆ ಅವರ ಕ್ಷೇತ್ರದಲ್ಲಿ ನಿಂತು ಗೆಲ್ಲುವ ಯೋಗ್ಯತೆ ಇಲ್ಲ ಅಂದರೆ ಬಾಕಿ ಉಳಿದವರ ಯೋಗ್ಯತೆ ಬಗ್ಗೆ ಮಾತಾಡುವ ಹಕ್ಕಿದೆಯಾ?ʼʼ ಎಂದು ಪ್ರಶ್ನಿಸಿದರು ನಳಿನ್‌ ಕುಮಾರ್‌ ಕಟೀಲ್‌.

ʻʻಸಿದ್ದರಾಮಯ್ಯ ಮೋದಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಆದರೆ, ಮೋದಿ ಹೋದಲ್ಲೆಲ್ಲ ಬಿಜೆಪಿ ಗೆಲ್ಲುತ್ತಾ ಬಂದಿದೆ. ಸಿದ್ದರಾಮಣ್ಣ, ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್‌ನ ಪರಿಸ್ಥಿತಿ ಹೇಗಾಗಿದೆ ಅಂದರೆ ರಾಹುಲ್ ಗಾಂಧಿಗೆ ಅಮೇಥಿಯಲ್ಲಿ ನಿಲ್ಲೋದಕ್ಕೆ ಆಗಲಿಲ್ಲ. ಅವರು ವಯಾನಾಡಿನಲ್ಲಿ ನಿಲ್ಲಬೇಕಾಯಿತು. ಸಿದ್ದರಾಮಣ್ಣ ಚಾಮುಂಡಿ ಕ್ಷೇತ್ರ ಬಿಟ್ಟು, ವರುಣಾ ಬಿಟ್ಟು ಬಾದಾಮಿಗೆ ಬಂದರು. ಇವತ್ತು ಕೋಲಾರ ಅಂತಿದಾರೆ. ಅಲ್ಲಿ ಇಲ್ಲಿ ಕ್ಷೇತ್ರ ಹುಡುಕುತ್ತಿದ್ದಾರೆ. ಎಲ್ಲಿಯೂ ಸ್ಥಿರವಿಲ್ಲʼʼ ಎಂದರು. ʻʻಯಡಿಯೂರಪ್ಪ ಅವರು ನಿರಂತರವಾಗಿ ಶಿಕಾರಿಪುರದಲ್ಲಿ ನಿಲ್ಲುತ್ತಿದ್ದಾರೆ. ಒಂದು ದಿನವೂ ಬಿಟ್ಟು ಹೋಗಲಿಲ್ಲ. ಅದು ಅವರ ತಾಕತ್ತುʼʼ ಎಂದರು ನಳಿನ್.

ಕಾಂಗ್ರೆಸ್‌ನಲ್ಲಿ ಮೂರು ಗುಂಪುಗಳಿವೆ
ಕಾಂಗ್ರೆಸ್‌ ತುಂಬಾ ಗೊಂದಲಗಳಿವೆ. ಬಿಜೆಪಿಯಲ್ಲಿ ಇಲ್ಲವೇ ಇಲ್ಲ. ಕಾಂಗ್ರೆಸ್‌ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಎರಡು ಗುಂಪುಗಳಿವೆ. ಈಗ ಖರ್ಗೆಯವರ ಮೂರನೇ ಗುಂಪು ಸೃಷ್ಡಿಯಾಗಿದೆ ಎಂದರು ನಳಿನ್‌.

ಯೋಗ್ಯತೆ, ಸ್ವಾಭಿಮಾನ, ನೈತಿಕತೆ ಇದ್ದರೆ..
ʻʻದೇವೇಗೌಡರು ಸಿದ್ದರಾಮಯ್ಯ ಅವರ ರಾಜಕೀಯ ಗುರುಗಳು. ಕಾಂಗ್ರೆಸ್ ಗೆ ಬರುವಾಗ ಗುರು ದೇವೇಗೌಡರ ಕೈಬಿಟ್ರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಗ್ಗೆ ಅತೀ ಹೆಚ್ಚು ಕೆಟ್ಟ ಶಬ್ದ ಬಳಸಿದ್ದು ಸಿದ್ದರಾಮಯ್ಯ. ಅಷ್ಟು ಕೆಟ್ಟ ಶಬ್ದ ಮಾತನಾಡಿದ ಅವರೇ ಮುಂದೆ ಸೋನಿಯಾ ಗಾಂಧಿ ಕಾಲು ಹಿಡಿದರು. ಯೋಗ್ಯತೆ, ನೈತಿಕತೆ, ಸ್ವಾಭಿಮಾನ ಇದ್ದರೆ ಕಾಲಿಗೆ ಬಿದ್ದು ಸಿಎಂ ಆಗುವ ಅವಶ್ಯಕತೆ ಸಿದ್ದರಾಮಯ್ಯಗೆ ಏನಿತ್ತುʼʼ ಎಂದು ಪ್ರಶ್ನಿಸಿದರು.

ʻʻಸಿದ್ದರಾಮಯ್ಯ ಅವರು ಖರ್ಗೆಯವರನ್ನು ಸೋಲಿಸಿದ್ರು. ಪರಮೇಶ್ವರ ಅವ್ರನ್ನು ಸೋಲಿಸಿದ್ರು. ಇಬ್ರನ್ನು ಸೋಲಿಸಿ ಮತ್ತೆ ಸಿಎಂ ಆಗಬೇಕು ಅಂತ ಬಯಸಿದ್ರು. ಜನ ಆಶೀರ್ವಾದ ಮಾಡಲಿಲ್ಲ. ೨೦೧೮ರಲ್ಲಿ ಬಿಜೆಪಿಗೆ ೧೦೪ ಸ್ಥಾನ ಕೊಟ್ರು. ಆಗ ಯಡಿಯೂರಪ್ಪ ಸಿಎಂ ಆಗ್ತಾರೆ ಅಂತಾ ತಮ್ಮ ವೈರಿಯೇ ಆದರೂ ಕುಮಾರಸ್ವಾಮಿ ಜೊತೆ ಸೇರಿ ಸರ್ಕಾರ ಮಾಡಿದ್ರು. ಒಂದೇ ವರ್ಷದಲ್ಲಿ ಕುಮಾರಸ್ವಾಮಿಗೆ ದ್ರೋಹ ಮಾಡಿದ್ರು. ಹಾಗಾಗಿ ಈ ರಾಜ್ಯದ ರಾಜಕೀಯ ಖಳನಾಯಕ ಯಾರು ಅಂದ್ರೆ ಅದು ಸಿದ್ದರಾಮಯ್ಯ. ರಾಜಕೀಯದಲ್ಲಿ ಯಾರನ್ನೂ ಬದುಕಲಿಕ್ಕೆ ಬಿಡಲ್ಲ ಈ ಸಿದ್ದರಾಮಯ್ಯ. ವಜ್ರಮುನಿಯೂ ಚಿತ್ರದಲ್ಲಿ ಹೀಗೆ ಮಾಡ್ತಿರಲಿಲ್ಲʼʼ ಎಂದು ನಳಿನ್‌ ವಾಗ್ದಾಳಿ ನಡೆಸಿದರು.

ಯತ್ನಾಳ್‌ ವಿಷಯದಲ್ಲಿ ಕಾದು ನೋಡಿ ಎಂದ ನಳಿನ್‌
ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಪದೇಪದೆ ಪಕ್ಷದ ನಾಯಕರ ವಿರುದ್ಧ ದಾಳಿ ಮಾಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಕೇಳಿದಾಗ, ಈ ಬಗ್ಗೆ ಸ್ಪಷ್ಟವಾದ ಉತ್ತರವನ್ನು ಅರುಣ್ ಸಿಂಗ್ ಅವರು ಕೊಟ್ಟಿದ್ದಾರೆ ಎಂದರು.

ʻʻಈಗಾಗಲೇ ಅವರಿಗೆ ಕೇಂದ್ರ ಸಮಿತಿಯಿಂದ ನೊಟೀಸ್ ಕೊಡಲಾಗಿದೆ. ನಮ್ಮಲ್ಲಿ ಒಂದು ಶಿಸ್ತು ಸಮಿತಿ ಅಂತ ಇದೆ. ಪ್ರಜಾಪ್ರಭುತ್ವ ಆಧಾರದಲ್ಲಿ ಪಾರ್ಟಿಗೆ ಒಂದು ನಿಯಮವಿದೆ. ಈಗಾಗಲೇ ಮೂರು ಬಾರಿ ನೊಟೀಸ್ ಕೊಡಲಾಗಿದೆ ಕಾದು ನೋಡಿʼʼ ಎಂದರು.

ಇದನ್ನೂ ಓದಿ | ನರಹಂತಕ ಸಿದ್ದರಾಮಯ್ಯ, ಖಳನಾಯಕ ಸಿದ್ದರಾಮಯ್ಯ: ತೀವ್ರ ವಾಗ್ದಾಳಿ ನಡೆಸಿದ ನಳಿನ್‌ ಕುಮಾರ್‌ ಕಟೀಲ್‌

Exit mobile version