ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಕರೆದೊಯ್ದು ಬಾಸುಂಡೆ ಬರುವಂತೆ ಥಳಿಸಿದ್ದಾರೆ.
ಚುನಾಔಣೆಯ ಸಂದರ್ಭದಲ್ಲಿ ಹೈಟೆನ್ಷನ್ ಕ್ಷೇತ್ರವಾಗಿದ್ದ ಪುತ್ತೂರಿನಲ್ಲಿ, ಬಿಜೆಪಿಯಿಂದ ಸಿಡಿದೆದ್ದಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಸ್ವತಂತ್ರವಾಗಿ ಸ್ಪರ್ಧಿಸಿ, ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಹಿಂದೂ ಕಾರ್ಯಕರ್ತರು ಅವರಿಗೆ ಬೆಂಬಲವಾಗಿ ನಿಂತಿದ್ದರು. ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಡಿ.ವಿ ಸದಾನಂದ ಗೌಡ ಅವರನ್ನು ಛೇಡಿಸುವ ಪೋಸ್ಟರ್ ಅನ್ನು ಹಿಂದೂ ಕಾರ್ಯಕರ್ತರು ಹಾಕಿದ್ದರು. ʼʼಬಿಜೆಪಿ ಹೀನಾಯವಾಗಿ ಸೋಲಲು ಕಾರಣರಾದ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿʼʼ ಎಂದು ಪೋಸ್ಟರ್‌ನಲ್ಲಿತ್ತು. ನಂತರ ಅದಕ್ಕೆ ಚಪ್ಪಲಿ ಹಾರ ಹಾಕಿದ್ದರು.
ಈ ಪ್ರಕರಣದ ಆರೋಪಿಗಳಾದ ಕಾರ್ಯಕರ್ತರಿಗೆ ಪೊಲೀಸರಿಂದ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ದೊರೆತಿದೆ. ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿ ಬೆನ್ನು, ಸೊಂಟದ ಹಿಂಭಾಗಕ್ಕೆ ಬಾಸುಂಡೆ ಬರುವ ರೀತಿಯಲ್ಲಿ ಪೊಲೀಸರು ಥಳಿಸಿದ್ದಾರೆ. ಪೊಲೀಸರ ಕಿರುಕುಳದಿಂದಾಗಿ ಎದ್ದು ನಡೆಯಲಾಗದ ಸ್ಥಿತಿಯಲ್ಲಿ ಕಾರ್ಯಕರ್ತರಿದ್ದಾರೆ. ಇವರನ್ನು ಅರುಣ್ ಕುಮಾರ್ ಪುತ್ತಿಲ ಬಿಡಿಸಿ ಕರೆದೊಯ್ದಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹರೀಶ್ ಪೂಂಜ ಭೇಟಿ
ಗಂಭೀರವಾಗಿ ಗಾಯಗೊಂಡಿರುವ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭೇಟಿ ಮಾಡಿದ್ದು, ಗಾಯಾಳುಗಳನ್ನು ವಿಚಾರಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ಬಂದರೆ ಏನಾಗುತ್ತದೆ ಎಂಬುದರ ಸ್ಯಾಂಪಲ್ ಎಂದಿದ್ದಾರೆ.
ಪೊಲೀಸರ ಈ ಅಮಾನವೀಯ ಕೃತ್ಯವನ್ನು ಖಂಡಿಸುತ್ತೇನೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪೊಲೀಸರ ಮನಸ್ಥಿತಿ ಯಾವ ರೀತಿ ಇದೆ ಅಂತ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ನಡೆದಿರುವ ದೌರ್ಜನ್ಯವನ್ನು ವಿರೋಧಿಸಿ ಒಬ್ಬ ಶಾಸಕನಾಗಿ ಅದರ ವಿರುದ್ಧ ಹೋರಾಟ ಮಾಡುತ್ತೇನೆ. ದ.ಕ. ಜಿಲ್ಲಾ ಎಸ್ಪಿಗೆ ಈ ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ. ಯಾವ ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿ ದೌರ್ಜನ್ಯ ಮಾಡಿದ್ದಾರೋ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ; ಇಂದು ಸಂಜೆಯೊಳಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬಿಜೆಪಿ, ಸಂಘ ಪರಿವಾರ ಸೇರಿದಂತೆ ಹಿಂದೂ ಸಮಾಜ ಹೋರಾಟ ಮಾಡುತ್ತೇವೆ ಎಂದು ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Puttur Election Results: ಪುತ್ತೂರಿನಲ್ಲಿ ಪುತ್ತಿಲರ ವೀರೋಚಿತ ಸೋಲು; ಗೆಲುವು ಕಂಡ ಅಶೋಕ್ ಕುಮಾರ್ ರೈ